ಕಲ್ಲಿದ್ದಲು ಕೊರತೆ ಉಲ್ಬಣ: ರಾಜ್ಯದಲ್ಲಿ ಕೇವಲ 2 ದಿನಕ್ಕಾಗುವಷ್ಟು ಮಾತ್ರ ದಾಸ್ತಾನು; ಬೆಂಗಳೂರಿಗೆ 300 ಮೆಗಾ ವ್ಯಾಟ್ ವಿದ್ಯುತ್ ಕೊರತೆ

ಕಲ್ಲಿದ್ದಲು ಕೊರತೆಯಿಂದಾಗಿ ರಾಜ್ಯದಲ್ಲಿ ಸೃಷ್ಟಿಯಾಗಿರುವ ವಿದ್ಯುತ್ ಅಭಾವ ತಾರಕ್ಕೇರುವ ಸಾಧ್ಯತೆ ಇದ್ದು, ಪ್ರಸ್ತುತ ಕರ್ನಾಟಕದಲ್ಲಿ ಕೇವಲ 2 ದಿನಕ್ಕಾಗುವಷ್ಟು ಮಾತ್ರ ಕಲ್ಲಿದ್ದಲು ದಾಸ್ತಾನಿದೆ ಎನ್ನಲಾಗಿದೆ.
ವಿದ್ಯುತ್ ಅಭಾವ
ವಿದ್ಯುತ್ ಅಭಾವ

ಬೆಂಗಳೂರು: ಕಲ್ಲಿದ್ದಲು ಕೊರತೆಯಿಂದಾಗಿ ರಾಜ್ಯದಲ್ಲಿ ಸೃಷ್ಟಿಯಾಗಿರುವ ವಿದ್ಯುತ್ ಅಭಾವ ತಾರಕ್ಕೇರುವ ಸಾಧ್ಯತೆ ಇದ್ದು, ಪ್ರಸ್ತುತ ಕರ್ನಾಟಕದಲ್ಲಿ ಕೇವಲ 2 ದಿನಕ್ಕಾಗುವಷ್ಟು ಮಾತ್ರ ಕಲ್ಲಿದ್ದಲು ದಾಸ್ತಾನಿದೆ ಎನ್ನಲಾಗಿದೆ.

ಇನ್ನು ಪ್ರಸ್ತುತ ರಾಜ್ಯದ ವಿದ್ಯುತ್‌ ಬೇಡಿಕೆ 153.669 ಮಿ.ಯೂನಿಟ್‌ ಇದ್ದು, ಕಲ್ಲಿದ್ದಲು ದಾಸ್ತಾನು ಬಹಳ ಕಡಿಮೆ ಇರುವುದರಿಂದ ರಾಯಚೂರು, ಬಳ್ಳಾರಿ ಮತ್ತು ಯರಮರಸ್‌ನ 13 ಉಷ್ಣ ವಿದ್ಯುತ್‌ ಉತ್ಪಾದನಾ ಘಟಕಗಳ ಪೈಕಿ 6 ಘಟಕಗಳನ್ನು ಮಾತ್ರ ಚಾಲನೆಯಲ್ಲಿಡಲಾಗಿದೆ. ಇವುಗಳಿಂದ 37.920 ಮಿ.ಯೂನಿಟ್‌ ವಿದ್ಯುತ್‌ ಉತ್ಪಾದನೆ ಮಾಡಲಾಗುತ್ತಿದೆ. ಮತ್ತೊಂದು ಕಡೆ ಜಲ ವಿದ್ಯುತ್‌ ಸ್ಥಾವರಗಳಿಂದ 37.050 ಮಿ.ಯೂನಿಟ್‌, ಸಾಂಪ್ರದಾಯಿಕವಲ್ಲದ ಸೋಲಾರ್‌, ಪವನ, ಅನಿಲ ವಿದ್ಯುದಾಗಾರಗಳಿಂದ 0.1154 ಮಿ.ಯೂ. ವಿದ್ಯುತ್‌ ಉತ್ಪಾದಿಸಲಾಗುತ್ತಿದೆ. ಖಾಸಗಿ ವಿದ್ಯುದಾಗರಗಳು ಮತ್ತು ಕೇಂದ್ರದ ಗ್ರಿಡ್‌ನಿಂದ 81.585 ಮಿ.ಯೂ. ವಿದ್ಯುತ್‌ ಪೂರೈಕೆಯಾಗುತ್ತಿದೆ.

ಬೆಂಗಳೂರಿಗೆ 300 ಮೆಗಾ ವ್ಯಾಟ್ ವಿದ್ಯುತ್ ಕೊರತೆ
ಇನ್ನು ರಾಜಧಾನಿ ಬೆಂಗಳೂರಿಗೂ ವಿದ್ಯುತ್ ಕೊರತೆ ಎದುರಾಗಿದ್ದು, ಹಾಲಿ ದಾಸ್ತಾನು ಅಂಕಿಅಂಶಗಳ ಪ್ರಕಾರ ಸಿಲಿಕಾನ್ ಸಿಟಿ ಬೆಂಗಳೂರಿಗೆ ಬರೊಬ್ಬರಿ 300 ಮೆಗಾವ್ಯಾಟ್ ವಿದ್ಯುತ್ ಕೊರತೆಯಾಗುತ್ತಿದೆ.  ಬೆಂಗಳೂರಿನಲ್ಲಿ ಗರಿಷ್ಠ ಹೊರೆ 10,000-12,500 ಮೆಗಾ ವ್ಯಾಟ್ ನಿಂದ 8,000-9,000 ಮೆಗಾವ್ಯಾಟ್ ಗೆ ಇಳಿದಿದ್ದು, ಕಳೆದ ಎರಡು ದಿನಗಳಿಂದ 300 ಮೆಗಾವ್ಯಾಟ್ ಕೊರತೆಯಿದ್ದು ನವೀಕರಿಸಬಹುದಾದ ಇಂಧನದಿಂದ ಈ ಸಮಸ್ಯೆಯನ್ನು ನಿರ್ವಹಿಸಲಾಗುತ್ತಿದೆ ಎಂದು ಬೆಂಗಳೂರಿನ ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ)ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇಂಧನ ಇಲಾಖೆ ಮತ್ತು ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ (ಕೆಪಿಸಿಎಲ್) ದಾಖಲೆಗಳ ಪ್ರಕಾರ, ಪ್ರಸ್ತುತ ರಾಜ್ಯದಲ್ಲಿ 12 ರೇಕ್ ಕಲ್ಲಿದ್ದಲು ಸ್ಟಾಕ್ ಲಭ್ಯವಿದ್ದು, ಇದು ಎರಡು ದಿನ ಮಾತ್ರ ಥರ್ಮಲ್ ಪವರ್ ಸ್ಟೇಷನ್ ಗಳಿಗೆ ನೀಡಬಹುದಾಗಿದೆ. ಕಲ್ಲಿದ್ದಲನ್ನು ಸಂರಕ್ಷಿಸಲು, ಉಷ್ಣ ಕೇಂದ್ರಗಳಲ್ಲಿ ವಿದ್ಯುತ್ ಉತ್ಪಾದನೆಯನ್ನು ಸೀಮಿತಗೊಳಿಸಲಾಗಿದೆ.

ಕನಿಷ್ಠ ಒಂದು ವಾರದ ದಾಸ್ತಾನು ಅಗತ್ಯ
ಇನ್ನು ಹೆಸರು ಹೇಳಲಿಚ್ಛಿಸದ ಮತ್ತೋರ್ವ ಅಧಿಕಾರಿಯೊಬ್ಬರು ಈ ಬಗ್ಗೆ ಮಾತನಾಡಿದ್ದು, ಪ್ರಸ್ತುತ ವಿದ್ಯುತ್ ಕೊರತೆ ಇರುವುದು ನಿಜ.. ಇದೇ ವಿಚಾರಕ್ಕೆ ಇಂದು ನಾವು ಮಾಧ್ಯಮಗಳಿಗೆ ಆಹಾರವಾಗುತ್ತಿದ್ದೇವೆ. ಆದರೆ ದೇಶದ ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ರಾಜ್ಯದ ಪರಿಸ್ಥಿತಿ ಈಗಲೂ ಉತ್ತಮವಾಗಿದೆ. 'ನಾವು ಹೈಡ್ರೊ, ಸೌರ ಮತ್ತು ಪವನ ಶಕ್ತಿಗೆ ಹೆಚ್ಚು ಒತ್ತು ನೀಡುವುದರಿಂದ ನಾವು ಉತ್ತಮ ಸ್ಥಿತಿಯಲ್ಲಿದ್ದೇವೆ. ನಾವು ಈಗ ಎಂಟರಿಂದ ಒಂಬತ್ತು ರೇಕ್ ಕಲ್ಲಿದ್ದಲನ್ನು ಪಡೆಯುತ್ತಿದ್ದೇವೆ, ಪ್ರತಿ ರೇಕ್ 3,900-4,000 ಮೆಟ್ರಿಕ್ ಟನ್ ಕಲ್ಲಿದ್ದಲನ್ನು ಹೊಂದಿರುತ್ತದೆ. ಆರಾಮದಾಯಕ ಪರಿಸ್ಥಿತಿಯಲ್ಲಿರಲು ನಮಗೆ 15 ದಿನಗಳು ಅಥವಾ ಕನಿಷ್ಠ ಒಂದು ವಾರದವರೆಗೆ ಸ್ಟಾಕ್‌ಗಳ ಅಗತ್ಯವಿದೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ (ಬಸವರಾಜ ಬೊಮ್ಮಾಯಿ) ಮತ್ತು ಇಂಧನ ಸಚಿವ (ಸುನೀಲ್ ಕುಮಾರ್) ಚರ್ಚೆ ನಡೆಸಿದ ನಂತರ, ಕೇಂದ್ರ ಸರ್ಕಾರವು ರಾಜ್ಯಕ್ಕೆ 12 ರೇಕ್‌ಗಳ ಭರವಸೆ ನೀಡಿದೆ. ಹೆಚ್ಚುವರಿ ಎರಡು ರೇಕ್‌ಗಳಿಗಾಗಿ, ನಾವು ಮಹಾನದಿ ಕೋಲ್‌ಫೀಲ್ಡ್ಸ್ ಲಿಮಿಟೆಡ್ (ಎಂಸಿಎಲ್) ಜೊತೆ ಮಾತನಾಡುತ್ತಿದ್ದೇವೆ. ಆದರೆ ಅದು ಮುಂದಿನ ತಿಂಗಳು ಮಾತ್ರ ಬರುತ್ತದೆ. ಅಲ್ಲಿಯವರೆಗೆ ಪರಿಸ್ಥಿತಿ ಬಿಗಿಯಾಗಿರುತ್ತದೆ.  ಎಂದು ಹಿರಿಯ ಕೆಪಿಸಿಎಲ್ ಅಧಿಕಾರಿಯೊಬ್ಬರು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.

ಕೆಪಿಸಿಎಲ್ ದಾಖಲೆಗಳ ಪ್ರಕಾರ ಸೋಮವಾರ ಸಂಜೆ 6.30 ಕ್ಕೆ ರಾಯಚೂರು ಥರ್ಮಲ್ ಪವರ್ ಸ್ಟೇಷನ್ (ಆರ್‌ಟಿಪಿಎಸ್) ಕೇವಲ 444 ಮೆಗಾವಾಟ್ ವಿದ್ಯುತ್ ಉತ್ಪಾದಿಸಲು ಸಾಧ್ಯವಿದೆ ಎಂದು ತೋರಿಸಿದೆ. ಮೂರು ಗ್ರಿಡ್‌ಗಳಿಂದ 1,720 ಮೆಗಾವ್ಯಾಟ್ ಸಾಮರ್ಥ್ಯ, ಬಳ್ಳಾರಿ ಥರ್ಮಲ್ ಪವರ್ ಸ್ಟೇಷನ್ (ಬಿಟಿಪಿಎಸ್) ನಿಂದ 395 ಮೆಗಾವ್ಯಾಟ್ ಬದಲಿಗೆ 1,700 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಬಹುದು. ಯೆರಾಮರಸ್ ಥರ್ಮಲ್ ಪವರ್ ಸ್ಟೇಷನ್ (ವೈಟಿಪಿಎಸ್)ನಲ್ಲಿ 678 ಮೆಗಾವ್ಯಾಟ್ ಬದಲಿಗೆ 1,600 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯವಿದೆ. ಕಲ್ಲಿದ್ದಲು ದಾಸ್ತಾನು ಸಂರಕ್ಷಿಸಲು ವೈಟಿಪಿಎಸ್ ಮತ್ತು ಬಿಟಿಪಿಎಸ್ ನ ತಲಾ ಒಂದು ಘಟಕ ಮಾತ್ರ ಕಾರ್ಯನಿರ್ವಹಿಸುತ್ತಿದೆ. ಮುಂಗಾರು ಮಳೆಯಿಂದಾಗಿ ರೈತರು ಈಗ ನೀರಾವರಿ ಪಂಪ್ ಸೆಟ್‌ಗಳನ್ನು ಬಳಸುತ್ತಿಲ್ಲ. ಆದರೆ ಒಮ್ಮೆ ಮಳೆ ನಿಂತರೆ, ಐಪಿ ಸೆಟ್‌ಗಳು ಉತ್ಪಾದಿಸುವ ಶಕ್ತಿಯ ಸುಮಾರು 20-30 ಪ್ರತಿಶತವನ್ನು ಬಳಸುವುದರಿಂದ ಸಮಸ್ಯೆ ಉಲ್ಬಣಗೊಳ್ಳುತ್ತದೆ ಎಂದು ಅಧಿಕಾರಿ ಹೇಳಿದರು.

'ಸೌರ, ಪವನ ಶಕ್ತಿಯನ್ನು ಹಗಲಿನಲ್ಲಿ ಬಳಕೆ
ಇನ್ನು ಈಗ, ಹಗಲಿನಲ್ಲಿನ ವಿದ್ಯುತ್ ಬೇಡಿಕೆಯನ್ನು ಸೌರ ಮತ್ತು ಪವನ ಶಕ್ತಿಯ ಮೂಲಗಳಿಂದ ಪೂರೈಸಲಾಗುತ್ತಿದೆ. ರಾತ್ರಿ ಬೇಡಿಕೆಯನ್ನು ಜಲವಿದ್ಯುತ್ ಮೂಲಕ ನಿರ್ವಹಿಸುತ್ತಿದ್ದೇವೆ ಎಂದು ಅಧಿಕಾರಿ ಹೇಳಿದರು. ಇಂಧನ ಇಲಾಖೆ ಅಧಿಕಾರಿಗಳ ಪ್ರಕಾರ ಹಾಲಿ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಎರಡು ಪರಿಹಾರಗಳಿವೆ. ಮುಕ್ತ ಮಾರುಕಟ್ಟೆ ಗ್ರಿಡ್‌ಗಳಿಂದ ವಿದ್ಯುತ್ ಖರೀದಿಸಿ ಅಥವಾ ಮುಕ್ತ ಅಂತಾರಾಷ್ಟ್ರೀಯ ಮಾರುಕಟ್ಟೆಯಿಂದ ಕಲ್ಲಿದ್ದಲು ಖರೀದಿಸಬೇಕು. ಇವೆರಡೂ ದುಬಾರಿಯಾಗಿದೆ ಎಂದು ಅಭಿಪ್ರಾಯಪಡಲಾಗಿದೆ. 

ಕಲ್ಲಿದ್ದಲು ಕೊರತೆ ಹೊಸದೇನಲ್ಲ
ಇನ್ನು ರಾಜ್ಯದಲ್ಲಿ ಕಲ್ಲಿದ್ದಲು ಕೊರತೆ ಹೊಸದೇನಲ್ಲ. ಈ ಹಿಂದೆ ಅಂದರೆ ಮೂರು ವರ್ಷಗಳ ಹಿಂದೆ ಕೇಂದ್ರ ಮತ್ತು ರಾಜ್ಯಗಳು ಇದೇ ರೀತಿಯ ಪರಿಸ್ಥಿತಿಯನ್ನು ಎದುರಿಸಿದ್ದವು. ಆದರೆ ಕಳೆದ ಎರಡು ವರ್ಷಗಳಲ್ಲಿ, ಸಾಂಕ್ರಾಮಿಕ, ಲಾಕ್‌ಡೌನ್ ಮತ್ತು ಕಡಿಮೆ ಸಂಖ್ಯೆಯ ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿರುವ ಕಾರಣ ಸಮಸ್ಯೆಯನ್ನು ಅನುಭವಿಸಲಾಗಿಲ್ಲ. ಆದರೆ ಈಗ ಎಲ್ಲವೂ ತೆರೆದುಕೊಂಡಿರುವುದರಿಂದ ಸಮಸ್ಯೆ ಮತ್ತೆ ತಲೆದೋರಿದೆ. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳ ಸ್ಪಷ್ಟ ಯೋಜನೆ ಮತ್ತು ದೂರದೃಷ್ಟಿಯ ಕೊರತೆಯಾಗಿದೆ ಎಂದು ಇಂಧನ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com