ಸೋಮಶೆಟ್ಟಿಹಳ್ಳಿಯಲ್ಲಿ ಜೆಸಿಬಿಗಳ ಆರ್ಭಟ: ಶಾಸಕರ ವಿರೋಧದ ಹೊರತಾಗಿಯೂ 4 ಆರ್‌ಸಿಸಿ ಕಟ್ಟಡ, ಮೂರು ಶೆಡ್‌ಗಳು ನೆಲಸಮ ಮಾಡಿದ ಬಿಡಿಎ!
ಉದ್ದೇಶಿತ ಶಿವರಾಮ ಕಾರಂತ ಬಡಾವಣೆ ವ್ಯಾಪ್ತಿಯ ಸೋಮಶೆಟ್ಟಿಹಳ್ಳಿಯಲ್ಲಿ ಸೋಮವಾರ ಬೆಳ್ಳಂಬೆಳಗ್ಗೆಯೇ ಜೆಸಿಬಿಗಳು ಆರ್ಭಟಿಸಿದ್ದು, ಸ್ಥಳೀಯರು ಹಾಗೂ ಶಾಸಕರ ತೀವ್ರ ವಿರೋಧದ ನಡುವೆಯೂ ಅನಧಿಕೃತವಾಗಿ ನಿರ್ಮಿಸಿದ್ದ ನಾಲ್ಕು ಆರ್‌ಸಿಸಿ ಕಟ್ಟಡಗಳು ಮತ್ತು ಮೂರು ಶೆಡ್‌ಗಳನ್ನು ಬಿಡಿಎ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿತು.
Published: 26th October 2021 02:28 PM | Last Updated: 26th October 2021 03:24 PM | A+A A-

ಸೋಮಶೆಟ್ಟಿಹಳ್ಳಿಯಲ್ಲಿ ಜೆಸಿಬಿಗಳ ಆರ್ಭಟ
ಬೆಂಗಳೂರು: ಉದ್ದೇಶಿತ ಶಿವರಾಮ ಕಾರಂತ ಬಡಾವಣೆ ವ್ಯಾಪ್ತಿಯ ಸೋಮಶೆಟ್ಟಿಹಳ್ಳಿಯಲ್ಲಿ ಸೋಮವಾರ ಬೆಳ್ಳಂಬೆಳಗ್ಗೆಯೇ ಜೆಸಿಬಿಗಳು ಆರ್ಭಟಿಸಿದ್ದು, ಸ್ಥಳೀಯರು ಹಾಗೂ ಶಾಸಕರ ತೀವ್ರ ವಿರೋಧದ ನಡುವೆಯೂ ಅನಧಿಕೃತವಾಗಿ ನಿರ್ಮಿಸಿದ್ದ ನಾಲ್ಕು ಆರ್‌ಸಿಸಿ ಕಟ್ಟಡಗಳು ಮತ್ತು ಮೂರು ಶೆಡ್‌ಗಳನ್ನು ಬಿಡಿಎ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿತು.
ಇದನ್ನೂ ಓದಿ: 300 ಕಾರ್ನರ್ ನಿವೇಶನಗಳ ಹರಾಜಿಗೆ ಬಿಡಿಎ ಮುಂದು: ವಿವರ ಹೀಗಿದೆ...
ಹೌದು.. ಡಾ.ಕೆ.ಶಿವರಾಮ ಕಾರಂತ ಬಡಾವಣೆಯಲ್ಲಿ ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘಿಸಿ ಸೋಮಶೆಟ್ಟಿಹಳ್ಳಿಯಲ್ಲಿ ನಿರ್ಮಿಸಿದ್ದ ನಾಲ್ಕು ವಾಣಿಜ್ಯ ಕಟ್ಟಡಗಳು ಮತ್ತು ಮೂರು ಶೆಡ್‌ಗಳನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸೋಮವಾರ ನೆಲಸಮಗೊಳಿಸಿದೆ. ವಿವಾದಿತ ಕಟ್ಟಡಗಳ ಮಾಲೀಕರಿಗೆ ಪೂರ್ವಭಾವಿ ಸೂಚನೆ ನೀಡಿದ ನಂತರ 10 ಗಂಟೆಗಳ ಕಾಲ ತೆರವು ಕಾರ್ಯಾಚರಣೆ ನಡೆಸಿ ಜಾಗವನ್ನು ವಶಕ್ಕೆ ಪಡೆಯಲಾಯಿತು.
ಶಾಸಕ ಆರ್ ಮಂಜುನಾಥ್, ಬೆಂಬಲಿಗರಿಂದ ಹೈಡ್ರಾಮ
ಇನ್ನು ತೆರವು ಕಾರ್ಯಾಚರಣೆ ವೇಳೆ ಟಿ-ದಾಸರಹಳ್ಳಿ ಶಾಸಕ ಆರ್ ಮಂಜುನಾಥ್ ಮತ್ತು ಅವರ ಬೆಂಬಲಿಗರು ತಡೆಯಲು ಪ್ರಯತ್ನಿಸಿದ್ದರಿಂದ ಸ್ಥಳದಲ್ಲಿ ದೊಡ್ಡ ಹೈ ಡ್ರಾಮಾವೇ ನಡೆಯಿತು. ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಆದರೂ ಸುಪ್ರೀಂ ಕೋರರ್ಟ್ ಆದೇಶದಂತೆ ಅಧಿಕಾರಿಗಳು ಪಟ್ಟು ಬಿಡದೆ ನೆಲಸಮ ಕಾರ್ಯಪೂರ್ಣಗೊಳಿಸಿದರು. ನಾಲ್ಕು ಜೆಸಿಬಿಗಳು ಮತ್ತು 5 ಬ್ರೇಕರ್‌ಗಳನ್ನು ಬಳಸಿ ಮೂರು ಅಂತಸ್ತಿನ ಆರ್‌ಸಿಸಿ ಕಟ್ಟಡಗಳು ಮತ್ತು ಆಸ್ಬೆಸ್ಟೋಸ್ ಸಿಮೆಂಟ್ ಶೀಟ್‌ಗಳಿಂದ ಮುಚ್ಚಿದ ಮೂರು ಶೆಡ್‌ಗಳನ್ನು ನೆಲಸಮಗೊಳಿಸಲಾಗಿದೆ.
ಬೆಳಗ್ಗೆ 7 ಗಂಟೆಗೆ ಆರಂಭವಾದ ತೆರವು ಕಾರ್ಯಾಚರಣೆ ಸತತ 10 ಗಂಟೆಗಳ ನಂತರ ಸಂಜೆ 5 ಗಂಟೆಗೆ ಮುಕ್ತಾಯವಾಯಿತು ಎಂದು ಬಿಡಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಾರ್ಯಾಚರಣೆ ವೇಳೆ 12 ಬಿಡಿಎ ಎಂಜಿನಿಯರ್‌ಗಳು ಸೇರಿದಂತೆ ಸುಮಾರು 50 ಜನರಿಗೆ ಸೋಲದೇವನಹಳ್ಳಿ ಠಾಣೆಯ ಪೊಲೀಸರು ಸೇರಿದಂತೆ ಸುಮಾರು 500 ಪೊಲೀಸ್ ಸಿಬ್ಬಂದಿ ರಕ್ಷಣೆ ನೀಡಿದರು.
ಇದನ್ನೂ ಓದಿ: ಜೆಡಿಎಸ್ ಶಾಸಕ ಮಂಜುನಾಥ್ ಬಂಧನ: ಮಾಜಿ ಸಿಎಂ ಕುಮಾರಸ್ವಾಮಿ ಆಕ್ರೋಶ
ತೆರವು ಕಾರ್ಯಾಚರಣೆ ನಿಲ್ಲಿಸಿ ಮತ್ತಷ್ಟು ಸಮಯಾವಕಾಶ ನೀಡುವಂತೆ ನಿವಾಸಿಗಳು ಮನವಿ ಮಾಡಿದರು. ಆದರೆ ಬಿಡಿಎ ಅಧಿಕಾರಿಗಳು ಇದಕ್ಕೆ ಒಪ್ಪದ ಕಾರಣ ಸ್ಥಳದಲ್ಲಿ ಜಟಾಪಟಿ ನಡೆಯಿತು. 2018ರ ನಂತರ ಯಾವುದೇ ಹೊಸ ಕಟ್ಟಡಗಳನ್ನು ನಿರ್ಮಿಸಬಾರದು ಎಂದು ಸೂಚನೆ ನೀಡಲಾಗಿದೆ. 1798 ಮನೆಗಳನ್ನು ಗುರುತಿಸಿ ತೆರವುಗೊಳಿಸಲು ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದರೆ, ನಿವಾಸಿಗಳು ಕೋರ್ಟ್‌ನಿಂದ ತಡೆಯಾಜ್ಞೆ ತಂದಿರುವುದಾಗಿ ಹೇಳಿದರು. ಈ ವೇಳೆ ಬಿಡಿಎ ಅಧಿಕಾರಿಗಳ ಕ್ರಮ ಖಂಡಿಸಿ ನಿವಾಸಿಗಳ ಜತೆ ಶಾಸಕ ಮಂಜುನಾಥ್ ಪ್ರತಿಭಟನೆಗೆ ಮುಂದಾದರು. ಪೊಲೀಸರು ಪ್ರತಿಭಟನಾನಿರತ ನಿವಾಸಿಗಳು ಹಾಗೂ ಶಾಸಕರೂ ಸೇರಿದಂತೆ ಒಟ್ಟಾರೆ 30ಕ್ಕೂ ಹೆಚ್ಚು ಮಂದಿಯನ್ನು ಸೋಮಶೆಟ್ಟಿಹಳ್ಳಿಯಲ್ಲಿ ವಶಕ್ಕೆ ಪಡೆದು ತೆರವು ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದರು. ಬಳಿಕ ಎರಡು ಮೂರು ಅಂತಸ್ತಿನ ಕಟ್ಟಡಗಳೂ ಸೇರಿದಂತೆ ಹಲವು ಕಟ್ಟಡಗಳನ್ನು ಜೆಸಿಬಿಗಳು ನೆಲಕ್ಕುರುಳಿಸಿದವು. ಪೊಲೀಸರ ನೇತೃತ್ವದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಹೆಚ್ಚುವರಿಯಾಗಿ ಬೇರೆ ಠಾಣೆಗಳಿಂದಲೂ ಪೊಲೀಸರನ್ನು ಕರೆಸಲಾಗಿತ್ತು. ಸುಮಾರು 500 ಕ್ಕೂ ಹೆಚ್ಚು ಪೊಲೀಸ್ ಸರ್ಪಗಾವಲಿನಲ್ಲಿ ತೆರವು ಕಾರ್ಯಾಚರಣೆ ನಡೆಯಿತು.
ಸುಪ್ರೀಂ ಕೋರ್ಟ್ ಆದೇಶದಂತೆ ನೆಲಸಮ
''ಸುಪ್ರೀಂಕೋರ್ಟ್ ಆದೇಶದಂತೆ ಉಪಗ್ರಹ ನಕ್ಷೆ/ಡ್ರೋನ್ ಕ್ಯಾಮೆರಾದಿಂದ ಸೆರೆ ಹಿಡಿದ ಛಾಯಾಚಿತ್ರಗಳನ್ನು ಪರಿಶೀಲಿಸಿ ನ್ಯಾಯಾಲಯದ ಆದೇಶ ಉಲ್ಲಂಘಿಸಿ ನಿರ್ಮಿಸಿರುವ ಮತ್ತು ನಿರ್ಮಿಸುತ್ತಿರುವ ಕಟ್ಟಡಗಳನ್ನು ತೆರವುಗೊಳಿಸಲು ಕ್ರಮ ವಹಿಸಲಾಗುತ್ತಿದೆ. ಮೇಡಿ ಅಗ್ರಹಾರ, ಸೋಮಶೆಟ್ಟಿಹಳ್ಳಿ, ಲಕ್ಷ್ಮಿಪುರ ಸೇರಿದಂತೆ 17 ಗ್ರಾಮಗಳಲ್ಲಿ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಲಾಗುವುದು. ಈ ಸಂಬಂಧ ಯಾವ್ಯಾವ ಕಟ್ಟಡಗಳು ಅನಧಿಕೃತ ಎಂಬುದರ ಪಟ್ಟಿಯನ್ನು ಬಿಡಿಎ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಅಲ್ಲದೆ ನಿವಾಸಿಗಳಿಗೂ ನೋಟಿಸ್ ನೀಡಲಾಗಿತ್ತು. ಸರ್ವೆ ಸಂಖ್ಯೆ 52/1, 54/5 ಮತ್ತು 55/2ರಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಕಟ್ಟಡಗಳನ್ನು ನೆಲಸಮ ಮಾಡಲಾಗಿದೆ. ಅಂತೆಯೇ ಸ್ವಾಧೀನಪಡಿಸಿಕೊಂಡ ಪ್ರತಿ ಎಕರೆಗೆ 9583 ಚದರ ಮೀಟರ್ ಅಭಿವೃದ್ಧಿಪಡಿಸಿದ ಸೈಟ್‌ನೊಂದಿಗೆ ಮಾಲೀಕರಿಗೆ ಪರಿಹಾರವನ್ನು ನೀಡಲಾಗುತ್ತದೆ ಎಂದು ಬಿಡಿಎ ಹಿರಿಯ ಎಂಜಿನಿಯರ್ ತಿಳಿಸಿದರು.
ಇದನ್ನೂ ಓದಿ: ನಂಬಿದ ನಾಯಕರ ವಿಶ್ವಾಸ ದ್ರೋಹದ ನಡುವೆಯೂ ಜೆಡಿಎಸ್ ಕಟ್ಟುತ್ತಾ ಬಂದಿದ್ದೇವೆ: ಕುಮಾರಸ್ವಾಮಿ ಕಣ್ಣೀರು
ಡಾ.ಕಾರಂತ್ ಲೇಔಟ್‌ನಲ್ಲಿ ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಮೂರನೇ ಬಾರಿ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ನಡೆದಿದೆ. ಇಂತಹ ಇನ್ನಷ್ಟು ಅಕ್ರಮ ಕಟ್ಟಡಗಳಿದ್ದು, ಅವುಗಳನ್ನುಕೆಡವಲು ಬಿಡಿಎ ಮುಂದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಿಡಿಎ ನಡೆಸಿದ ಸಮೀಕ್ಷೆಯಲ್ಲಿ 16 ಗ್ರಾಮಗಳಲ್ಲಿ ಹರಡಿರುವ ಸುಮಾರು 500 ಅನಧಿಕೃತ ಕಟ್ಟಡಗಳನ್ನು ಗುರುತಿಸಲಾಗಿದ್ದು, ಸೋಮಶೆಟ್ಟಿಹಳ್ಳಿ ಮತ್ತು ಲಕ್ಷ್ಮೀಪುರಗಳು ಉಲ್ಲಂಘನೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.