ಬೆಂಗಳೂರು: ಡಿವೈಡರ್ ದಾಟಿ ಬಂದು ಅಪ್ಪಳಿಸಿದ ಬಸ್; ದ್ವಿಚಕ್ರ ವಾಹನ ಸಾವರ ಸಾವು
ನಗರದಲ್ಲಿ ಮತ್ತೊಂದು ರಸ್ತೆ ಅವಘಡ ಸಂಭವಿಸಿದ್ದು, ಡಿವೈಡರ್ ದಾಟಿ ಹಾರಿ ಬಂದ ಬಸ್ಸೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸಾವನಪ್ಪಿರುವ ಘಟನೆ ನಗರದ ಏರ್ಪೋರ್ಟ್ ರಸ್ತೆಯ ಫ್ಲೈಓರ್ ನಲ್ಲಿ ನಡೆದಿದೆ.
Published: 15th December 2021 02:05 PM | Last Updated: 15th December 2021 02:10 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ನಗರದಲ್ಲಿ ಮತ್ತೊಂದು ರಸ್ತೆ ಅವಘಡ ಸಂಭವಿಸಿದ್ದು, ಡಿವೈಡರ್ ದಾಟಿ ಹಾರಿ ಬಂದ ಬಸ್ಸೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸಾವನಪ್ಪಿರುವ ಘಟನೆ ನಗರದ ಏರ್ಪೋರ್ಟ್ ರಸ್ತೆಯ ಫ್ಲೈಓರ್ ನಲ್ಲಿ ನಡೆದಿದೆ.
ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಯನ್ನು ಖಾಸಗಿ ಶಾಲೆಯಲ್ಲಿ ಉಪನ್ಯಾಸಕನಾಗಿ ಕಾರ್ಯನಿರ್ವಹಿಸುತ್ತಿದ್ದ ನಿಖಿಲ್ ಕುಮಾರ್ ಜಿ (26) ಎಂದು ಗುರ್ತಿಸಲಾಗಿದೆ. ಘಟನೆ ಸಂಬಂಧ ಹೆಬ್ಬಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನಿಖಿಲ್ ಅವರು ಬ್ಯಾಟರಾಯನಪುರ ಫ್ಲೈಓವರ್ ಮೇಲೆ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದರು. ಈ ವೇಳೆ ಚಿಕ್ಕಬಳ್ಳಾಪುರದಿಂದ ವೇಗವಾಗಿ ಬರುತ್ತಿದ್ದ ಬಸ್ ಡಿವೈಡರ್ ಗೆ ಡಿಕ್ಕಿ ಹೊಡೆದು ಬೈಕ್ ಸವಾರನಿಗೆ ಡಿಕ್ಕಿಹೊಡೆದಿದ. ಘಟನೆಯಲ್ಲಿ ಸಾವನ್ನಪ್ಪಿದ ನಿಖಿಲ್ ಅವರ ಮೃತದೇಹವನ್ನು ಹೊರ ತೆಗೆಯಲು ಪೊಲೀಸರು ಹರಸಾಹಸ ಪಡಬೇಕಾದ ಪರಿಸ್ಥಿತಿ ಎದುರಾಗಿತ್ತು ಎಂದು ತಿಳಿದುಬಂದಿದೆ.
ಘಟನೆಯಲ್ಲಿ ಬಸ್ ಚಾಲಕ ವೆಂಕಟೇಶ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಲ್ಲದೆ, ಬಸ್ ಚಾಲಕನ ವಿರುದ್ಧ ನಿರ್ಲಕ್ಷ್ಯಯುತ ಚಾಲನೆ ಮಾಡಿದ ಪ್ರಕರಣವನ್ನೂ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಇದೇ ರೀತಿಯ ಘಟನೆ ನವೆಂಬರ್ 18 ರಂದೂ ಕೂಡ ಸಂಭವಿಸಿತ್ತು. ಘಟನೆಯಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಸಾವನ್ನಪ್ಪಿದ್ದರು. ವೇಗವಾಗಿ ಬರುತ್ತಿದ್ದ ಎಸ್'ಯುವಿ ಡಿವೈಡರ್'ಗೆ ಡಿಕ್ಕಿ ಹೊಡೆದುಬಂದು ಕ್ಯಾಬ್'ಗೆ ಡಿಕ್ಕಿ ಹೊಡೆದಿತ್ತು.
ಘಟನಯನ್ನು ಗಂಭೀರವಾಗಿ ಪರಿಗಣಿಸಿದ್ದ ಹಿರಿಯ ಪೊಲೀಸ್ ಅಧಿಕಾರಿಗಳು, ಅಪಘಾತ ಸಂಭವಿಸದಂತೆ ಹೆದ್ದಾರಿಯಲ್ಲಿ ಕ್ರಮ ಕೈಗೊಳ್ಳುವಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ)ಕ್ಕೆ ಸೂಚನೆ ನೀಡಿದ್ದರು.
ಅಪಘಾತಗಳನ್ನು ತಡೆಯಲು ರಸ್ತೆಯಲ್ಲಿ ಸೂಕ್ತ ದೀಪ ಅಳವಡಿಸುವುದು, ರಸ್ತೆ ಮೀಡಿಯನ್ ಎತ್ತರ ಹೆಚ್ಚಿಸುವುದು ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಎನ್ಎಚ್ಎಐಗೆ ಸ್ಪಷ್ಟ ಸೂಚನೆಗಳನ್ನು ನೀಡಿದ್ದರು.
ಪೊಲೀಸರು ಸೂಚನೆ ನೀಡಿ ತಿಂಗಳು ಕಳೆದರೂ ಅಧಿಕಾರಿಗಳು ಈ ವರೆಗೂ ಯಾವುದೇ ಕ್ರಮಗಳನ್ನೂ ಕೈಗೊಂಡಿಲ್ಲ.
ಹಿಂದಿನ ಅಪಘಾತಗಳು
ಡಿಸೆಂಬರ್ 2020: ಬ್ಯಾಟರಾಯನಪುರ ಮೇಲ್ಸೇತುವೆ ಬಳಿ ನಡೆದ ಸರಣಿ ಅಪಘಾತದಲ್ಲಿ ಎರಡು ಕಾರುಗಳು ಜಖಂಗೊಂಡು 9 ಮಂದಿಗೆ ಗಾಯಗಳಾಗಿದ್ದವು.
ಹೆಬ್ಬಾಳದಿಂದ ಬರುತ್ತಿದ್ದ ಕಾರೊಂದು ನಿಯಂತ್ರಣ ತಪ್ಪಿ ಡಿವೈಡರ್'ಗೆ ಡಿಕ್ಕಿ ಹೊಡೆದಿತ್ತು. ಬಳಿಕ ವಿಮಾನ ನಿಲ್ದಾಣದ ಕಡೆಗೆ ತೆರಳುತ್ತಿದ್ದ ಮೂರು ಕಾರುಗಳಿಗೆ ಡಿಕ್ಕಿ ಹೊಡೆದಿದ್ದವು.
ಮೇ 2020: ಕೋಗಿಲು ಕ್ರಾಸ್ ಬಳಿ ವೇಗವಾಗಿ ಬಂದ ಆಂಬ್ಯುಲೆನ್ಸ್ ವೊಂದು ಡಿವೈಡರ್'ಗೆ ಡಿಕ್ಕಿ ಹೊಡೆದು, ಕೆಂಪೇಗೌಡ ವಿಮಾನ ನಿಲ್ದಾಣದಿಂದ ನಗರಕ್ಕೆ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದರು.
ಸೆಪ್ಟೆಂಬರ್ 2017: ಹುಣಸಮಾರನಹಳ್ಳಿ ಮೇಲ್ಸೇತುವೆಯಲ್ಲಿ ಎಸ್‌ಯುವಿವೊಂದು ಡಿವೈಡರ್'ಗೆ ಡಿಕ್ಕಿ ಹೊಡೆದ ಪರಿಣಾಮ ಗಣಪತಿ (40), ನಾಗರಾಜು (45) ಮತ್ತು ದರ್ಶನ್ (29) ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದರು. ಅಲ್ಲದೆ, ಘಟನೆಯಲ್ಲಿ ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.