ಓಮಿಕ್ರಾನ್ ಆತಂಕ: ರಾಜ್ಯಕ್ಕೆ ಕೇಂದ್ರ ತಂಡ, 5 ದಿನಗಳ ಕಾಲ ವಾಸ್ತವ್ಯ

ಸಾಮಾನ್ಯ ಕೋವಿಡ್ ಪ್ರಕರಣ ಅಥವಾ ಓಮಿಕ್ರಾನ್ ರೂಪಾಂತರಿ ತಳಿಯ ಹಾವಳಿ ಹೆಚ್ಚಿರುವ ಮತ್ತು ಲಸಿಕಾಕರಣದ ವೇಗ ಬಹಳ ಕಡಿಮೆಯಿರುವ 10 ರಾಜ್ಯಗಳಿಗೆ ಕೇಂದ್ರ ಸರ್ಕಾರ ತಜ್ಞರ ತಂಡಗಳನ್ನು ರವಾನಿಸಿದ್ದು, ಸಕ್ರಿಯ ಕೋವಿಡ್ ಪ್ರಕರಣ ಮತ್ತು ಓಮಿಕ್ರಾನ್ ಸೋಂಕಿತರ ಸಂಖ್ಯೆ ಹೆಚ್ಚಾಗಿರುವುದರಿಂದ ರಾಜ್ಯಕ್ಕೂ ತಜ್ಞರ ತಂಡ ಆಗಮಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸಾಮಾನ್ಯ ಕೋವಿಡ್ ಪ್ರಕರಣ ಅಥವಾ ಓಮಿಕ್ರಾನ್ ರೂಪಾಂತರಿ ತಳಿಯ ಹಾವಳಿ ಹೆಚ್ಚಿರುವ ಮತ್ತು ಲಸಿಕಾಕರಣದ ವೇಗ ಬಹಳ ಕಡಿಮೆಯಿರುವ 10 ರಾಜ್ಯಗಳಿಗೆ ಕೇಂದ್ರ ಸರ್ಕಾರ ತಜ್ಞರ ತಂಡಗಳನ್ನು ರವಾನಿಸಿದ್ದು, ಸಕ್ರಿಯ ಕೋವಿಡ್ ಪ್ರಕರಣ ಮತ್ತು ಓಮಿಕ್ರಾನ್ ಸೋಂಕಿತರ ಸಂಖ್ಯೆ ಹೆಚ್ಚಾಗಿರುವುದರಿಂದ ರಾಜ್ಯಕ್ಕೂ ತಜ್ಞರ ತಂಡ ಆಗಮಿಸಿದೆ.

ಕೇಂದ್ರ ತಂಡ ನಿಯೋಜಿಸಿರುವ ಈ ಬಹುಶಸ್ತಿನ ತಂಡವು,  ಜೀನೋಮ್ ಅನುಕ್ರಮಕ್ಕಾಗಿ ಕ್ಲಸ್ಟರ್‌ಗಳಿಂದ ಸಂಗ್ರಹಿಸಿದ ಮಾದರಿಗಳನ್ನು INSACOG ಕಳುಹಿಸುವುದು ಸೇರಿದಂತೆ ಕಣ್ಗಾವಲು, ಕಂಟೈನ್‌ಮೆಂಟ್ ಕ್ರಮಗಳು ಮತ್ತು ಕೋವಿಡ್ -19 ಪರೀಕ್ಷೆ ಸೇರಿದಂತೆ ಸಂಪರ್ಕ ಪತ್ತೆಹಚ್ಚುವಿಕೆಯ ಕಾರ್ಯಗಳನ್ನು ಪರಿಶೀಲಿಸಲಿದೆ.

ಕೇರಳ, ಮಹಾರಾಷ್ಟ್ರ, ತಮಿಳುನಾಡು, ಪಶ್ಚಿಮ ಬಂಗಾಳ, ಮಿಜೋರಂ, ಕರ್ನಾಟಕ, ಬಿಹಾರ, ಉತ್ತರಪ್ರದೇಶ, ಜಾರ್ಖಂಡ್ ಮತ್ತು ಪಂಜಾಬ್ ರಾಜ್ಯಗಳು ಸೇರಿದಂತೆ 7 ರಾಜ್ಯಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಅಥವಾ ಓಮಿಕ್ರಾನ್ ಪೀಡಿತರ ಸಂಖ್ಯೆ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಗಿದ್ದು, ಮಿಜೋರಂ, ಬಿಹಾರ ಮತ್ತು ಜಾರ್ಖಂಡ್'ನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಕಡಿಮೆಯಿದ್ದರೂ ಲಸಿಕಾಕರಣದ ವೇಗ ಬಹಳ ಮಂದಗತಿಯಲ್ಲಿದೆ.

ಕೋವಿಡ್ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ವಿವಿಧ ಸುದ್ದಿವಾಹಿನಿಗಳು, ರಾಜ್ಯ ಸರ್ಕಾರಗಳು ಹಾಗೂ ಆಂತರಿಕ ವರದಿಗಳು ಎಚ್ಚರಿಕೆ ನೀಡಿವೆ. ಕೆಲ ರಾಜ್ಯಗಳಲ್ಲಿ ಓಮಿಕ್ರಾನ್ ಪ್ರಕರಣಗಳು ವೇಗಾಗಿ ಏರುತ್ತಿವೆ. ಇನ್ನು ಕೆಲ ರಾಜ್ಯಗಳಲ್ಲಿ ಲಸಿಕಾಕರಣದ ವೇಗ ಬಹಳ ಕಡಿಮೆಯಿದೆ. ಹೀಗಾಗಿ ರಾಜ್ಯಗಳಿಗೆ ನೆರವು ನೀಡಲು ತಂಡಗಳನ್ನು ಕಳುಹಿಸಲಾಗುತ್ತಿದೆ.

ರಾಜ್ಯದಲ್ಲಿ ಲಸಿಕೆ ಗುರಿಯನ್ನು ತಲುಪಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇವೆ. ಹಲವಾರು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ, ಸ್ವಯಂಸೇವಕರನ್ನು ನಿಯೋಜನೆಗೊಳಿಶಿದ್ದೇವೆ, ಸೋಂಕಿತರು ಮತ್ತು ಅವರ ಸಂಪರ್ಕಿತರಿಗೆ ಕಟ್ಟುನಿಟ್ಟಿನ ಹೋಮ್ ಕ್ವಾರಂಟೈನ್ ವಿಧಿಸಲಾಗಿದ್ದು, ಈ ಕುರಿತು ಮೇಲ್ವಿಚಾರಣೆ ಮಾಡಲು ಮತ್ತು ಖಚಿತಪಡಿಸಿಕೊಳ್ಳಲು ಅಪ್ಲಿಕೇಶನ್‌ಗಳನ್ನು ಮರುಪರಿಚಯಿಸಿದ್ದೇವೆ. ಸೋಂಕು ಹರಡುವಿಕೆಯನ್ನು ಹೇಗೆ ನಿರ್ವಹಿಸಬಹುದು ಮತ್ತು ಮೇಲ್ವಿಚಾರಣೆ ಮಾಡಬಹುದು ಎಂಬುದರ ಕುರಿತು ಕೇಂದ್ರ ತಂಡವು ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಲಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗುರುತಿಸಲಾದ ರಾಜ್ಯಗಳಲ್ಲಿ ಕೇಂದ್ರ ತಂಡಗಳು ಐದು ದಿನಗಳ ಕಾಲ ವಾಸ್ತವ್ಯ ಹೂಡಲಿದೆ. ಕರ್ನಾಟಕದಲ್ಲಿ ಕಳೆದ 14 ದಿನಗಳಲ್ಲಿ ಕ್ಲಸ್ಟರ್‌ಗಳು ಮತ್ತು ಸಕ್ರಿಯ ಪ್ರಕರಣಗಳಲ್ಲಿ ಹೆಚ್ಚಳವಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಷ್ಟ್ರೀಯ ಆರೋಗ್ಯ ಆಯೋಗದ ನಿರ್ದೇಶಕರೊಂದಿಗೆ ಇತ್ತೀಚೆಗೆ ನಡೆಸಿದ ಪರಿಶೀಲನಾ ಸಭೆಯಲ್ಲಿ ಕರ್ನಾಟಕದಲ್ಲಿ ಕ್ಲಸ್ಟರ್ ಪ್ರಕರಣಗಳು ಹೆಚ್ಚಾಗಿರುವುದರ ಕುರಿತು ಚರ್ಚಿಸಲಾಗಿದೆ.

ದೈನಂದಿನ ಪ್ರಕರಣಗಳು ಒಂದೇ ವ್ಯಾಪ್ತಿಯಲ್ಲಿ ಕಂಡು ಬರುತ್ತಿವೆ ಮತ್ತು ಆರ್-ನಾಟ್ ಮತ್ತು ಪಾಸಿಟಿವಿಟಿ ದರಗಳು ಶೇ. 0.30% ಆಗಿದೆ, ಶಿಕ್ಷಣ ಸಂಸ್ಥೆಗಳಿಂದ ಕ್ಲಸ್ಟರ್‌ಗಳ ಸಂಖ್ಯೆ ಹೆಚ್ಚಾಗಿರುವುದು ಕಳವಳಕಾರಿ ವಿಚಾರವಾಗಿದೆ. ಅಲ್ಲದೆ, ಕಡಿಮೆ CT ಮೌಲ್ಯಗಳನ್ನು ಹೊಂದಿರುವ ಅನೇಕ ಮಾದರಿಗಳ ಜೀನೋಮ್ ವರದಿಗಳಿಗಾಗಿ ಕಾಯಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಹೇಳಿದ್ದಾರೆ.

ರಾಜ್ಯಕ್ಕೆ ಆಗಮಿಸುವ ಕೇಂದ್ರದ ತಂಡವು ಕೋವಿಡ್-19 ನಿರ್ವಹಣೆಗಾಗಿ ಸಚಿವರು, ಜಿಲ್ಲಾಡಳಿತ ಮತ್ತು ತಾಂತ್ರಿಕ ಸಲಹಾ ಸಮಿತಿಯ ಸದಸ್ಯರೊಂದಿಗೆ ಸಭೆಗಳನ್ನು ನಡೆಸಲಿದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com