ಈ ಬಾರಿ ಐದಲ್ಲ, ಮೂರೇ ದಿನ ಗಣೇಶೋತ್ಸವ: ಬಿಬಿಎಂಪಿ ಮಾರ್ಗಸೂಚಿ ಪ್ರಕಟ

ಗಣೇಶೋತ್ಸವವನ್ನು ಐದು ದಿನಗಳ ಕಾಲ ಆಚರಿಸಲು ಸರ್ಕಾರ ಅನುಮತಿ ನೀಡಿದ್ದರೂ, ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಾತ್ರ ಮೂರು ದಿನಗಳ ಕಾಲ ಸರಳ ಹಾಗೂ ಪರಿಸರ ಸ್ನೇಹಿಯಾಗಿ ಆಚರಿಸಲು ಅವಕಾಶ ನೀಡಿ ಪಾಲಿಕೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಗಣೇಶೋತ್ಸವವನ್ನು ಐದು ದಿನಗಳ ಕಾಲ ಆಚರಿಸಲು ಸರ್ಕಾರ ಅನುಮತಿ ನೀಡಿದ್ದರೂ, ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಾತ್ರ ಮೂರು ದಿನಗಳ ಕಾಲ ಸರಳ ಹಾಗೂ ಪರಿಸರ ಸ್ನೇಹಿಯಾಗಿ ಆಚರಿಸಲು ಅವಕಾಶ ನೀಡಿ ಪಾಲಿಕೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. 

ಕೊರೋನಾ ಸೋಂಕು ಹರಡುವಿಕೆ ತಡೆಗೆ ಗಣೇಶ ಚತುರ್ಥಿ ಹಬ್ಬವನ್ನು ತಮ್ಮ ಮನೆಗಳಲ್ಲಿ ಅಥವಾ ಸರ್ಕಾರಿ, ಖಾಸಗಿ ಸಾರ್ವಜನಿಕ ಬಯಲು ಪ್ರದೇಶಗಳಲ್ಲಿ ಸರಳವಾಗಿ ಕನಿಷ್ಠ ಸಂಖ್ಯೆಯೊಂದಿಗೆ ಆಚರಿಸಲು ಅವಕಾಶ ನೀಡಲಾಗಿದೆ. ಗಣೇಶ ಉತ್ಸವವನ್ನು ಸರಳವಾಗಿ ಆಚರಿಸುವ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಪಾಲಿಕೆಯ ವಲಯ ಜಂಟಿ ಆಯುಕ್ತರು ಸೂಕ್ತ ಕ್ರಮಕೈಗೊಳ್ಳಲಬೇಕೆಂದು ಸೂಚಿಸಲಾಗಿದೆ. 

ನಿನ್ನೆಯಷ್ಟೇ ಸುದ್ದಿಗಾರರೊಂದಿಗೆ ಮಾತನಾಡಿ ಮಾಹಿತಿ ನೀಡಿದ ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು, ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಯನ್ನು 4 ಅಡಿ ಎತ್ತರ ಮೀರದಂತೆ ಹಾಗೂ ಮನೆಯೊಳಗೆ 2 ಅಡಿ ಮೀರದಂತೆ ಪ್ರತಿಷ್ಠಾಪಿಸಬೇಕು. ಪಾಲಿಕೆ 198 ವಾರ್ಡ್ ಗಳಲ್ಲಿ ವಾರ್ಡಿಗೆ ಒಂದರಂತೆ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪಿಸಬೇಕು. ಸ್ಥಳೀಯ ಪೊಲೀಸ್ ಇನ್ಸ್ ಪೆಕ್ಟರ್, ಪಾಲಿಕೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಮತ್ತು ಹಿರಿಯ ಆರೋಗ್ಯ ಪರಿವೀಕ್ಷಕರನ್ನು ಒಳಗೊಂಡ ಸಮಿತಿಯು ಸ್ಥಳ ನಿಗದಿಪಡಿಸಬೇಕು. ನಂತರ ವಿಭಾಗದ ಕಾರ್ಯಪಾಲಕ ಅಭಿಯಂತರರಿಂದ ಅನುಮತಿ ಪಡೆಯಬೇಕು ಎಂದು ತಿಳಿಸಿದರು. 

ಮಾರ್ಗಸೂಚಿಯು ಇಂತಿದೆ...

  • ಗಣೇಶಚತುರ್ಥಿ ಹಬ್ಬವನ್ನು ಸರಳ ರೀತಿಯಲ್ಲಿ ಭಕ್ತಿಪೂರ್ವಕವಾಗಿ ತಮ್ಮ-ತಮ್ಮ ಮನೆಗಳಲ್ಲಿ ಅಥವಾ ಸರ್ಕಾರಿ/ಖಾಸಗಿ ಸಾರ್ವಜನಿಕ ಬಯಲು ಪ್ರದೇಶಗಳಲ್ಲಿ ಕನಿಷ್ಠ ಸಂಖ್ಯೆಯೊಂದಿಗೆ ಆಚರಿಸುವುದು. ಈ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲು ಪಾಲಿಕೆಯ ವಲಯಜಂಟಿ ಆಯುಕ್ತರುಗಳು ಸೂಕ್ತ ಕ್ರಮವಹಿಸುವುದು.
  • ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಯನ್ನು 4 ಅಡಿ ಎತ್ತರ ಮೀರದಂತೆ ಹಾಗೂ ಮನೆಯೊಳಗೆ 2 ಅಡಿ ಮೀರದಂತೆ ಪ್ರತಿಷ್ಠಾಪಿಸುವುದು.
  • ಪಾಲಿಕೆಯ 198 ವಾರ್ಡ್ಗಳಲ್ಲಿ ವಾರ್ಡಿಗೆ ಒಂದರAತೆ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಅವಕಾಶವಿರುತ್ತದೆ. ಈ ಸಂಬಂಧ ಆಯಾ ವಾರ್ಡ್ ವ್ಯಾಪ್ತಿಯಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಸ್ಥಳೀಯ ಪೊಲೀಸ್ ಇನ್ಸ್ಪೆಕ್ಟರ್‌ಗಳು, ಪಾಲಿಕೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಮತ್ತು ಹಿರಿಯ ಆರೋಗ್ಯ ಪರಿವೀಕ್ಷಕರನ್ನು ಒಳಗೊಂಡ ಸಮಿತಿಯು ಸ್ಥಳ ನಿಗದಿಪಡಿಸಬೇಕು. ನಂತರ ವಿಭಾಗದ ಕಾರ್ಯಪಾಲಕ ಅಭಿಯಂತರರು ಅನುಮತಿ ಆದೇಶವನ್ನು ನೀಡುವುದು.
  • ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಕುರಿತು ಸ್ಥಳೀಯ ಗಣೇಶೋತ್ಸವ ಮಂಡಳಿ/ಸಂಘ-ಸಂಸ್ಥೆಗಳೊಂದಿಗೆ ದಿನಾಂಕ: 07-09-2021 ರೊಳಗೆ ಸಭೆಯನ್ನು ನಡೆಸಿ ಗಣೇಶ ಪ್ರತಿಷ್ಠಾಪನೆಯ ಅನುಮತಿ ಆದೇಶವನ್ನು ದಿನಾಂಕ: 08-09-2021 ರೊಳಗೆ ವಿಭಾಗೀಯ ಕಾರ್ಯಪಾಲಕ ಅಭಿಯಂತರರು ನೀಡತಕ್ಕದ್ದು. ಗಣೇಶ ಪ್ರತಿಷ್ಠಾಪನೆಗೆ ಅನುಮತಿ ನೀಡಿದ ಸ್ಥಳಗಳ ಪಟ್ಟಿಯನ್ನು ವಲಯ ಆಯುಕ್ತರು/ಜಂಟಿ ಆಯುಕ್ತರಿಗೆ ಸಲ್ಲಿಸುವುದು.
  • ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ಯಾವುದೇ ಅಡ್ಡಿಯಾಗದಂತೆ ಗಣೇಶ ಪ್ರತಿಷ್ಠಾಪಿಸಬೇಕು. ಇದಕ್ಕೆ ಆಯಾ ವಾರ್ಡ್ ವ್ಯಾಪ್ತಿಯಲ್ಲಿ ಬರುವ ಸಂಚಾರಿ ಪೊಲೀಸ್ ವಿಭಾಗವು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು.
  • ಪ್ರತಿಷ್ಠಾಪನ ಸ್ಥಳದಳಲ್ಲಿ 20 ಜನಕ್ಕೆ ಸೀಮಿತವಾದ ಆವರಣವನ್ನು ನಿರ್ಮಿಸುವುದು. ಒಮ್ಮೆಲೆ 20 ಕ್ಕಿಂತ ಹೆಚ್ಚಿನ ಜನ ಸೇರದಂತೆ ಭಕ್ತಾಧಿಗಳಿಗೆ ಅನುವು ಮಾಡುವುದು. ಹಾಗೂ ಗಣೇಶ ಪ್ರತಿಷ್ಠಾಪಿಸುವ ಸ್ಥಳದಲ್ಲಿ ಕೋವಿಡ್ ನಿಯಮಗಳ ಅನುಸರಣೆ ಮಾಡುವ ಸಲುವಾಗಿ ಪೊಲೀಸ್ ಇಲಾಖೆಯಿಂದ ಹೋಂ ಗಾರ್ಡ್ಗಳನ್ನು ನಿಯೋಜಿಸುವುದು. ಹಾಗೂ ಪಾಲಿಕೆ ವತಿಯಿಂದ ಮಾರ್ಷಲ್‌ಗಳನ್ನು ನಿಯೋಜಿಸಿ ಕೋವಿಡ್ ಸಮುಚಿತ ವರ್ತನೆಯ ಉಲ್ಲಂಘನೆ ಕಂಡುಬಂದಲ್ಲಿ ದಂಡ ವಿಧಿಸುವುದು.
  • ಪ್ರತಿಷ್ಠಾಪನೆ ಸ್ಥಳದಲ್ಲಿ ಯಾವುದೇರೀತಿಯ ಸಾಂಸ್ಕೃತಿಕ/ಸಂಗೀತ/ನೃತ್ಯ/ಡಿ.ಜೆ ಸೆಟ್ ಹಾಗೂ ಇನ್ನಿತರೆ ಯಾವುದೇ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲು ಅವಕಾಶವಿರುವುದಿಲ್ಲ. ಹಾಗೂ ಡಿ.ಜೆ ಸೆಟ್/ಧ್ವನಿವರ್ಧಕಗಳನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ.
  • ಆಯೋಜಕರು ಕೊವಿಡ್-19ರ ನೆಗೆಟಿವ್ ರಿಪೋರ್ಟ್ ಮತ್ತು ಲಸಿಕೆ ಪಡೆದಿರುವ ಬಗ್ಗೆ ಪ್ರಮಾಣ ಪತ್ರವನ್ನು ಹೊಂದಿರುವುದು ಕಡ್ಡಾಯ. ಹಾಗೂ ಶ್ರೀ ಗಣೇಶ ಆಚರಣೆಯ ಆಯೋಜಿತ ಸ್ಥಳಗಳಲ್ಲಿ ಸ್ಥಳೀಯ ಮಟ್ಟದಲ್ಲಿ ಆಯೋಜಕರು ಲಸಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದು. ಈ ಕಾರ್ಯವನ್ನು ಆರೋಗ್ಯ ವೈದ್ಯಾಧಿಕಾರಿಗಳು ಮೇಲ್ವಿಚಾರಣೆ ಮಾಡುವುದು.
  • ಬೆಂಗಳೂರು ನಗರದಲ್ಲಿ ಗರಿಷ್ಠ 3 ದಿನಗಳ ಕಾಲ ಗಣೇಶೋತ್ಸವವನ್ನು ಆಚರಿಸಲು ಅನುಮತಿಸಿಲಾಗಿದೆ. ಗಣೇಶ ಮೂರ್ತಿಗಳನ್ನು ತರುವಾಗ, ಪೂಜೆ ಮಾಡುವ ಸಮಯ ಹಾಗೂ ವಿಸರ್ಜಿಸುವಾಗ ಯಾವುದೇ ಕಾರಣಕ್ಕಾಗಲಿ ಅಥವಾ ಯಾವುದೇ ಸಂದರ್ಭದಲ್ಲಿ ಯಾವುದೇ ಮೆರವಣಿಗೆಯನ್ನು ಹೊರಡಿಸಕ್ಕದಲ್ಲ/ಮಾಡತಕ್ಕದ್ದಲ್ಲ. ಇದನ್ನು ಸಂಪೂರ್ಣವಾಗಿ ನಿರ್ಬಂಧಿಸಿದ್ದು, ಸ್ಥಳೀಯ ಪೊಲೀಸ್ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು.
  • ಪಾಲಿಕೆ ವ್ಯಾಪ್ತಿಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರೀಸ್ ವಸ್ತುಗಳನ್ನು ಬಳಸಿ ಗಣೇಶ ಮೂರ್ತಿ ತಯಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಸದರಿ ವಸ್ತುಗಳನ್ನು ಬಳಸಿ ತಯಾರಿಸಿ, ಮಾರಾಟ ಮಾಡುವ ಸ್ಥಳಗಳ ಮೇಲೆ ಸ್ಥಳೀಯ ಪೊಲೀಸ್ ಅಧಿಕಾರಿಗಳ ಜೊತೆಗೆ ಪಾಲಿಕೆಯ ಆರೋಗ್ಯ ವೈದ್ಯಾಧಿಕಾರಿಗಳು/ಸಹಾಯಕ ಕಾರ್ಯಪಾಲಕ ಅಭಿಯಂತರರು(ಘನತ್ಯಾಜ್ಯ ನಿರ್ವಹಣೆ) ಕ್ರಮಕೈಗೊಂಡು ಸದರಿರವರಿಗೆ ದಂಡ ವಿಧಿಸುವುದು.
  • ಪಾರಂಪರಿಕ ಗಣೇಶ ಮೂರ್ತಿ ಮತ್ತು ಮನೆಯಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳನ್ನು ನಿಮ್ಮ ಮನೆಗಳಲ್ಲಿ ಅಥವಾ ಪಾಲಿಕೆಯ ಮೊಬೈಲ್ ಟ್ಯಾಂಕರ್‌ಗಳಲ್ಲಿ ವಿಸರ್ಜಿಸುವುದು.
  • ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳನ್ನು ಅತೀ ಕನಿಷ್ಟ ಜನರು ಬಿಬಿಎಂಪಿ/ಕರ್ನಾಟಕರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಆಯೋಜಿಸಲಾಗಿರುವ ಹತ್ತಿರದ ಹೊಂಡ/ಪಾಲಿಕೆಯ ಮೊಬೈಲ್ ಟ್ಯಾಂಕ್‌ಗಳಲ್ಲಿ ವಿಸರ್ಜಿಸುವುದು.
  • ಮನೆಗಳಲ್ಲಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಗಳ ವಿಸರ್ಜನೆಗಾಗಿ ಆಯಾ ವಾರ್ಡ್ಗಳಲ್ಲಿ ನಿಯೋಜಿಸುವ ಮೊಬೈಲ್ ಟ್ಯಾಂಕರ್‌ಗಳಿಗೆ ಧ್ವನಿವರ್ಧಕಗಳನ್ನು ಅಳವಡಿಸಿ ಮಾಹಿತಿ ನೀಡುವ ಸಲುವಾಗಿ ಕಾರ್ಯಪಾಲಕ ಅಭಿಯಂತರರು ಅಗತ್ಯ ಕ್ರಮವಹಿಸುವುದು.
  • ಗಣೇಶ ಚತುರ್ಥಿ ಆಚರಿಸುವ ದೇವಸ್ಥಾನ/ಸಾರ್ವಜನಿಕ ಸ್ಥಳಗಳಲ್ಲಿ ದಿನನಿತ್ಯ ಸ್ಯಾನಿಟೈಸೇಷನ್ ಮಾಡುವುದು ಹಾಗೂ ಸಾರ್ವಜನಿಕ ದರ್ಶನಕ್ಕಾಗಿ ಆಗಮಿಸುವ ಭಕ್ತಾಧಿಗಳಿಗೆ ಸಾನಿಟೈಸರ್ ಹಾಗೂ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆಯನ್ನು ಕಲ್ಪಿಸುವುದು. ಸದರಿ ವ್ಯವಸ್ಥೆಯನ್ನು ಆರೋಗ್ಯ ವೈದ್ಯಾಧಿಕಾರಿಗಳು ಮೇಲ್ವಿಚಾರಣೆ ಮಾಡುವುದು.
  • ದರ್ಶನಕ್ಕಾಗಿ ಬರುವ ಭಕ್ತಾಧಿಗಳಿಗೆ ಕನಿಷ್ಟ 06 ಅಡಿ ಸಾಮಾಜಿಕ ಅಂತರವನ್ನು ಗುರುತಿಸುವುದು ಹಾಗೂ ಅದನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು. ಅರ್ಚಕರು/ದೇವಾಲಯದ ಸಿಬ್ಬಂದಿಗಳು/ ಆಯೋಜಕರು/ ಭಕ್ತಾಧಿಗಳು ಮತ್ತು ಸಾರ್ವಜನಿಕರು ಕಡ್ಡಾಯವಾಗಿ ಮುಖಗವಸು ಧರಿಸಿರತಕ್ಕದ್ದು. ಕೋವಿಡ್ ನಿಯಮ ಪಾಲನೆ ಬಗ್ಗೆ ಪೊಲೀಸ್/ಮಾರ್ಷಲ್‌ಗಳು ನಿಗಾವಹಿಸುವುದು.
  • ರಾಷ್ಟ್ರೀಯ ನಿರ್ದೇಶನಗಳನ್ನು ಹಾಗೂ ರಾಜ್ಯ ಸರ್ಕಾರದ ಆದೇಶ/ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾಕಾಯ್ದೆ 2005 ಹಾಗೂ ಭಾರತೀಯ ದಂಡ ಸಂಹಿತೆ ಸೆಕ್ಷನ್ 188ರ ಅಡಿಯಲ್ಲಿ ಶಿಸ್ತಿನ/ಕಾನೂನು ಕ್ರಮ ಮತ್ತು ಅನ್ವಯವಾಗಹುದಾದ ಇತರೆ ಕಾನೂನು ಉಪಬಂಧಗಳ ಮೇರೆಗೆ ಪಾಲಿಕೆ ವಲಯ ಜಂಟಿ ಆಯುಕ್ತರುಗಳು ಕ್ರಮ ಜರುಗಿಸುವುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com