ರಾಜ್ಯದ ಕ್ರೈಂ ಇತಿಹಾಸದಲ್ಲೇ ಇದೇ ಮೊದಲು: ಡ್ರಗ್ಸ್ ಫ್ಯಾಕ್ಟರಿ ಮೇಲೆ ಸಿಸಿಬಿ ದಾಳಿ, 2 ಕೋಟಿ ರೂ. ಗೂ ಅಧಿಕ ಮೌಲ್ಯದ ಮಾದಕವಸ್ತು ವಶಕ್ಕೆ

ಕರ್ನಾಟಕ ರಾಜ್ಯದ ಕ್ರೈಂ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಬೆಂಗಳೂರು ಅಪರಾಧ ವಿಭಾಗದ, ಆ್ಯಂಟಿ ನಾರ್ಕೋಟಿಕ್ಸ್ ವಿಭಾಗದ ಅಧಿಕಾರಿಗಳ ತಂಡ ಡ್ರಗ್ಸ್ ತಯಾರಿಕಾ ಘಟಕದ ಮೇಲೆ ದಾಳಿ ಮಾಡಿ ಅಪಾರ ಪ್ರಮಾಣದ ಮಾದಕವಸ್ತು ಮತ್ತು ಅದರ ತಯಾರಿಕೆಗಾಗಿ ಬಳಸಲಾಗುತ್ತಿದ್ದ ರಾಸಾಯನಿಕಗಳನ್ನು ವಶಕ್ಕೆ ಪಡೆದಿದ್ದಾರೆ.
ಡ್ರಗ್ಸ್ ತಯಾರಿಕಾ ಘಟಕದ ಮೇಲೆ ಸಿಸಿಬಿ ದಾಳಿ
ಡ್ರಗ್ಸ್ ತಯಾರಿಕಾ ಘಟಕದ ಮೇಲೆ ಸಿಸಿಬಿ ದಾಳಿ

ಬೆಂಗಳೂರು: ಕರ್ನಾಟಕ ರಾಜ್ಯದ ಕ್ರೈಂ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಬೆಂಗಳೂರು ಅಪರಾಧ ವಿಭಾಗದ, ಆ್ಯಂಟಿ ನಾರ್ಕೋಟಿಕ್ಸ್ ವಿಭಾಗದ ಅಧಿಕಾರಿಗಳ ತಂಡ ಡ್ರಗ್ಸ್ ತಯಾರಿಕಾ ಘಟಕದ ಮೇಲೆ ದಾಳಿ ಮಾಡಿ ಅಪಾರ ಪ್ರಮಾಣದ ಮಾದಕವಸ್ತು ಮತ್ತು ಅದರ ತಯಾರಿಕೆಗಾಗಿ ಬಳಸಲಾಗುತ್ತಿದ್ದ ರಾಸಾಯನಿಕಗಳನ್ನು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಮಾದಕ ದ್ರವ್ಯಗಳನ್ನು ತಯಾರಿಸುತ್ತಿದ್ದ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ಅಪಾರ ಪ್ರಮಾಣದ ಮಾದಕವಸ್ತು ಮತ್ತು ಅದರ ತಯಾರಿಕೆಗಾಗಿ ಬಳಸಲಾಗುತ್ತಿದ್ದ ರಾಸಾಯನಿಕಗಳನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್ ಅವರು ಟ್ವೀಟ್ ಮೂಲಕ ಮಾಹಿತಿ ನೀಡಿದ್ದು, ನಿಷೇಧಿತ ಎಂಡಿಎಂಎ ಮಾದಕವಸ್ತು ತಯಾರಿಸುತ್ತಿದ್ದ ಆರೋಪದ ಮೇರೆಗೆ ನೈಜಿರಿಯಾ ಮೂಲದ ಜಾನ್ ಎಂಬಾತನನ್ನು ಬಂಧಿಸಲಾಗಿದೆ. ಅಲ್ಲದೆ ಆತನಿಂದ ಸುಮಾರು 2 ಕೋಟಿ ರೂ.ಗೂ ಅಧಿಕ ಮೌಲ್ಯದ ಮಾದಕವಸ್ತು ಮತ್ತು ಅದರ ತಯಾರಿಕೆಯಲ್ಲಿ ಬಳಸಲಾಗುತ್ತಿದ್ದ ರಾಸಾಯನಿಕವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಅಧಿಕಾರಿಗಳ ಮೂಲಗಳ ಪ್ರಕಾರ ಎಲೆಕ್ಟ್ರಾನಿಕ್ ಸಿಟಿ ಪಕ್ಕದ ಬೆಟ್ಟದಾಸನಪುರದಲ್ಲಿ ವೃದ್ದ ದಂಪತಿಗಳಿಂದ ಮನೆಯನ್ನು ಬಾಡಿಗೆಗೆ ಪಡೆದಿದ್ದ ನೈಜೀರಿಯಾ ಪ್ರಜೆ ಜಾನ್, ತನ್ನ ರಾಸಾಯನಿಕ ಶಿಕ್ಷಣವನ್ನು ದುರುಪಯೋಗ ಪಡಿಸಿಕೊಂಡು ಮನೆಯಲ್ಲೇ ಸಿಂಥೆಟಿಕ್ ಡ್ರಗ್ಸ್ ತಯಾರಿಕೆಯಲ್ಲಿ ತೊಡಗಿದ್ದ, ಇದಕ್ಕೆ ಬೇಕಾಗುವ ಎಲ್ಲ ರೀತಿಯ ರಾಸಾಯನಿಕಗಳನ್ನು ಅಪಾರ ಪ್ರಮಾಣದಲ್ಲಿ ಮನೆಯಲ್ಲಿ ದಾಸ್ತಾನು ಮಾಡಿಟ್ಟಿದ್ದ ಎನ್ನಲಾಗಿದೆ.

ಈ ಹಿಂದೆ ಮಾದಕವಸ್ತುಗಳು ವಿದೇಶದಲ್ಲಿ ತಯಾರಾಗಿ ಬಳಿಕ ಕಳ್ಳ ಸಾಗಣೆ ಮೂಲಕ ಭಾರತ ಪ್ರವೇಶಿಸುತ್ತಿತ್ತು. ಆದರೆ ಈಗ ನೇರವಾಗಿ ಕೆಲ ದುಷ್ಕರ್ಮಿಗಳು ದೇಶದಲ್ಲೇ ಮಾದಕವಸ್ತುಗಳನ್ನು ತಯಾರಿಸುವ ಧೈರ್ಯ ಮಾಡುತ್ತಿದ್ದಾರೆ. ಇದು ಕೇವಲ ಜನ ಸಾಮಾನ್ಯರನ್ನು ಮಾತ್ರವಲ್ಲ ಇಡೀ ಪೊಲೀಸ್ ವ್ಯವಸ್ಥೆಯೇ ಬೆಚ್ಚಿ ಬೀಳುವಂತೆ ಮಾಡಿದೆ.

ಐದು ಮಾದರಿಯ ವಿವಿಧ ಕೆಮಿಕಲ್ ಬಳಸಿ ಡ್ರಗ್ಸ್ ತಯಾರಿಕೆ
ಇನ್ನು ಬಂಧಿತ ಜಾನ್ ಐದು ಮಾದರಿಯ ವಿವಿಧ ಕೆಮಿಕಲ್ ಬಳಸಿ ಡ್ರಗ್ಸ್ ತಯಾರಿಕೆ ಮಾಡುತ್ತಿದ್ದ ಎನ್ನಲಾಗಿದೆ. ಡ್ರಗ್ಸ್ ತಯಾರು ಮಾಡಿ ಬೆಂಗಳೂರು ಸೇರಿದಂತೆ ಬೇರೆ ಬೇರೆ ರಾಜ್ಯ ಹಾಗೂ ಬೇರೆ ದೇಶಕ್ಕೂ ರವಾನೆ ಮಾಡುತ್ತಿದ್ದ. ಸಿಂಥೆಟಿಕ್ ಡ್ರಗ್ಸ್ ಅನ್ನು ಅತ್ಯುತ್ತಮ ಮಾದರಿಯಾಗಿ ತಯಾರು ಮಾಡಲಾಗುತಿತ್ತು. ಎಂಡಿಎಂಎ ಕ್ರಿಸ್ಟಲ್ ಎಂಬ ಫೈನ್ ಕ್ವಾಲಿಟಿ ಡ್ರಗ್ಸ್ ತಯಾರು ಮಾಡಲಾಗುತ್ತಿತ್ತು ಎಂದು ಹೇಳಲಾಗಿದೆ. 

ಇದನ್ನೂ ಓದಿ: ಸಿಸಿಬಿ ಭರ್ಜರಿ ಕಾರ್ಯಾಚರಣೆ: ಕುಖ್ಯಾತ ಡ್ರಗ್ ಪೆಡ್ಲರ್‌ಗಳ ಬಂಧನ; 2 ಕೋಟಿ ರೂ. ಮೌಲ್ಯದ ಮಾದಕ ವಸ್ತು ವಶ
ಕಳೆದ ಹಲವು ದಿನಗಳಿಂದ ಜಾನ್ ಚಟುವಟಿಕೆಗಳ ಮೇಲೆ ಕಣ್ಣಿಟ್ಟಿದ್ದ ಸಿಸಿಬಿಯ ಆ್ಯಂಟಿ ನಾರ್ಕೊಟಿಕ್ಸ್ ವಿಭಾಗದ ಎಸಿಪಿ ತಂಡ, ಇಂದು ಖಚಿತ ಮಾಹಿತಿ ಮೇರೆಗೆ ಡ್ರಗ್ಸ್ ಫ್ಯಾಕ್ಟರಿ ಮೇಲೆ ದಾಳಿ ಮಾಡಿ 2 ಕೋಟಿಗೂ ಹೆಚ್ಚು ಮೌಲ್ಯದ ಎಂಡಿಎಂಎ ಕ್ರಿಸ್ಟಲ್ ಡ್ರಗ್ಸ್ ವಶಕ್ಕೆ ಪಡೆದುಕೊಂಡಿದೆ. ಅಲ್ಲದೆ ಡ್ರಗ್ಸ್ ತಯಾರಿಗೆ ಬಳಸುತಿದ್ದ ಕೋಟ್ಯಂತರ ರೂ. ಬೆಲೆಯ ಆ್ಯಸಿಡ್ ಹಾಗೂ ಇತರ ಕೆಮಿಕಲ್ ಗಳನ್ನು ವಶಕ್ಕೆ ಪಡೆಯಲಾಗಿದ್ದು, ಇನ್ನೂ ಹೆಚ್ಚಿನ ವಿಚಾರಣೆಯನ್ನು ಪೊಲೀಸ್ ತಂಡ ನಡೆಸುತ್ತಿದೆ.

ಶೂ ಸೋಲ್ ನಲ್ಲಿ ಡ್ರಗ್ಸ್ ಅಡಗಿಸಿ ನ್ಯೂಜಿಲೆಂಡ್ ಗೆ ರವಾನೆ
ಇನ್ನು ಪೊಲೀಸರು ನೀಡಿರುವ ಮಾಹಿತಿಯಂತೆ ಆರೋಪಿ ಜಾನ್ ಶೂಗಳ ಸೋಲ್ ನಲ್ಲಿ ಡ್ರಗ್ಸ್ ಗಳನ್ನು ಅವಿತಿಟ್ಟು ನ್ಯೂಜಿಲೆಂಡ್ ಮತ್ತು ಇತರೆ ದೇಶಗಳಿಗೆ ಕೊರಿಯರ್ ಮೂಲಕ ರವಾನೆ ಮಾಡುತ್ತಿದ್ದ ಎಂದು ಸಿಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com