'ಮೊನೊಕ್ಲೋನಲ್ ಆ್ಯಂಟಿಬಾಡಿ ಥೆರಪಿ' ತೆಗೆದುಕೊಂಡಿದ್ದ 'ಓಮಿಕ್ರಾನ್' ಸೋಂಕಿತ ವೈದ್ಯ ಈಗ ಫುಲ್ 'ಫಿಟ್ ಅಂಡ್ ಫೈನ್'!

ಇಡೀ ಜಗತನ್ನು ಆತಂಕಕ್ಕೀಡು ಮಾಡಿರುವ ಓಮಿಕ್ರಾನ್ ರೂಪಾಂತರ ಸೋಂಕಿಗೆ 'ಮೊನೊಕ್ಲೋನಲ್ ಆ್ಯಂಟಿಬಾಡಿ ಥೆರಪಿ' ಚಿಕಿತ್ಸೆಯಾಗಬಹುದೇ ಎಂಬ ಸಣ್ಣದೊಂದು ಆಶಾವಾದ ಇದೀಗ ತಲೆ ಎತ್ತಿದ್ದು, ಇದಕ್ಕೆ ಕಾರಣ ರಾಜ್ಯದಲ್ಲಿ ಪತ್ತೆಯಾದ ಓಮಿಕ್ರಾನ್ ಸೋಂಕಿತ ವೈದ್ಯ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಇಡೀ ಜಗತನ್ನು ಆತಂಕಕ್ಕೀಡು ಮಾಡಿರುವ ಓಮಿಕ್ರಾನ್ ರೂಪಾಂತರ ಸೋಂಕಿಗೆ 'ಮೊನೊಕ್ಲೋನಲ್ ಆ್ಯಂಟಿಬಾಡಿ ಥೆರಪಿ' ಚಿಕಿತ್ಸೆಯಾಗಬಹುದೇ ಎಂಬ ಸಣ್ಣದೊಂದು ಆಶಾವಾದ ಇದೀಗ ತಲೆ ಎತ್ತಿದ್ದು, ಇದಕ್ಕೆ ಕಾರಣ ರಾಜ್ಯದಲ್ಲಿ ಪತ್ತೆಯಾದ ಓಮಿಕ್ರಾನ್ ಸೋಂಕಿತ ವೈದ್ಯ..

ಹೌದು..ಬೆಂಗಳೂರಿನಲ್ಲಿ ಟ್ರಾವೆಲ್ ಹಿಸ್ಟರಿ ಇಲ್ಲದೇ ಓಮಿಕ್ರಾನ್ ಸೋಂಕಿಗೆ ತುತ್ತಾಗಿ 'ಮಿಸ್ಚರಿ'ಗೆ ಕಾರಣವಾಗಿದ್ದ ಅದೇ ಸೋಂಕಿತ ವೈದ್ಯ ಇದೀಗ ತಜ್ಞರ ಕೇಂದ್ರ ಬಿಂದುವಾಗಿದ್ದು, ಕಾರಣ ಈಗ ಆ ವೈದ್ಯ ಫುಲ್ ಫಿಟ್ ಅಂಡ್ ಫೈನ್ ಆಗಿದ್ದಾರೆ. ಆಸ್ಪತ್ರೆಗೆ ದಾಖಲಾಗದೇ, ವೈದ್ಯರಿಂದ ಚಿಕಿತ್ಸೆ ಪಡೆದೇ ಆ ವೈದ್ಯ ಗುಣಮುಖರಾಗಿದ್ದು ಹೇಗೆ ಎಂಬ ಕುತೂಹಲಕಾರಿ ಅಂಶ ಇದೀಗ ಎಲ್ಲರ ತಲೆಯಲ್ಲಿ ಓಡಾಡುತ್ತಿದೆ. ಈ ಪ್ರಶ್ನೆಗಳಿಗೆ ಸ್ವತಃ ಆ ವೈದ್ಯರೇ ಉತ್ತರ ನೀಡಿದ್ದು, ಸೋಂಕಿಗೆ ತುತ್ತಾದ ಬಳಿಕ ತಾವು 'ಮೊನೊಕ್ಲೋನಲ್ ಆ್ಯಂಟಿಬಾಡಿ ಥೆರಪಿ' ತೆಗೆದುಕೊಂಡಿದ್ದಾಗೆ ವೈದ್ಯರು ಹೇಳಿದ್ದಾರೆ.

ಸೋಂಕಿಗೆ ತುತ್ತಾಗಿ ರೋಗ ಲಕ್ಷಣಗಳು ಸೌಮ್ಯವಾಗಿದ್ದರೆ ಕೆಲವರು ಗುಣವಾಗುತ್ತದೆ ಎಂದು ಆ ಬಗ್ಗೆ ನಿರ್ಲಕ್ಷ್ಯವಹಿಸುತ್ತಾರೆ. ಆದರೆ ಈ ವೈದ್ಯ ಹಾಗೆ ನಿರ್ಲಕ್ಷ್ಯವಹಿಸದೇ ತೀವ್ರತೆಯ ಅಪಾಯವನ್ನು ತಡೆಗಟ್ಟಲು ಈ 'ಮೊನೊಕ್ಲೋನಲ್ ಆ್ಯಂಟಿಬಾಡಿ ಥೆರಪಿ' ಚಿಕಿತ್ಸೆಯನ್ನು ತೆಗೆದುಕೊಂಡರು. ಈ ಹಿಂದೆ ಡೆಲ್ಟಾ ರೂಪಾಂತರದಿಂದ ಉದ್ಭವವಾಗಿದ್ದ ಕೋವಿಡ್ ಸಾಂಕ್ರಾಮಿಕ 2ನೇ ಅಲೆ ವೇಳೆ ಈ 'ಮೊನೊಕ್ಲೋನಲ್ ಆ್ಯಂಟಿಬಾಡಿ ಥೆರಪಿ' ಸಾಕಷ್ಟು ರೋಗಿಗಳಲ್ಲಿ ಪ್ರಯೋಜನಕ್ಕೆ ಬಂದಿತ್ತು. ಸಾಕಷ್ಟು ರೋಗಿಗಳನ್ನು ಪ್ರಾಣಾಪಾಯದಿಂದ ಪಾರು ಮಾಡಿತ್ತು. ಇದೀಗ ಅದೇ ಚಿಕಿತ್ಸೆ ಇದೀಗ ಓಮಿಕ್ರಾನ್ ವೈದ್ಯರಿಗೂ ನೆರವಾಗಿದೆ ಎಂದು ಹೇಳಲಾಗಿದೆ.

ಸಾಮಾನ್ಯವಾಗಿ ಅಪಾಯಕಾರಿ ಲಕ್ಷಣಗಳು ಕಂಡುಬಂದಾಗ ಈ ಥೆರಪಿಯನ್ನು ವೈದ್ಯರು ಸೂಚಿಸುತ್ತಾರೆ. ಈ ಓಮಿಕ್ರಾನ್ ಸೋಂಕಿತ ವೈದ್ಯರ ವಿಚಾರದಲ್ಲಿ ರೋಗಲಕ್ಷಣಗಳು ಸೌಮ್ಯವಾಗಿದ್ದರೂ, ಆರಂಭದಲ್ಲಿ ದಾಖಲಾಗಿದ್ದ ಖಾಸಗಿ ಆಸ್ಪತ್ರೆಯಲ್ಲಿ, ಅವರ HRCT ಸ್ಕ್ಯಾನ್ ಶ್ವಾಸಕೋಶದಲ್ಲಿ ಕೆಲವು ಬದಲಾವಣೆಗಳನ್ನು ತೋರಿಸಿತ್ತು. ಹೀಗಾಗಿ ನವೆಂಬರ್ 25 ರಂದು ಅವರಿಗೆ ಜ್ವರವಿದ್ದರೂ ಸಹ ಆಂಟಿ-SARS-CoV-2 ಮೊನೊಕ್ಲೋನಲ್ ಪ್ರತಿಕಾಯಗಳನ್ನು ನೀಡಲಾಗಿತ್ತು. ಆರಂಭಿಕ ಹಂತಗಳಲ್ಲಿ ಇದ್ದ ಶೀತ ಮತ್ತು ಮೈ-ಕೈ ನೋವು ಬಳಿಕ ಕಡಿಮೆಯಾಗಿತ್ತು. ಚಿಕಿತ್ಸೆ ಪಡೆದ ಬಳಿಕ 14 ನೇ ದಿನ ಅವರು ಸಂಪೂರ್ಣ ಗುಣಮುಖರಾಗಿದ್ದಾರೆ. ಅವರು ಈಗ ಚೆನ್ನಾಗಿದ್ದಾರೆ ಎಂದು ಬೌರಿಂಗ್ ಆಸ್ಪತ್ರೆಯ ಹಿರಿಯ ವೈದ್ಯರೊಬ್ಬರು ಹೇಳಿದರು.

ಪ್ರಸ್ತುತ ಈ ಸೋಂಕಿತ ವೈದ್ಯರು, ಅವರ ನೇತ್ರತಜ್ಞ ಪತ್ನಿ ಮತ್ತು ಇಬ್ಬರು ಪುತ್ರಿಯರೊಂದಿಗೆ, ರಾಜ್ಯ ಸರ್ಕಾರಿ  ಬೌರಿಂಗ್ ಮತ್ತು ಲೇಡಿ ಕರ್ಜನ್ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಮೀಸಲಾದ ಓಮಿಕ್ರಾನ್ ಐಸೋಲೇಶನ್ ವಾರ್ಡ್‌ನಲ್ಲಿ ದಾಖಲಾಗಿದ್ದಾರೆ. ಅವರ ಹೆಣ್ಣುಮಕ್ಕಳಿಗೆ ನಡೆಸಿದ ಕೋವಿಡ್ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದ್ದು, ಆಸ್ಪತ್ರೆಯಿಂದಲೇ ಆನ್‌ಲೈನ್ ತರಗತಿಗಳಿಗೆ ಹಾಜರಾಗುತ್ತಿದ್ದಾರೆ.

ಕರಾಳ ಅನುಭವ ಬಿಚ್ಚಿಟ್ಟ ಓಮಿಕ್ರಾನ್ ಸೋಂಕಿತ ವೈದ್ಯ
ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ 46 ವರ್ಷದ ಈ ಅರಿವಳಿಕೆ ತಜ್ಞರು, ನಾನು ಆರಾಮಾಗಿದ್ದೇನೆ. ಯಾವುದೇ ಸಮಸ್ಯೆ ಇಲ್ಲ. ಈಗ ಯಾವುದೇ ರೋಗಲಕ್ಷಣಗಳಿಲ್ಲ ಎಂದು ಹೇಳಿದರು. ಅಂತೆಯೇ 'ಹೊಸ ರೂಪಾಂತರ ಓಮಿಕ್ರಾನ್ ಬಗ್ಗೆ ಚಿಂತಿಸಲು ಯಾವುದೇ ಕಾರಣವಿಲ್ಲ. ನಾನು ಎಲ್ಲಿ ಸೋಂಕಿಗೆ ಒಳಗಾಗಿದ್ದೇನೆ ಎಂದು ನನಗೆ ತಿಳಿದಿರಲ್ಲ. ನಾನು ಮುಖ್ಯವಾಗಿ ಹೈಬ್ರಿಡ್ ಮೋಡ್‌ನಲ್ಲಿರುವ ಸ್ಟಾರ್ ಹೋಟೆಲ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಸಮ್ಮೇಳನದ ಸಮಾರಂಭದಲ್ಲಿದ್ದೆ ಮತ್ತು ಅಲ್ಲಿ ಹಾಜರಿದ್ದ ಎಲ್ಲಾ ಇತರ ವೈದ್ಯರು ಹೆಚ್ಚಾಗಿ ಸ್ಥಳೀಯರು. ನಾನು ನವೆಂಬರ್ 20 ರಂದು ಕೇವಲ ಒಂದು ಗಂಟೆ ಮಾತ್ರ ಅಲ್ಲಿದ್ದೆ. ಸಮ್ಮೇಳನಕ್ಕೆ ಹೋಗುವ ಮೊದಲು ಯಾವುದೇ ರೋಗಲಕ್ಷಣಗಳನ್ನು ಹೊಂದಿರಲಿಲ್ಲ ಮತ್ತು ನವೆಂಬರ್ 21 ರಂದು ಕೇವಲ ಒಂದು ದಿನದ ನಂತರ ರೋಗ ಲಕ್ಷಣಗಳು ಕಾಣಿಸಿಕೊಂಡಿತು. ಸಂಜೆಯ ಹೊತ್ತಿಗೆ ನನಗೆ ಮೈ ಕೈ ನೋವು, ಸೌಮ್ಯ ಜ್ವರ ಮತ್ತು ಶೀತ ಕಾಣಿಸಿಕೊಂಡಿತು. 

ನವೆಂಬರ್ 22 ರಂದು ಬೆಳಿಗ್ಗೆ, ಈ ರೋಗಲಕ್ಷಣಗಳನ್ನು ನಿರ್ಲಕ್ಷಿಸುವುದು ಬೇಡ ಎಂದು RAT (ರಾಪಿಡ್ ಆಂಟಿಜೆನ್ ಪರೀಕ್ಷೆ) ಮತ್ತು RT-PCR ಪರೀಕ್ಷೆ ಎರಡರಲ್ಲೂ ಸ್ವತಃ ಪರೀಕ್ಷಿಸಿಕೊಂಡೆ. ಪರೀಕ್ಷೆ ವರದಿಯಲ್ಲಿ ಪಾಸಿಟಿವ್ ಬಂತು. ನನ್ನೊಂದಿಗೆ ಚಿಕ್ಕ ಮಕ್ಕಳು ಮತ್ತು ವೃದ್ಧ ಪೋಷಕರು ಇರುವುದರಿಂದ ನವೆಂಬರ್ 22 ರಂದು ನಾನು ಪ್ರತ್ಯೇಕವಾಗಿದ್ದೆ. ಮೂರು ದಿನಗಳ ನಂತರ, ನವೆಂಬರ್ 25 ರಂದು, ಕಡಿಮೆ ರಕ್ತದೊತ್ತಡದ ಸಮಸ್ಯೆಯಾಯಿತು. ತಲೆತಿರುಗುವಿಕೆ. ಆಮ್ಲಜನಕದ ಪ್ರಮಾಣದಲ್ಲಿ ಸ್ವಲ್ಪಮಟ್ಟಿನ ಕುಸಿತ ಕಂಡುಬಂದಿತ್ತು. ಅದಕ್ಕಾಗಿಯೇ ನಾನು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದೆ. ನವೆಂಬರ್ 29 ರವರೆಗೆ ಅಲ್ಲಿಯೇ ಇದ್ದೆ ಎಂದು ಅವರು ವಿವರಿಸಿದರು.

ಅಂತೆಯೇ ಯಾವುದೇ ವೈರಸ್ ದೇಹವನ್ನು ಪ್ರವೇಶಿಸಿದ ನಂತರ ಕಾವುಕೊಡಲು ಕನಿಷ್ಠ ಮೂರರಿಂದ ನಾಲ್ಕು ದಿನಗಳನ್ನು ತೆಗೆದುಕೊಳ್ಳುತ್ತದೆ. ಆದರೆ ಇದು ಹೊಸ ರೂಪಾಂತರವಾಗಿದ್ದು, ನನಗೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ಹೇಳಿದರು.

ವಿದೇಶದಿಂದಲ್ಲ ಸಮುದಾಯದಲ್ಲೇ ಹರಡಬಹುದು
ಅಂತೆಯೇ ಮೊದಲ 24 ಗಂಟೆಗಳು ತಾವು ಅನುಭವಿಸಿದ ಯಾತನೆ ಹೇಳತೀರದು ಎಂದು ಹೇಳಿದ ಅವರು, ಈ ಓಮಿಕ್ರಾನ್ ವೈರಸ್ ವಿದೇಶದಿಂದಲ್ಲ ನಮ್ಮ ಸುತ್ತಮುತ್ತಲಿನ ಸಮುದಾಯದಲ್ಲಿಯೇ ಸೋಂಕು ಹರಡಬಹುದು. ಹೀಗಾಗಿ ಸರ್ಕಾರ ಕೋವಿಡ್ ಪರೀಕ್ಷೆಯನ್ನು ತೀವ್ರಗೊಳಿಸಬೇಕು ಎಂದು ಹೇಳಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com