ಕಡಲೇಕಾಯಿ ಪರಿಷೆ ಮೇಲೆ ಕೊರೊನಾ ಕರಿಛಾಯೆ?

ಕೊರೋನಾ ಕರಿಛಾಯೆ ಹಿನ್ನೆಲೆಯಲ್ಲಿ ಮಹಾನಗರದ ಇತಿಹಾಸ ಪ್ರಸಿದ್ಧ ಕಡಲೇಕಾಯಿ ಪರಿಷೆಗೆ ಅಡ್ಡಿ ಉಂಟಾಗಬಹುದೇ ಎಂಬ ಆತಂಕ ಉಂಟಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೊರೋನಾ ಕರಿಛಾಯೆ ಹಿನ್ನೆಲೆಯಲ್ಲಿ ಮಹಾನಗರದ ಇತಿಹಾಸ ಪ್ರಸಿದ್ಧ ಕಡಲೇಕಾಯಿ ಪರಿಷೆಗೆ ಅಡ್ಡಿ ಉಂಟಾಗಬಹುದೇ ಎಂಬ ಆತಂಕ ಉಂಟಾಗಿದೆ.

ಕಾರ್ತಿಕ ಮಾಸದ ಕೊನೆ ಸೋಮವಾರದಂದು ನಗರದ ಬಸವನಗುಡಿಯಲ್ಲಿ ಕಡಲೇಕಾಯಿ ಪರಿಶೆ ಆಯೋಜಿತವಾಗುತ್ತದೆ. ಈ ಬಾರಿ ನವೆಂಬರ್ 29 ರಂದು ಪರಿಷೆ ನಿಗದಿಯಾಗಿದೆ. ಲಕ್ಷಾಂತರ ಜನ ಸೇರುವ ನಿರೀಕ್ಷೆ ಇದೆ.

ನಿನ್ನೆಯಷ್ಟೇ ರಾಜ್ಯ ಸರ್ಕಾರ ಕೊರೊನಾ 3ನೇ ಅಲೆ ತಡೆಗಟ್ಟಲು ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಹೆಚ್ಚುಜನ ಒಂದೆಡೆ ಸೇರುವುದನ್ನು ನಿರ್ಬಂಧಿಸಲಾಗಿದೆ. ಶಾಲಾ –ಕಾಲೇಜುಗಳ ಸಾಂಸ್ಕೃತಿಕ ಚಟುವಟಿಕೆಗಳನ್ನು ಸಹ ಮುಂದೂಡಲು ಸೂಚಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವ ಕ್ರಮಗಳನ್ನು ಮತ್ತೆ ಬಿಗಿಗೊಳಿಸಲು ಹೇಳಲಾಗಿದೆ.

ಈ ಎಲ್ಲ ಹಿನ್ನೆಲೆಯಲ್ಲಿ ಬಸವನಗುಡೊಯಲ್ಲಿ ನವೆಂಬರ್ 29ರಂದು ನಡೆಯಬೇಕಿರುವ ಕಡಲೇಕಾಯಿ ಪರಿಷೆ ನಡೆಯುತ್ತದೋ ಇಲ್ಲವೋ ಎಂಬ ಅನಿಶ್ಚತತೆ, ಆತಂಕ ಉಂಟಾಗಿದೆ. ಈ ಬಗ್ಗೆ ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ. ಬಾಲಸುಂದರ್ ಅವರನ್ನು ಯು.ಎನ್.ಐ. ಪ್ರತಿನಿಧಿ ಸಂಪರ್ಕಿಸಿದರು.. “ಕಡಲೇಕಾಯಿ ಪರಿಷೆ '' ನಿರ್ಬಂಧಿಸುವ ಕುರಿತು ಇದುವರೆಗೂ ಸರ್ಕಾರದಿಂದ ಯಾವುದೇ ಸೂಚನೆ ಬಂದಿಲ್ಲ. ಇಂದು ಅದರ ಬಗ್ಗೆ ಮಾಹಿತಿ ದೊರೆಯುತ್ತದೆ. ಅದರಂತೆ ಪರಿಶೆ ನಡೆಯಲು ಅವಕಾಶ ನೀಡಬೇಕೋ ಬೇಡವೋ ಎಂಬ ಬಗ್ಗೆ ಬಿಬಿಎಂಪಿ ನಿರ್ಧಾರ ತೆಗೆದುಕೊಳ್ಳುತ್ತದೆ” ಎಂದು ಅವರು ಹೇಳಿದರು..

ಈಗಾಗಲೇ ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳಿಂದ ಕಡಲೇಕಾಯಿ ಬೆಳೆಗಾರರು, ವ್ಯಾಪಾರಿಗಳು ಬಸವನಗುಡಿ ಸುತ್ತಮುತ್ತ ಬಿಡಾರ ಹೂಡಿದ್ದಾರೆ. ನಿನ್ನೆ ಸರ್ಕಾರ ಕೊರೋನಾ ನಿಯಂತ್ರಣದ ಮಾರ್ಗಸೂಚಿಗಳನ್ನು ಪ್ರಕಟಿಸಿರುವ ಕಾರಣ ಪರಿಶೆಗೆ ಅವಕಾಶವಿದೆಯೋ ಇಲ್ಲವೋ ಎಂಬ ಆತಂಕ ಅವರನ್ನು ಕಾಡುತ್ತದೆ.

ಕಳೆದ ಎರಡು ವರ್ಷಗಳಿಂದ ಕೊರೊನಾ ಕರಿಛಾಯೆ ಕಾರಣ ಕಡಲೇಕಾಯಿ ಪರಿಶೆ ಮಂಕಾಗಿತ್ತು. ಕಳೆದ ಕೆಲವು ತಿಂಗಳಿಂದ ಕೊರೊನಾ ಆರ್ಭಟ ಕ್ಷೀಣಿಸಿದ್ದ ಹಿನ್ನೆಲೆಯಲ್ಲಿ ಈ ಬಾರಿ ಮತ್ತೆ ಎಂದಿನ ಸಂಭ್ರಮದಿಂದ ನಡೆಯುವ ನಿರೀಕ್ಷೆ ಎಲ್ಲರಲ್ಲಿಯೂ ಇತ್ತು. ಆದರೆ ಮೂರನೇ ಅಲೆಯ ಭೀತಿ ಇದರ ಮೇಲೆ ಮತ್ತೆ ತನ್ನ ಕರಿಛಾಯೆ ಬೀಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com