ಚಾಮರಾಜಪೇಟೆ ಮೈದಾನ ಗಣೇಶೋತ್ಸವ: '5 ಅರ್ಜಿಗಳ ಪೈಕಿ 3 ತಿರಸ್ಕೃತ, ಕೋಳಿ ಕೇಳಿ ಮಸಾಲೆ ಅರೆಯೋಕೆ ಆಗಲ್ಲ'; ಜಮೀರ್ ಗೆ ಅಶೋಕ್ ಟಾಂಗ್

ತೀವ್ರ ಕುತೂಹಲ ಕೆರಳಿಸಿರುವ ಚಾಮರಾಜಪೇಟೆ ಮೈದಾನ ಗಣೇಶೋತ್ಸವ ವಿಚಾರಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ಐದು ಅರ್ಜಿಗಳ ಪೈಕಿ 3 ಅರ್ಜಿಗಳು ತಿರಸ್ಕೃತವಾಗಿವೆ ಎಂದು ಕಂದಾಯ ಸಚಿವ ಆರ್ ಆಶೋಕ್ ಹೇಳಿದ್ದಾರೆ.
ಚಾಮರಾಜಪೇಟೆ ಮೈದಾನದಲ್ಲಿ ಸಚಿವ ಅಶೋಕ್
ಚಾಮರಾಜಪೇಟೆ ಮೈದಾನದಲ್ಲಿ ಸಚಿವ ಅಶೋಕ್

ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿರುವ ಚಾಮರಾಜಪೇಟೆ ಮೈದಾನ ಗಣೇಶೋತ್ಸವ ವಿಚಾರಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ಐದು ಅರ್ಜಿಗಳ ಪೈಕಿ 3 ಅರ್ಜಿಗಳು ತಿರಸ್ಕೃತವಾಗಿವೆ ಎಂದು ಕಂದಾಯ ಸಚಿವ ಆರ್ ಆಶೋಕ್ ಹೇಳಿದ್ದಾರೆ.

ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅನುಮತಿ ಕೊಡಬೇಕೆ ಬೇಡವೇ ಅನ್ನೋ ಬಗ್ಗೆ ಇಂದು ಸಿಎಂ ಬೊಮ್ಮಾಯಿ ಅನುಪಸ್ಥಿತಿಯಲ್ಲಿ ಕಂದಾಯ ಇಲಾಖೆ ಸಚಿವ ಆರ್. ಅಶೋಕ್ ಅವರು ಹಿರಿಯ ಅಧಿಕಾರಿಗಳ ಸಭೆ ನಡೆಸಿದ್ದು, ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಆರ್.ಅಶೋಕ್, ಚಾಮರಾಮಪೇಟೆ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅನುಮತಿ ಕೋರಿ ಬಂದ ಐದು ಅರ್ಜಿಗಳ ಪೈಕಿ ಮೂರು ತಿರಸ್ಕೃತಗೊಂಡಿದೆ. ಗಣೇಶೋತ್ಸವಕ್ಕೆ 5 ಅರ್ಜಿಗಳು ಸಲ್ಲಿಕೆ ಅಗಿದ್ದು, 2 ಅರ್ಜಿಗಳು ಸ್ಥಳೀಯರದ್ದಾಗಿದೆ. ಈ ಸಂಬಂಧ ಬಿಬಿಎಂಪಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯ ಬಳಿಕ ಮಾತನಾಡಿದ ಅವರು, ಇವತ್ತು ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇನೆ. ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ಸುದೀರ್ಘವಾಗಿ ಚರ್ಚೆ ಮಾಡಿದ್ದೇವೆ. ಆದರೆ ಇನ್ನೂ ನ್ಯಾಯಾಲಯದ ಅಂತಿಮ ತೀರ್ಪು ಬರಬೇಕಿದೆ ಎಂದರು. 

ಕೋಳಿ ಕೇಳಿ ಮಸಾಲೆ ಅರೆಯೋಕೆ ಆಗಲ್ಲ
ಇದೇ ವೇಳೆ ಅಶೋಕ್ ಸ್ಥಳೀಯ ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿಕೆಗೆ ತಿರುಗೇಟು ನೀಡಿದ್ದು, 75 ವರ್ಷಗಳಿಂದಲೂ ಮೈದಾನದಲ್ಲಿ ಧ್ವಜ ಹಾರಿಸಿರಲ್ಲ, ವಿರೋಧಿಸುತ್ತಲೇ ಬಂದಿದ್ದಾರೆ. ಕೋಳಿ ಕೇಳಿ ಮಸಾಲೆ ಅರೆಯೋಕೆ ಆಗುತ್ತಾ... ಸಿಎಂ ಜೊತೆ ಸುಮಾರು 2 ಗಂಟೆಗಳ ಕಾಲ ಇದರ ಬಗ್ಗೆ ಚರ್ಚೆ ನಡೆಸಿದ್ದೇನೆ. ಇವತ್ತು ಸಭೆ ನಡೆಸುವಂತೆ ಸೂಚಿಸಿದ್ದರು. ಅದರಂತೆ ಸಭೆ ನಡೆಸಿದ್ದೇವೆ. ಸಭೆಯಲ್ಲಿ ಗಣೇಶೋತ್ಸವ ಮಾಡೋದಾದರೇ ಹೇಗೆ ಮಾಡಬೇಕು? ಮುಂಜಾಗ್ರತಾ ಕ್ರಮಗಳೇನು ತೆಗೆದುಕೊಳ್ಳಬೇಕು? ಎಲ್ಲಿ ಕೂರಿಸಬೇಕು? ಸಂಭ್ರಮಾಚರಣೆ ಬಗ್ಗೆ ಹಾಗೂ ಮೆರವಣಿಗೆ ಎಲ್ಲಿಂದ ಸಾಗಬೇಕು? ಹೀಗೆ ಪ್ರತಿಯೊಂದರ ಬಗ್ಗೆ ಇವತ್ತು ಚರ್ಚೆ ಮಾಡಿದ್ದೇವೆ ಎಂದು ಹೇಳಿದರು.

ಈ ಹಿಂದೆ ಮೈದಾನದಲ್ಲಿ ಆಗಸ್ಟ್ 15 ರಂದು ಧ್ವಜಾರೋಹಣ ಮಾಡಿದ್ದೆವು. ಆ ಸಂದರ್ಭದಲ್ಲಿ ಯಾವುದೇ ಸಮಸ್ಯೆ ಇಲ್ಲದೆ ನಡೆಸಲಾಗಿತ್ತು. ಅದೇ ರೀತಿ ಇದನ್ನೂ ಮಾಡಲು ಪ್ರಯತ್ನ ಮಾಡಲಾಗುವುದು ಎಂದು ಆಶೋಕ್ ಹೇಳಿದರು.

ಬೆಂಗಳೂರಿನ ವಿವಾದಿತ ಚಾಮರಾಜಪೇಟೆ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅನುಮತಿ ಕೊಡುವ ಅಧಿಕಾರವನ್ನು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೀಡಿದೆ. ಶುಕ್ರವಾರ ಈ ಕುರಿತಾಗಿ ತೀರ್ಪು ನೀಡಿದ್ದು, ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com