ನಗರದಲ್ಲಿ ಮಳೆ
ನಗರದಲ್ಲಿ ಮಳೆ

ಬಿಸಿಲಿನ ಧಗೆಯಿಂದ ತತ್ತರಿಸಿದ್ದ ಸಿಲಿಕಾನ್ ಸಿಟಿಗೆ ತಂಪೆರೆದ ಮಳೆರಾಯ

ಬಹುದಿನಗಳಿಂದ ಬಿಸಿಲು ಆವರಿಸಿದ್ದ ಸಿಲಿಕಾನ್ ಸಿಟಿ ಬೆಂಗಳೂರಿಗೆ ಬುಧವಾರ ಸುರಿದ ಮಳೆ ತಂಪೆರೆಯಿತು. 

ಬೆಂಗಳೂರು: ಬಹುದಿನಗಳಿಂದ ಬಿಸಿಲು ಆವರಿಸಿದ್ದ ಸಿಲಿಕಾನ್ ಸಿಟಿ ಬೆಂಗಳೂರಿಗೆ ಬುಧವಾರ ಸುರಿದ ಮಳೆ ತಂಪೆರೆಯಿತು. 

ಬೆಳಿಗ್ಗೆಯಿಂದಲೂ ಬಹುತೇಕ ಕಡೆಗಳಲ್ಲಿ ಮೋಡ ಕವಿದ ವಾತಾವರಣವೇ ನಿರ್ಮಾಣವಾಗಿತ್ತು. ಸಂಜೆ ವೇಳೆಗೆ ನಗರದ ಲಕ್ಕಸಂದ್ರ ಹಾಗೂ ಕೆಂಗೇರೆ ವ್ಯಾಪ್ತಿಯಲ್ಲಿ ಅಧಿಕ ಮಳೆ ಸುರಿದಿದೆ.
 
ಮಧ್ಯಾಹ್ನದ ನಂತರ ಜಕ್ಕೂರು, ಮಹದೇವಪುರ, ಯಲಹಂಕ, ಹೆಬ್ಬಾಳ, ಬೊಮ್ಮನಹಳ್ಳಿ, ಶಾಂತಿನಗರ, ಸಂಪಂಗಿರಾಮನಗರ, ಮೆಜೆಸ್ಟಿಕ್, ರಾಜಾಜಿನಗರ, ನಾಯಂನಹಳ್ಳಿ, ಮಲ್ಲೇಶ್ವರಂ ಸೇರಿದಂತೆ ಬಹುತೇಕ ಪ್ರದೇಶದಲ್ಲಿ ತುಂತುರು ಮಳೆಯಾಗಿದೆ. 

ರಾತ್ರಿಯಿಡೀ ನಗರದಲ್ಲಿ ಅಲ್ಲಲ್ಲಿ ಚದುರಿದಂತೆ ಹಗುರ ರೂಪದಲ್ಲಿ ಮಳೆ ಮುಂದುವರೆಯಿತು. ಕಳೆದ ಕೆಲವು ದಿನಗಳಿಂದ ನಗರದ ನಿವಾಸಿಗಳು ಬಿಸಿಲಿನ ಉರಿಗೆ ತತ್ತರಿಸಿದ್ದರು. ಬುಧವಾರ ಸುರಿದ ಸಾಧಾರಣ ಮಳೆಗೆ ತಾಪಮಾನದಲ್ಲಿ ಕೊಂಚ ಇಳಿಕೆಯಾಯಿತು. 

ಮಳೆಯಿಂದ ರಸ್ತೆ ಬದಿ ವ್ಯಾಪಾರಿಗಳಿಗಳಿಗೆ, ಸಾರ್ವಜನಿಕರಿಗೆ ಕಿರಿಕಿರಿ ಉಂಟಾಯಿತು. ಮೆಟ್ರೋ, ಮೇಲ್ಸೇತುವೆ ಕಾಮಗಾರಿ ಸ್ಥಳಗಳ ಪಕ್ಕದ ರಸ್ತೆ ಮೂಲಕ ಹಾದು ಹೋಗುವಾಗ ವಾಹನ ಸವಾರರು ಪರದಾಡಿದರು. 

ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರಿದಿದ್ದರೂ ಹಲವೆಡೆ ಮಳೆ ಸುರಿದಿದೆ. ಶಿವಮೊಗ್ಗ, ಚಿಕ್ಕಮಗಳೂರು, ಶಿರಸಿ ಜಿಲ್ಲೆಗಳಲ್ಲಿ ಕಳೆದೆರಡು ದಿನಗಳಲ್ಲಿ ಮಳೆಯಾಗಿದೆ. ದಕ್ಷಿಣ ಒಳನಾಡಿನ ಶಿವಮೊಗ್ಗ, ಉತ್ತರ ಕನ್ನಡ, ಮಂಗಳೂರು, ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಇನ್ನೂ ಎರಡು ದಿನಗಳ ಕಾಲ ಮಳೆಯಾಗುವ ಲಕ್ಷಣ ಇದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್‌ ಪಾಟೀಲ್‌ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯಲಿದ್ದು, ಒಂದೆರಡು ಕಡೆಗಳಲ್ಲಿ ಭಾರೀ ಮಳೆ ನಿರೀಕ್ಷಿಸಬಹುದು, ಮಿಕ್ಕಂತೆ ಎರಡು ಮೂರು ದಿನ ಸಾಧಾರಣ ಮಳೆಯಾಗಲಿದೆ ಎಂದು ತಿಳಿಸಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com