30 ದಿನದೊಳಗೆ 30 ಲಕ್ಷ ಜನರಿಗೆ ಲಸಿಕೆ ಹಾಕಲು ಕ್ರಮ: ಬಿಬಿಎಂಪಿ

ಖಾಸಗಿ ಆಸ್ಪತ್ರೆಗಳು, ದಾನಿ ಸಂಸ್ಥೆಗಳ ಸಹಯೋಗದಲ್ಲಿ ಮುಂದಿನ 30 ದಿನಗಳಲ್ಲಿ 30 ಲಕ್ಷ ಜನರಿಗೆ ಕೊರೋನಾ ಲಸಿಕೆ ಹಾಕಲು ಕ್ರಮಕೈಗೊಳ್ಳಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಖಾಸಗಿ ಆಸ್ಪತ್ರೆಗಳು, ದಾನಿ ಸಂಸ್ಥೆಗಳ ಸಹಯೋಗದಲ್ಲಿ ಮುಂದಿನ 30 ದಿನಗಳಲ್ಲಿ 30 ಲಕ್ಷ ಜನರಿಗೆ ಕೊರೋನಾ ಲಸಿಕೆ ಹಾಕಲು ಕ್ರಮಕೈಗೊಳ್ಳಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕೊರೋನಾ ಮೂರನೇ ಅಲೆ ಆರಂಭವಾಗುವುದಕ್ಕೂ ಮುನ್ನ ಅವಶ್ಯಕತೆ ಇರುವ ಎಲ್ಲರಿಗೂ ಲಸಿಕೆ ಹಾಕುವ ಉದ್ದೇಶದೊಂದಿಗೆ 30 ದಿನದೊಳಗೆ 30 ಲಕ್ಷ ಜನರಿಗೆ ಲಸಿಕೆ ಹಾಕುವ ಗುರಿಯನ್ನು ಹೊಂದಲಾಗಿದೆ ಎಂದು ಹೇಳಿದ್ದಾರೆ. 

ನಗರದಲ್ಲಿ 45 ವರ್ಷ ಮೇಲ್ಟಟ್ಟವರು 25 ಲಕ್ಷ ಜನರಿದ್ದಾರೆ ಎಂದು ಗುರುತಿಸಲಾಗಿದೆ. ಅವರಲ್ಲಿ ಈಗಾಗಲೇ 15.43 ಲಕ್ಷಕ್ಕೂ ಹೆಚ್ಚು ಮಂದಿಗೆ ಮೊದಲ ಡೋಸ್ ಹಾಕಿರುವುದರಿಂದ ಶೇ.60ರಷ್ಟು ಮಂದಿಗೆ ಲಸಿಕೆ ಹಾಕಿದಂತಾಗಿದೆ. ಉಳಿದವರಿಗೆ ಲಸಿಕೆ ಹಾಕುವುದರ ಜೊತೆಗೆ ಎರಡನೇ ಡೋಸ್ ಲಸಿಕೆ ಹಾಕಲು ನಾಲ್ಕು ಲಕ್ಷ ಡೋಸ್‍ಗಳ ಅವಶ್ಯಕತೆ ಇದೆ. ನಗರದಲ್ಲಿ 18 ರಿಂದ 44 ವರ್ಷದೊಳಗಿನವರು 64 ಲಕ್ಷ ಮಂದಿ ಇದ್ದಾರೆ. ಇವರಲ್ಲಿ 9 ಲಕ್ಷ ಮಂದಿಗೆ ಲಸಿಕೆ ಹಾಕಲಾಗಿದೆ ಎಂದು ತಿಳಿಸಿದ್ದಾರೆ. 

ಇವರಲ್ಲಿ ಶೇ.50 ರಷ್ಟು ಮಂದಿಗೆ ಒಂದು ತಿಂಗಳೊಳಗೆ ಲಸಿಕೆ ಹಾಕಲು 23 ಲಕ್ಷ ಡೋಸ್‍ಗಳ ಲಸಿಕೆ ಬೇಕಾಗಿದೆ. ಅವಶ್ಯವಿರುವ ಎಲ್ಲಾ ಡೋಸ್‍ಗಳನ್ನು ಸರ್ಕಾರ ನೀಡಲಿದೆ. ಇದರ ಜತೆಗೆ ಖಾಸಗಿ ಆಸ್ಪತ್ರೆಗಳು ಹಾಗೂ ದಾನಿ ಸಂಸ್ಥೆಗಳ ಸಹಯೋಗದಲ್ಲಿ ಮುಂದಿನ 30 ದಿನಗಳಲ್ಲಿ 30 ಲಕ್ಷ ಡೋಸ್ ಲಸಿಕೆ ನೀಡುವ ಗುರಿ ಹಾಕಿಕೊಳ್ಳಲಾಗಿದೆ ಎಂದಿದ್ದಾರೆ. 

ಐಟಿ, ಬಿಟಿ ಸಂಸ್ಥೆಗಳು ತಮ್ಮ ಸಿಬ್ಬಂದಿಗಳು ಖಾಸಗಿ ಆಸ್ಪತ್ರೆಗಳಿಂದ ಲಸಿಕೆ ಹಾಕಿಸುತ್ತಿದ್ದಾರೆ.ಇನ್ನು ಕೆಲ ಅಪಾರ್ಟ್‍ಮೆಂಟ್‍ನವರು ಖಾಸಗಿ ಆಸ್ಪತ್ರೆಗಳ ಮೊರೆ ಹೋಗಿದ್ದಾರೆ. ಉಳಿದಂತೆ ಕೊಳಚೆ ಪ್ರದೇಶ ಸೇರಿದಂತೆ ಲಸಿಕೆ ಪಡೆಯಲು ಸಾಧ್ಯವಾಗದಿರುವವರನ್ನು ಪತ್ತೆ ಹಚ್ಚಿ ಬಿಬಿಎಂಪಿಯಿಂದ ಲಸಿಕೆ ಹಾಕಿಸಲಾಗುತ್ತಿದೆ. ಒಟ್ಟು ಉತ್ಪಾದನೆಯಾಗುವ ಲಸಿಕೆಗಳನ್ನು ಶೇ.50 ರಷ್ಟನ್ನು ಕೇಂದ್ರ ಸರ್ಕಾರ ಖರೀದಿಸಲಿದೆ. ಶೇ.25 ರಷ್ಟನ್ನು ರಾಜ್ಯ ಸರ್ಕಾರಗಳು ಖರೀದಿಸಬಹುದಾಗಿದೆ. ಉಳಿದ ಶೇ.25 ರಷ್ಟನ್ನು ಖಾಸಗಿಯವರು ಖರೀದಿಸಿ ಲಸಿಕೆ ಹಾಕುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ 18 ವರ್ಷ ಮೇಲ್ಟಟ್ಟ ಯಾರು ಬೇಕಾದರೂ ಲಸಿಕೆ ಪಡೆಯಬಹುದಾಗಿದೆ ಎಂದರು.

ದಿನನಿತ್ಯ ನಗರದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದೆ. ಆದರೂ ಕೊರೊನಾ ಚಿಕಿತ್ಸೆಗೆ ಬಿಬಿಎಂಪಿ ಆರಂಭಿಸಿರುವ ಟ್ರಯಾಜ್ ಸೆಂಟರ್, ಕೋವಿಡ್ ಕೇರ್ ಸೆಂಟರ್ ಹಾಗೂ ಹಾಸಿಗೆ ವ್ಯವಸ್ಥೆಯನ್ನು ಮುಂದುವರೆಸಿಕೊಂಡು ಹೋಗಲು ತೀರ್ಮಾನಿಸಲಾಗಿದೆ ಎಂದು ಆಯುಕ್ತರು ವಿವರಿಸಿದರು.

ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಲಸಿಕೆ ನೀಡಲು ಕೇಂದ್ರ ಸ್ಥಾಪನೆ
ಕಟ್ಟಡ ನಿರ್ಮಾಣ ಕಾರ್ಮಿಕರು ಹಾಗೂ ಇನ್ನಿತರ ಕಾರ್ಮಿಕರಿಗೆ ಲಸಿಕೆ ನೀಡುವ ಸಲುವಾಗಿ ಬಿಬಿಎಂಪಿ ಪ್ರತ್ಯೇಕ ಕೇಂದ್ರವನ್ನು ಸ್ಥಾಪನೆ ಮಾಡಲಿದ್ದು, ಶೀಘ್ರಗತಿಯಲ್ಲಿ ಹೆಚ್ಚೆಚ್ಚು ಜನರಿಗೆ ಲಸಿಕೆ ನೀಡುವ ಕಾರ್ಯವನ್ನು ನಡೆಸಲಾಗುತ್ತದೆ.

ಇದರ ಜತೆಗೆ ಮೂರನೇ ಅಲೆ ಮಕ್ಕಳಿಗೆ ಮಾರಕವಾಗಬಹುದು ಎಂದು ತಜ್ಞರು ಎಚ್ಚರಿಕೆ ನೀಡಿರುವ ಹಿನ್ನಲೆಯಲ್ಲಿ ಆಕ್ಸಿಜನ್ ಪ್ಲಾಂಟ್ ಸ್ಥಾಪನೆ, ಐಸಿಯು ಘಟಕಗಳ ಹೆಚ್ಚಳಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com