ಆಸ್ತಿಗಾಗಿ ತಮ್ಮನಿಂದಲೇ ಅಕ್ಕನಿಗೆ ಸುಪಾರಿ: 7 ತಿಂಗಳ ಹಿಂದಿನ ಹತ್ಯೆ ರಹಸ್ಯ ಬಯಲು ಮಾಡಿದ ಪೊಲೀಸರು! 

ಆಸ್ತಿ ಮಾರಾಟ ವಿಚಾರಕ್ಕೆ ಸಂಬಂಧಿಸಿದಂತೆ ಸ್ವಂತ ತಮ್ಮನೇ ತನ್ನ ಅಕ್ಕನನ್ನು ಕೊಲೆ ಮಾಡಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕೊಲೆಯಾದ ಮಹಿಳೆ ಸೀತಾ
ಕೊಲೆಯಾದ ಮಹಿಳೆ ಸೀತಾ

ಬೆಂಗಳೂರು: ಆಸ್ತಿ ಮಾರಾಟ ವಿಚಾರಕ್ಕೆ ಸಂಬಂಧಿಸಿದಂತೆ ಸ್ವಂತ ತಮ್ಮನೇ ತನ್ನ ಅಕ್ಕನನ್ನು ಕೊಲೆ ಮಾಡಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

7 ತಿಂಗಳ ಹಿಂದೆ ನಡೆದ ಭಯಾನಕ ಕೊಲೆಯ‌ ರಹಸ್ಯದ ಹಿಂದಿನ ಅಸಲಿಯತ್ತನ್ನು ಪೊಲೀಸರು ಬಯಲು ಮಾಡಿದ್ದು, ಬೆಂಗಳೂರಲ್ಲಿ ನೆಲೆಸಿದ್ದ ಮಹಿಳೆ ಕೊಲೆ ಸ್ಟೋರಿ 7 ತಿಂಗಳ ಬಳಿಕ ಬೆಳಕಿಗೆ ಬಂದಿದೆ. 47 ವರ್ಷದ ಸೀತಾ ಕೊಲೆಯಾದ ದುರ್ದೈವಿಯಾಗಿದ್ದು, ಮಿಸ್ಸಿಂಗ್ ಕೇಸ್ ಹಿಂದೆ ಬಿದ್ದ ಪೊಲೀಸರು ಕೊಲೆ ರಹಸ್ಯವನ್ನು ಕೊನೆಗೂ ಬಯಲು ಮಾಡಿದ್ದಾರೆ. 

ಬೆಂಗಳೂರಿನ ರಾಜಾಜಿನಗರದಲ್ಲಿ ನೆಲೆಸಿದ್ದ ಸೀತಾ, ಸೈನೆಡ್ ನೀಡಿ ಮಹಿಳೆಯನ್ನು ನಾಲ್ವರು ಕಿರಾತಕರು ಹತ್ಯೆ ಮಾಡಿದ್ದರು. ಮೂಲತಃ ಮಂತ್ರಾಲಯದವರಾಗಿದ್ದ ಸೀತಾ, 26/3/21 ರಲ್ಲಿ ಇದ್ದಕ್ಕಿದ್ದಂತೆ ಕಾಣೆಯಾಗಿದ್ದರು. ಅಕ್ಕ ಕಾಣೆಯಾಗಿದ್ದಾಳೆ ಎಂದು ಸ್ವತಃ ತಮ್ಮ ವೆಂಕಟೇಶ್ ಆಚಾರ್ ದೂರು ನೀಡಿದ್ದ. ಮಿಸ್ಸಿಂಗ್ ಕೇಸ್ ಹಿಂದೆ ಬಿದ್ದಿದ್ದ ಪೊಲೀಸರಿಗೆ ಸೀತಾಳ ಸುಳಿವೆ ಸಿಕ್ಕಿರಲಿಲ್ಲ. ಇತ್ತೀಚೆಗೆ ಕಾಲ್ ಡಿಟೈಲ್ಸ್ ಆದರಿಸಿ ಸತ್ಯ ಅನ್ನೊ ವ್ಯಕ್ತಿಯ ಬಂಧನ ಮಾಡಿದ್ದರು. ಆರೋಪಿ ಸತ್ಯನನ್ನು ಪೊಲೀಸರು ಸರಿಯಾಗಿ ವಿಚಾರಿಸಿಕೊಂಡಾಗ ಅಸಲಿ ವಿಚಾರ ಹೊರಬಿದ್ದಿದೆ. ಸೀತಾ ಅವರ ತಮ್ಮ ವೆಂಕಟೇಶ್ ಸುಪಾರಿ ನೀಡಿದ್ದಾಗಿ ಆರೋಪಿ ಸತ್ಯ ಬಾಯ್ಬಿಟ್ಟಿದ್ದಾನೆ. 

ಮಂತ್ರಾಲಯದ ಬಳಿಯಿದ್ದ ಜಾಗ ಮಾರಲು ವೆಂಕಟೇಶ್ ನಿರ್ಧರಿಸಿದ್ದ. ಜಾಗ ಮಾರಾಟ ಮಾಡಬೇಕೆಂದ್ರೆ, ಅಕ್ಕನ ಸಹಿ ಬೇಕಾಗಿತ್ತು. ಆದರೆ ಸೀತಾ ಸಹಿ ಹಾಕಲು ಒಪ್ಪಿರಲಿಲ್ಲ. ಈ ಹಿನ್ನಲೆ ಅಕ್ಕ ಸೀತಾಳ ಕೊಲೆಗಾಗಿ ಆರೋಪಿಗಳಾದ ನೂರ್ ಅಹಮದ್, ಸತ್ಯ, ಕುಮಾರ್,ಮೆಂಟಲ್‌ ರಘು ಗೆ ಎರಡೂವರೆ ಲಕ್ಷಕ್ಕೆ ತಮ್ಮ ವೆಂಕಟೇಶ್ ಸುಪಾರಿ ನೀಡಿದ್ದಾನೆ. ಇದಕ್ಕಾಗಿ ಸಂಚು ರೂಪಿಸಿದ ಆರೋಪಿಗಳು, ಸೀತಾ ಪರಿಚಯಸ್ತ ಮೆಂಟಲ್ ರಘು ಮೂಲಕ ಸೀತಾರನ್ನ ಕರೆಸಿಕೊಂಡಿದ್ದರು. ಬಂಗಾರ ಖರೀದಿ ನೆಪದಲ್ಲಿ ಹಾಸನ ಮಾರ್ಗವಾಗಿ ಸೀತಾಳನ್ನು ಕರೆದೊಯ್ದಿದ್ದ ಆರೋಪಿಗಳು, ತಲೆ ನೋವಿನ ಮಾತ್ರೆಗೆ ಸೈನೆಡ್ ಸೇರಿ‌ಸಿ ಕೊಟ್ಟಿದ್ದರು. ಸೈನೆಡ್ ಟ್ಯಾಬ್ಲೆಟ್ ತಿಂದ ಹತ್ತೆ ಸೆಕೆಂಡ್ ನಲ್ಲಿ ಸೀತಾ ಇಹಲೋಕ ತ್ಯಜಿಸಿದ್ದರು. ನಂತರ ಮೃತದೇಹವನ್ನು ಹೊಸಪೇಟೆ ಹತ್ತಿರದ ನೀರಿನ ಕ್ಯಾನಲ್ ಗೆ ದುಷ್ಕರ್ಮಿಗಳು ಬೀಸಾಡಿ ಗಪ್ ಚುಪ್ ಆಗಿದ್ದರು. ಸದ್ಯ ಎಷ್ಟೆ ಹುಡುಕಾಟ ನಡೆಸಿದ್ರೂ ಸೀತಾ ಅವರ ಮೃತದೇಹ ದೊರೆತಿಲ್ಲ. 

ಆರೋಪಿಗಳ ಪೈಕಿ ಮೆಂಟಲ್ ರಘು, ಕುಮಾರ್ ಇತ್ತೀಚೆಗೆ ಮೃತ ಪಟ್ಟಿದ್ದಾರೆ. ಆರೋಪಿ ಸತ್ಯ ಹೇಳಿಕೆ ಮೇರೆಗೆ ಸುಳಿವೆ ಇಲ್ಲದ ಕೊಲೆ ಕೇಸ್ ಅನ್ನು ಬೆಂಗಳೂರು ಪೊಲೀಸರು ಪತ್ತೆ ಹಚ್ಚಿದ್ದಾರೆ. PSI ಲತಾ ನೀಡಿದ ದೂರಿನನ್ವಯ FIR ದಾಖಲಾಗಿದ್ದು, ಕೊಲೆಯಾಗಿರುವ ಸೀತಾ ತಮ್ಮ ವೆಂಕಟೇಶ್ ಆಚಾರಿ ಪರಾರಿಯಾಗಿದ್ದಾನೆ. ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪೈಕಿ ನೂರ್ ಅಹಮದ್, ಸತ್ಯ ಎಂಬಾತರನ್ನು ಬಂಧಿಸಿ ವಿಚಾರಣೆ ಮುಂದುವರಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com