ಬೆಂಗಳೂರು: 60 ಪಟಾಕಿ ಪೆಟ್ಟಿಗೆ ಸಂಗ್ರಹಿಸಿಟ್ಟಿದ್ದ ಗೋದಾಮಿನಲ್ಲಿ ಸ್ಫೋಟ; ಮೂವರು ಸಾವು, ಐವರಿಗೆ ಗಾಯ
ಬೆಂಗಳೂರು: ವಿವಿ ಪುರಂ ಪೊಲೀಸ್ ಠಾಣೆ ವ್ಯಾಪ್ತಿಯ ನ್ಯೂ ತರಗುಪೇಟೆಯ ಶ್ರೀ ಪತ್ರಕಾಳಿ ಲಾರಿ ಸರ್ವಿಸಸ್ ಒಳಗಡೆ ಇಂದು ಮಧ್ಯಾಹ್ನ ಸ್ಫೋಟ ಸಂಭವಿಸಿದ ನಂತರ ಮೂವರು ಮೃತಪಟ್ಟಿದ್ದು, ಐವರು ತೀವ್ರ ಗಾಯಗಳೊಂದಿಗೆ ಪ್ರಾಣಪಾಯದಿಂದ ಪಾರಾಗಿದ್ದಾರೆ. ಮೃತದೇಹಗಳು ಛಿದ್ರ ಛಿದ್ರಗೊಂಡಿದ್ದು, ಸ್ಫೋಟದಿಂದಾಗಿ ನಿಲ್ಲಿಸಲಾಗಿದ್ದ 10 ಬೈಕ್ ಗಳಿಗೂ ಹಾನಿಯಾಗಿದೆ.
ಹಿರಿಯ ಪೊಲೀಸರು ಹಾಗೂ ಎಫ್ ಎಸ್ ಎಲ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 60 ಪಟಾಕಿ ಪೆಟ್ಟಿಗೆಗಳನ್ನು ಗೋದಾಮಿನ ಒಳಗಡೆ ಸಂಗ್ರಹಿಸಿಡಲಾಗಿತ್ತು. ಈ ಸ್ಫೋಟಕಗಳೇ ಸ್ಪೋಟಕ್ಕೆ ಕಾರವಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಎಲ್ ಪಿಜಿ ಸೋರಿಕೆ ಅಥವಾ ವಿದ್ಯುತ್ ಶಾರ್ಟ್ ಸರ್ಕಿಟ್ ನ್ನು ಅವರು ತಳ್ಳಿ ಹಾಕಿದ್ದಾರೆ.
ಗೋದಾಮಿನ ಒಳಗಡೆ ಕೈಗಾರಿಕಾ ಸರಕುಗಳು ಕಂಡುಬಂದಿವೆ, ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳ ಅಭಿಪ್ರಾಯಕ್ಕಾಗಿ ಕಾಯುತ್ತಿದ್ದೇವೆ, ಪಟಾಕಿಗಳನ್ನು ಕಾನೂನು ಪ್ರಕಾರ ಸಂಗ್ರಹಿಸಿಡಲಾಗಿತ್ತೇ, ಅಥವಾ ಅಕ್ರಮವಾಗಿ ಸಂಗ್ರಹಿಸಿಡಲಾಗಿತ್ತೆ ಎಂಬುದರ ಬಗ್ಗೆ ಪರಿಶೀಲನೆ ನಡೆಸುತ್ತಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಮೃತರನ್ನು ಅಸ್ಲಾಂ ಪಾಶ ಮತ್ತು ಮನೋಹರ್ ಎಂದು ಗುರುತಿಸಲಾಗಿದೆ. ಮಂಜುನಾಥ್ ಹಾಗೂ ಗಣಪತಿ ತೀವ್ರವಾಗಿ ಗಾಯಗೊಂಡಿದ್ದರೆ, ಇತರ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದರು.
ಮಧ್ಯಾಹ್ನ ಸುಮಾರು 12-15ರಲ್ಲಿ ಸ್ಫೋಟ ಸಂಭವಿಸಿತು. ತಕ್ಷಣ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ಮುಟ್ಟಿಸಿದಾಗಿ ಪ್ರತ್ಯೇಕ್ಷದರ್ಶಿ ಸುರೇಶ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
ಮೃತದೇಹಗಳನ್ನು ನಗರದ ಬೌರಿಂಗ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಗಾಯಾಳು ಚೇತರಿಸಿಕೊಳ್ಳುತ್ತಿದ್ದಾರೆ. ಪೊಲೀಸರು ಈವರೆಗೂ ಗೋದಾಮಿನ ಮಾಲೀಕರನ್ನು ಪತ್ತೆ ಹಚ್ಚಿಲ್ಲ. ನಿರ್ಲಕ್ಷ್ಯದ ಕಾರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ