ಚಾಮರಾಜಪೇಟೆ ಮೈದಾನ ವಿವಾದ: ಬಿಬಿಎಂಪಿ ವಿರುದ್ಧ ಕಾನೂನು ಸಮರ- ವಕ್ಫ್ ಬೋರ್ಡ್

ಚಾಮರಾಜಪೇಟೆ ಮೈದಾನ ವಿವಾದಕ್ಕೆ ಸಂಬಂಧಿಸಿದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿರುದ್ಧ ಕಾನೂನು ಸಮರ ನಡೆಸಲಿದ್ದೇವೆ ಎಂದು ಕರ್ನಾಟಕ ವಕ್ಫ್ ಬೋರ್ಡ್ ಹೇಳಿದೆ.
ಚಾಮರಾಜಪೇಟೆ ಈದ್ಗಾ ಮೈದಾನ
ಚಾಮರಾಜಪೇಟೆ ಈದ್ಗಾ ಮೈದಾನ

ಬೆಂಗಳೂರು: ಚಾಮರಾಜಪೇಟೆ ಮೈದಾನ ವಿವಾದಕ್ಕೆ ಸಂಬಂಧಿಸಿದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿರುದ್ಧ ಕಾನೂನು ಸಮರ ನಡೆಸಲಿದ್ದೇವೆ ಎಂದು ಕರ್ನಾಟಕ ವಕ್ಫ್ ಬೋರ್ಡ್ ಹೇಳಿದೆ.

ಚಾಮರಾಜಪೇಟೆ ಮೈದಾನ ವಿಚಾರಕ್ಕೆ ಸಂಬಂಧಿಸಿದಂತೆ ಕೋರ್ಟ್ ತೀರ್ಪಿನ ಕುರಿತು ಬಿಬಿಎಂಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಚಿಂತನೆ ನಡೆಸಿದ್ದೇವೆ ಎಂದು ವಕ್ಫ್ ಮಂಡಳಿ ಹೇಳಿದೆ. ಈ ಕುರಿತು ಮಾತನಾಡಿರುವ ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸಅದಿ, ಚಾಮರಾಜಪೇಟೆಯ ಮೈದಾನ ಕಂದಾಯ ಇಲಾಖೆಗೆ ಸೇರಿದ್ದು ಎಂಬ ಬಿಬಿಎಂಪಿ ಜಂಟಿ ಆಯುಕ್ತ ಎಸ್‌ಎಂ ಶ್ರೀನಿವಾಸ ಅವರ ಹೇಳಿಕೆಯನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಹೋರಾಟ ನಡೆಸಲಿದ್ದೇವೆ. ತಾವು ಮತ್ತು ಸೆಂಟ್ರಲ್ ಮುಸ್ಲಿಂ ಅಸೋಸಿಯೇಷನ್ ​​ಕಾನೂನು ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಹೇಳಿದ್ದಾರೆ.

ಚಾಮರಾಜಪೇಟೆಯಲ್ಲಿ ಹಿಂದೂ-ಮುಸ್ಲಿಂ ಬಾಂಧವರು ಸೌಹಾರ್ದತೆಯಿಂದ ಬಾಳುತ್ತಿದ್ದಾರೆ. ಆದರೆ ಹೊರಗಿನವರ ಪ್ರಭಾವದಿಂದ ಕೆಲಕಾಲ ಉದ್ವಿಗ್ನತೆ ಉಂಟಾಗಿದ್ದು, ಜಂಟಿ ಆಯುಕ್ತರ ಮೇಲೆ ಪ್ರಭಾವ ಬೀರಿದ್ದರಿಂದ ಈ ನಿರ್ಧಾರಕ್ಕೆ ಬರಲಾಗಿದೆ. ವಕ್ಫ್ ಬೋರ್ಡ್ ಮತ್ತು ಸೆಂಟ್ರಲ್ ಮುಸ್ಲಿಂ ಅಸೋಸಿಯೇಷನ್ ​​ಜಂಟಿ ಆಯುಕ್ತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿದೆ'' ಎಂದು ಸಅದಿ ಹೇಳಿದರು.

ಇದಕ್ಕೆ ತಿರುಗೇಟು ನೀಡಿರುವ ಬಿಬಿಎಂಪಿ ಜಂಟಿ ಆಯುಕ್ತ ಎಸ್‌ಎಂ ಶ್ರೀನಿವಾಸ ಅವರು, ವಿವಾದಿತ ಮೈದಾನದ ಮಾಲಿಕತ್ವ ಕುರಿತು ಹೆಚ್ಚುವರಿ ದಾಖಲೆಗಳನ್ನು ಒದಗಿಸಲು ಮಂಡಳಿಗೆ ಸಾಕಷ್ಟು ಸಮಯ ನೀಡಲಾಗಿತ್ತು. ಆದಾಗ್ಯೂ ಅವರು ಸೂಕ್ತ ದಾಖಲೆ ನೀಡಿರಲಿಲ್ಲ. ಅಂತಿಮ ಗಡುವು ಮುಕ್ತಾಯದ ಬಳಿಕ ತಮ್ಮ ನಿರ್ಧಾರಕ್ಕೆ ಬರಲಾಗಿದೆ. ಆದರೆ ವಕ್ಫ್ ಮಂಡಳಿಯು ಅವರ ಮಾಲೀಕತ್ವವನ್ನು ಸಾಬೀತುಪಡಿಸಲು ವಿಫಲವಾಗಿದೆ. ವಕ್ಫ್ ಮಂಡಳಿಯು ಕ್ರಮ ಕೈಗೊಂಡರೆ ಬಿಬಿಎಂಪಿ ಕೂಡ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಿದರು.

ಇತ್ತೀಚೆಗಷ್ಟೇ ವಿವಾದಿತ ಮೈದಾನದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಮತ್ತು ರಂಜಾನ್ ಮತ್ತು ಬಕ್ರೀದ್ ಪ್ರಾರ್ಥನೆಗಳಿಗೆ ಮಾತ್ರ ಅವಕಾಶ ನೀಡಬೇಕು. ಉಳಿದಂತೆ ಆಟದ ಮೈದಾನವಾಗಿ ಮುಂದುವರೆಯಬೇಕು ಎಂದು ಹೈಕೋರ್ಟ್ ಮಧ್ಯಂತರ ಆದೇಶವನ್ನು ಜಾರಿಗೊಳಿಸಿತ್ತು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com