ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ: ಸಿಸಿಟಿವಿ ಅಳವಡಿಕೆಗೆ ಸ್ಥಳೀಯರ ವಿರೋಧ, ಪೊಲೀಸರೊಂದಿಗೆ ವಾಗ್ವಾದ

ಚಾಮರಾಜಪೇಟೆ ಈದ್ಗಾ ಮೈದಾನ ವಿವಾದಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ಅಳವಡಿಕೆಗೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಶುಕ್ರವಾರ ಚಾಮರಾಜಪೇಟೆ ಮೈದಾನದಲ್ಲಿ ಹೈಡ್ರಾಮಾವೇ ನಡೆದಿದೆ. 
ಚಾಮರಾಜಪೇಟೆ ಈದ್ಗಾ ಮೈದಾನ
ಚಾಮರಾಜಪೇಟೆ ಈದ್ಗಾ ಮೈದಾನ
Updated on

ಬೆಂಗಳೂರು: ಚಾಮರಾಜಪೇಟೆ ಈದ್ಗಾ ಮೈದಾನ ವಿವಾದಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ಅಳವಡಿಕೆಗೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಶುಕ್ರವಾರ ಚಾಮರಾಜಪೇಟೆ ಮೈದಾನದಲ್ಲಿ ಹೈಡ್ರಾಮಾವೇ ನಡೆದಿದೆ. 

ಮೈದಾನದಲ್ಲಿ ಸ್ಥಳೀಯ ಹಿಂದೂ, ಮುಸ್ಲಿಮರು ಜಮಾವಣೆಗೊಂಡಿದ್ದು, ಪರಿಸ್ಥಿತಿ ತಿಳಿಗೊಳಿಸಲು ಪೊಲೀಸ್ ಸಿಬ್ಬಂದಿ ಹರಸಾಹಸ ಪಟ್ಟರು. ವಿವಾದಿತ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ನಿಯಂತ್ರಿಸುವ ನಿಟ್ಟಿನಲ್ಲಿ ಬಿಬಿಎಂಪಿ ಸಹಕಾರದಲ್ಲಿ ಸಿಸಿಕ್ಯಾಮರಾ ಅಳವಡಿಕೆ ಕೆಲಸ ಮಾಡಲಾಗುತ್ತಿತ್ತು. ಆದರೆ ಇದಕ್ಕೆ ಸ್ಥಳೀಯ ನಿವಾಸಿಗಳು ವಿರೋಧ ವ್ಯಕ್ತಪಡಿಸಿದ್ದು, ಜೆಸಿಬಿ ಕೆಲಸಕ್ಕೆ ಅವಕಾಶ ನೀಡಲ್ಲ ಎಂದು ಪಟ್ಟು ಹಿಡಿದಿದ್ದರು. ವರ್ಕ್ ಆರ್ಡರ್​ ಇಲ್ಲದೆ ಹೇಗೆ ಕಾಮಗಾರಿ ನಡೆಸುತ್ತಿದ್ದೀರಿ. ಸಿಸಿಕ್ಯಾಮರಾ ಅಳವಡಿಕೆಗೆ ಬಿಡಲ್ಲ ಎಂದು ನಿವಾಸಿಗಳು ವಾದ ಮಾಡಿದರು. ಈ ವೇಳೆ ಸ್ಥಳೀಯ ನಿವಾಸಿಗಳು, ಪೊಲೀಸರ ನಡುವೆ ಮಾತಿನ ಚಕಮಕಿ ಉಂಟಾಗಿದ್ದು, ಕೂಡಲೇ ಕೆಲಸ ನಿಲ್ಲಿಸುವಂತೆ ಮೈದಾನಕ್ಕೆ ಮತ್ತಷ್ಟು ಮಂದಿ ನುಗ್ಗಿದರು. ಚಾಮರಾಜಪೇಟೆ ಮೈದಾನದಲ್ಲಿ ಸಿಸಿಕ್ಯಾಮರಾ ಹಾಕುವುದು ಬೇಡ. ಕೂಡಲೇ ಕೆಲಸ ನಿಲ್ಲಿಸಿ ಎಂದು ಪೊಲೀಸರಿಗೆ ಸ್ಥಳೀಯರು ಒತ್ತಾಯಿಸಿದ್ದಾರೆ. ಸ್ಥಳೀಯರನ್ನು ಖಾಲಿ ಮಾಡಿಸಲು ಪೊಲೀಸರ ಹರಸಾಹಸ ಪಟ್ಟಿದ್ದು, ಯಾವುದೇ ಕಾರಣಕ್ಕೂ ನಾವು ಇಲ್ಲಿಂದ ಹೋಗಲ್ಲವೆಂದು ಪಟ್ಟು ಹಿಡಿದಿದ್ದರು.

ಈ ಕುರಿತು ಮಾಹಿತಿ ನೀಡಿದ ಬೆಂಗಳೂರು ಪಶ್ಚಿಮ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿ, ವಿವಾದಿತ ಜಾಗದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದೆ ಎಂದು ಭಾವಿಸಿ ಸಾರ್ವಜನಿಕರು ಆಕ್ರೋಶಗೊಂಡು ಪೊಲೀಸರು ಮತ್ತು ಬಿಬಿಎಂಪಿ ಅಧಿಕಾರಿಗಳೊಂದಿಗೆ ವಾಗ್ವಾದಕ್ಕಿಳಿದರು. ಆದರೆ ಸುರಕ್ಷತೆಗಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಮಾತ್ರ ಅಳವಡಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವೇಳೆ ಸ್ಥಳೀಯರು, ಕೇವಲ ಒಂದು ನಿರ್ದಿಷ್ಟ ಸಮುದಾಯಕ್ಕೆ ಇಲ್ಲಿ ಆದ್ಯತೆ ನೀಡಲಾಗಿದೆ. ಇತರರಿಗೆ ಮೈದಾನವನ್ನು ಬಳಸಲು ಅವಕಾಶ ನೀಡುತ್ತಿಲ್ಲ ಎಂದು ಅಧಿಕಾರಿಗಳ ವಿರುದ್ಧ ಸ್ಥಳೀಯರು ಕೆಂಡಕಾರಿದರು.

ಮಾಜಿ ಕಾರ್ಪೋರೇಟರ್ ತರಾಟೆ
 ಇನ್ನು ಈ ಕುರಿತು ಸ್ಥಳೀಯ ಮಾಜಿ ಕಾರ್ಪೊರೇಟರ್ ಬಿ.ವಿ.ಗಣೇಶ್ ಮಾತನಾಡಿ, ಮೈದಾನದ ಆವರಣದಲ್ಲಿ ಕೆಲವು ನಿರ್ಮಾಣಗಳು ನಡೆಯುತ್ತಿವೆ ಎಂದು ಸ್ಥಳೀಯರಿಂದ ಸುಮಾರು 50 ರಿಂದ 60 ಕರೆಗಳು ಬಂದಿದ್ದು, ವಿರೋಧ ವ್ಯಕ್ತಪಡಿಸಿದ್ದಾರೆ. ನಾನು ಸ್ಥಳಕ್ಕೆ ಧಾವಿಸಿ ಭೂಮಿ ಅಗೆದಿರುವುದನ್ನು ಗಮನಿಸಿದೆ. ನಾನು ಎಇಇ ಅವರಿಂದ ಸ್ಪಷ್ಟನೆ ಕೇಳುತ್ತಿದ್ದಂತೆ, ನಡೆಯುತ್ತಿರುವ ಬೆಳವಣಿಗೆಯಿಂದ ಕೋಪಗೊಂಡ ಅನೇಕ ಸ್ಥಳೀಯರು ವಾಗ್ವಾದದಲ್ಲಿ ತೊಡಗಿದರು. ಆದರೆ ಸ್ಪಷ್ಟೀಕರಣದ ನಂತರ, ಸ್ಥಳೀಯರನ್ನು ಸ್ಥಳದಿಂದ ಕಳುಹಿಸಲಾಯಿತು ಎಂದರು.

ಅಹಿತಕರ ಘಟನೆ ನಡೆಯದಂತೆ ಸಿಸಿ ಕ್ಯಾಮರಾಗಳ ಅಳವಡಿಕೆ
ಇನ್ನು ಸ್ಥಳೀಯರ ಆತಂಕ ಮತ್ತು ವಿರೋಧದ ಹಿನ್ನಲೆಯಲ್ಲಿ ಈ ಕುರಿತು ಸ್ಪಷ್ಟನೆ ನೀಡಿರುವ ಬಿಬಿಎಂಪಿ ಅಧಿಕಾರಿಗಳು ಮತ್ತು ಪೊಲೀಸರು, 'ಚಾಮರಾಜಪೇಟೆ ಮೈದಾನದಲ್ಲಿ‌ ಅಹಿತಕರ ಘಟನೆ ನಡೆಯದಂತೆ ಸಿಸಿ ಕ್ಯಾಮರಾಗಳ ಅಳವಡಿಕೆಗೆ ಬಿಬಿಎಂಪಿಗೆ ಸ್ಥಳೀಯ ಪೊಲೀಸ್ ಠಾಣಾ ಪೊಲೀಸರು ಮನವಿ ಮಾಡಿದ್ದರು. ಇದರನ್ವಯ ಇಂದು ಬೆಳಗ್ಗೆ ಸಿಬ್ಬಂದಿಗಳು ಕಾರ್ಯಚರಣೆ ಆರಂಭಿಸಿದ್ದರು. ಸಿಸಿ ಕ್ಯಾಮರಾಗಳ ಅಳವಡಿಕೆಗೆ ಬಿಬಿಎಂಬಿ ಪಶ್ಚಿಮ ವಿಭಾಗದ ಜಂಟಿ ಆಯುಕ್ತ ಶ್ರೀನಿವಾಸ್ ಮೌಕಿಕ ಆದೇಶ ನೀಡಿದ್ದರು. ಮೌಖಿಕ ಆದೇಶದ ಮಾಹಿತಿ ನೀಡಿದ್ದರಿಂದ ಈ ಗೊಂದಲವಾಗಿದೆ. ಪತ್ರದ ಮೂಲಕ‌ ಸಿಸಿ ಕ್ಯಾಮರಾ ಅಳವಡಿಕೆಗೆ ಯಾವುದೇ ಆದೇಶ ಆಗಿಲ್ಲ. ಭದ್ರತೆ ದೃಷ್ಟಿಯಿಂದ ಪೊಲೀಸರು ಮತ್ತು ಬಿಬಿಎಂಪಿ 12 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುತ್ತಿದೆ. ಸಿಸಿಟಿವಿ ಅಳವಡಿಕೆಗಾಗಿ ಭೂಮಿ ಅಗೆಯಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪ್ರಸ್ತುತ ಬೆಂಗಳೂರಿನ ಚಾಮರಾಜಪೇಟೆಯ ಈದ್ಗಾ ಮೈದಾನ ಸುತ್ತಮುತ್ತ ಪೊಲೀಸ್ ಬಿಗಿ ಬಂದೋಬಸ್ತ್ ಒದಗಿಸಲಾಗಿದೆ. ಮೈದಾನದಲ್ಲಿ ಸಿಸಿಕ್ಯಾಮರಾ ಅಳವಡಿಸಿಲು ಬಿಬಿಎಂಪಿ ಮುಂದಾಗಿದ್ದು, ಗಲಭೆ ನಡೆಯುವ ಮುನ್ನವೇ ಎಚ್ಚೆತ್ತುಕೊಂಡು ಸ್ಥಳದಲ್ಲಿ ಭದ್ರತೆಗೆ ಮುಂದಾಗಿದೆ. ಪೊಲೀಸ್ ಇಲಾಖೆ ಮನವಿ ಮೇರೆಗೆ ಸಿಸಿಕ್ಯಾಮರಾ ಅಳವಡಿಕೆ ಮಾಡಲಾಗುತ್ತಿದೆ. ಈದ್ಗಾ ಗೋಡೆಯ ಸುತ್ತ ಒಟ್ಟು 8 ಸಿಸಿಕ್ಯಾಮರಾಗಳು, ಮೈದಾನದಲ್ಲಿ ಒಟ್ಟು 12ಕ್ಕೂ ಹೆಚ್ಚು ಸಿಸಿಕ್ಯಾಮರಾಗಳ ಅಳವಡಿಕೆ ಮಾಡಲಾಗುತ್ತಿದೆ. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಸ್ಥಳೀಯ ಪೊಲೀಸರಿಂದ ಮೈದಾನದಲ್ಲಿ ಭದ್ರತೆ ಮುಂದುವರಿದಿದೆ. 50ಕ್ಕೂ ಹೆಚ್ಚು ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.  ಈದ್ಗಾ ಮೈದಾನದಲ್ಲಿ ಯಾವುದೇ ಪ್ರತಿಭಟನೆಗೆ ಅವಕಾಶವಿಲ್ಲ. ಸದ್ಯ ಸೂಕ್ಷ್ಮ ಪ್ರದೇಶವಾಗಿರುವ ಕಾರಣ ಪೊಲೀಸ್​ ಬಂದೋಬಸ್ತ್ ನೀಡಲಾಗಿದ್ದು, ಇನ್ನೆರಡು ದಿನಗಳಲ್ಲಿ ಸಿಸಿಕ್ಯಾಮರಾ ಅಳವಡಿಕೆ ಕಾರ್ಯ ಅಂತ್ಯವಾಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com