ಮೊಬೈಲ್ ಆ್ಯಪ್ ಸಾಲ ಹೆಸರಿನಲ್ಲಿ ವಂಚನೆ: ಇಬ್ಬರ ಬಂಧನ

ಮೊಬೈಲ್ ಆ್ಯಪ್ ನಲ್ಲಿ ಸಾಲ ನೀಡಿ ಬಳಿಕ ಗ್ರಾಹಕರನ್ನು ಬೆದರಿಸಿ ದುಬಾರಿ ಶುಲ್ಕ ಹಾಗೂ ಬಡ್ಡಿ ವಸೂಲಿ ಮಾಡುತ್ತಿದ್ದ ಕಂಪನಿ ಮೇಲೆ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮೊಬೈಲ್ ಆ್ಯಪ್ ನಲ್ಲಿ ಸಾಲ ನೀಡಿ ಬಳಿಕ ಗ್ರಾಹಕರನ್ನು ಬೆದರಿಸಿ ದುಬಾರಿ ಶುಲ್ಕ ಹಾಗೂ ಬಡ್ಡಿ ವಸೂಲಿ ಮಾಡುತ್ತಿದ್ದ ಕಂಪನಿ ಮೇಲೆ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ.

ಬಂಧಿತರನ್ನು ಕಾಮರಾಜ್ ಮೋರೆ (25) ಮತ್ತು ದರ್ಶನ್ ಚೌಹಾಣ್ (21) ಎಂದು ಗುರುತಿಸಲಾಗಿದೆ. ಅಕ್ರಮವಾಗಿ ಹಣ ಗಳಿಸುವ ಉದ್ದೇಶದಿಂದ ಚೀನಾ ಮೂಲದ ವ್ಯಕ್ತಿಗಳು ಕ್ಯಾಷ್ ಮಾಸ್ಟರ್, ಕ್ರೈಝಿ ರುಪೀಸ್ ಸೇರಿದಂತೆ ಹಲವು ಸಾಲದ ಆ್ಯಪ್ ಅಭಿವೃದ್ಧಿಪಡಿಸಿದ್ದರು.

ಬಳಿಕ ಉದ್ಯೋಗದ ಆಸೆ ತೋರಿಸಿ ಸ್ಥಳೀಯ ಉದ್ಯೋಕ ಆಕಾಂಕ್ಷಿಗಳಿಂದ ದಾಖಲೆಗಳನ್ನು ಪಡೆದು ಪ್ರತಿಯೊಬ್ಬರ ಹೆಸರಿನಲ್ಲಿ ಐದಾರು ಕಂಪನಿಯಂತೆ ಒಟ್ಟು 52 ನಕಲಿ ಕಂಪನಿಗಳನ್ನು ನೋಂದಣಿ ಮಾಡಿಸಿದ್ದರು. ಲೈಕೋರೈಸ್ ಟೆಕ್ನಾಲೋಜಿ ಪ್ರೈ.ಲಿ. ಹೆಸರಿನಲ್ಲಿ ಮುನೇನ ಕೊಳಲು ಸಿಲ್ವರ್ ಸ್ಟ್ರಿಂಗ್ ಲೇ ಔಟ್ ನಲ್ಲಿ ಕಚೇರಿ ತೆರೆದು ಕಾಲ್ ಸೆಂಟರ್ ತೆರೆದಿದ್ದರು.

ಈ ಕಂಪನಿ ಹೆಸರಿನಲ್ಲಿ ಯೆಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಕೋಟೆಕ್ ಮಹೀಂದ್ರ ಬ್ಯಾಂಕ್ ಮತ್ತು ಐಡಿಎಫ್'ಸಿ ಸೇರಿದಂತೆ ವಿವಿಧ ಬ್ಯಾಂಕ್ ಗಳಲ್ಲಿ ಖಾತೆಗಳನ್ನು ತೆರೆದಿದ್ದರು ಈ ಕಂಪನಿಯ ನಿರ್ವಹಣೆ ಜವಾಬ್ದಾರಿಯನ್ನು ಬಂಧಿತ ಆರೋಪಿಗಳಿಗೆ ವಹಿಸಿದ್ದರು.

ಆರೋಪಿಗಳು ಸಾಮಾಜಿಕ ಜಾಲತಾಣದಲ್ಲಿ ಕೆಲವೇ ಕ್ಷಣಗಳಲ್ಲಿ ಸಾಲ ನೀಡವುದಾಗಿ ಜಾಹೀರಾತು ನೀಡಿ ಗ್ರಾಹಕರನ್ನು ಸೆಳೆಯುತ್ತಿದ್ದರು. ರೂ.10 ಸಾವಿರದಿಂದ ರೂ.1 ಲಕ್ಷದವರೆಗೂ ಸಾಲ ನೀಡುತ್ತಿದ್ದರು. ಈ ವೇಳೆ ಪ್ರೊಸೆಸಿಂಗ್ ಶುಲ್ಕವೆಂದು ದುಬಾರಿ ಹಣ ಕಡಿತ ಮಾಡುತ್ತಿದ್ದರು. ವಾರ ಕಳೆದ ಬಳಿಕ ಬಡ್ಡಿ ವಸೂಲಿಗೆ ಗ್ರಾಹಕರಿಗೆ ಕರೆ ಮಾಡುತ್ತಿದ್ದರು. ಬಡ್ಡಿ ಪಾವತಿಸಲು ನಿರಾಕರಿಸಿದರೆ, ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿದ್ದರು. ಇವರ ಕಾಟಕ್ಕೆ ಬೇಸತ್ತು ಗ್ರಾಹಕರು ಬಟ್ಟಿ ಪಾವತಿಸಿದರೂ ಹೆಚ್ಚುವರಿ ಬಡ್ಡಿ ನೀಡುವಂತೆ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಚೀನಾ ಪ್ರಜೆಗಳು ಕೆಲವರಿಂದ ಆಧಾರ್ ಮತ್ತು ಪ್ಯಾನ್ ಕಾರ್ಡ್‌ಗಳಂತಹ ದಾಖಲೆಗಳನ್ನು ಸಂಗ್ರಹಿಸಿದ್ದು, ಅವರ ಹೆಸರಿನಲ್ಲಿ 5-6 ಕಂಪನಿಗಳನ್ನು ನೋಂದಾಯಿಸಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.

ಒಟ್ಟಾರೆಯಾಗಿ 52 ಕಂಪನಿಗಳು ನೋಂದಣಿಯಾಗಿ ಖಾಸಗಿ ಬ್ಯಾಂಕ್‌ಗಳಲ್ಲಿ ಖಾತೆಗಳನ್ನು ತೆರೆದಿವೆ. ಸಾಲ ಪಡೆದವರು ಪಾವತಿಸಿದ ಬಡ್ಡಿಯನ್ನು ಈ ಖಾತೆಗಳಿಗೆಜಮಾ ಮಾಡಲಾಗಿದ್ದು, ಈ ಖಾತೆಗಳಿಂದ ಆನ್'ಲೈನ್ ಮೂಲಕ ಚೀನಾಗೆ ಕೋಟ್ಯಾಂತರ ರೂಪಾಯಿ ಹಣ ವರ್ಗಾವಣೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರಿಂದ 83 ಕಂಪ್ಯೂಟರ್ ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಪ್ರಕರಣ ಸಂಬಂಧ ತಲೆಮರೆಸಿಕೊಂಡಿರುವ ಇನ್ನಿತರೆ ಚೀನಾದ ಪ್ರಜೆಗಳಿಗಾಗಿ ಹುಡುಕಾಟ ಆರಂಭಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಲೇವಾದೇವಿದಾರರ ಕಾಯ್ದೆ, ಐಟಿ ಕಾಯ್ದೆ, ಅಧಿಕ ಬಡ್ಡಿ ವಿಧಿಸುವ ಕರ್ನಾಟಕ ನಿಷೇಧ ಕಾಯ್ದೆ, ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com