ಎರಡು ವರ್ಷಗಳಲ್ಲಿ 2.5 ಲಕ್ಷ ಸರ್ಕಾರಿ ಹುದ್ದೆಗಳ ಭರ್ತಿ: ಸಿಎಂ ಬೊಮ್ಮಾಯಿ ಭರವಸೆ

ಮುಂದಿನ ಎರಡು ವರ್ಷಗಳಲ್ಲಿ ಖಾಲಿ ಇರುವ 2.5 ಲಕ್ಷ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ಭರವಸೆ ನೀಡಿದ್ದಾರೆ.
ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ
Updated on

ಬೆಂಗಳೂರು: ಮುಂದಿನ ಎರಡು ವರ್ಷಗಳಲ್ಲಿ ಖಾಲಿ ಇರುವ 2.5 ಲಕ್ಷ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ಭರವಸೆ ನೀಡಿದ್ದಾರೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಮತ್ತು ಸಮಗ್ರ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ್ದ 67ನೇ ಕನ್ನಡ ರಾಜ್ಯೋತ್ಸವದ ನಿಮಿತ್ತ ಕನ್ನಡ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಬೊಮ್ಮಾಯಿ ಅವರು, ಮುಂದಿನ ಎರಡು ವರ್ಷಗಳಲ್ಲಿ ಖಾಲಿ ಇರುವ 2.5 ಲಕ್ಷ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.  ಈ ವರ್ಷ ಒಂದು ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಇದರೊಂದಿಗೆ ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸಿ ಆರ್ಥಿಕತೆಯನ್ನು ಬಲಪಡಿಸಲಾಗುವುದು. ಒಂದು ಲಕ್ಷ ಹುದ್ದೆಗಳನ್ನು ಭರ್ತಿ ಮಾಡುವುದರಿಂದ ಶೈಕ್ಷಣಿಕ, ಕೈಗಾರಿಕೆಗಳಲ್ಲಿ ಕ್ರಾಂತಿಗೂ ನಾಂದಿ ಹಾಡಲಿದೆ ಎಂದು ಹೇಳಿದರು.
 
ಬುಧವಾರ ಆರಂಭವಾಗಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ (ಜಿಐಎಂ) ರೂ.5 ಲಕ್ಷ ಕೋಟಿ ರೂಪಾಯಿಗಳ ಹೂಡಿಕೆಯನ್ನು ಸರ್ಕಾರ ನಿರೀಕ್ಷಿಸುತ್ತಿದ್ದು, ಮುಂದಿನ ಮೂರರಿಂದ ನಾಲ್ಕು ವರ್ಷಗಳಲ್ಲಿ 5 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ. ಕರ್ನಾಟಕಕ್ಕೆ ದೊಡ್ಡ ಪ್ರಮಾಣದ ಬಂಡವಾಳ ಹರಿದು ಬರುವುದರಿಂದ ರಾಜ್ಯ ಇನ್ನಷ್ಟು ಸಮೃದ್ಧವಾಗಲಿದೆ ಎಂದು ತಿಳಿಸಿದರು.

ಇದೇ ವೇಳೆ ಸ್ಥಳೀಯರಿಗೆ ಉದ್ಯೋಗಾವಕಾಶ ನೀಡುವ ಕುರಿತು ಮಾತನಾಡಿದ ಅವರು, ಕನ್ನಡಿಗರು ಎಲ್ಲರನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸುವ ಮತ್ತು ಸ್ವೀಕರಿಸುವ ಶ್ರೇಷ್ಠ ಸಂಸ್ಕೃತಿ ಹೊಂದಿದ್ದಾರೆ. ಇದನ್ನು ಮಾಡುವಾಗ ನಾವು ಕನ್ನಡದ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಬೇಕು. ಸರ್ಕಾರವು ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗಾಗಿ ದೂರದೃಷ್ಟಿಯೊಂದಿಗೆ ಕೆಲಸ ಮಾಡುತ್ತಿದೆ ಮತ್ತು ಕಾರ್ಮಿಕ ವರ್ಗ ಮತ್ತು ರೈತ ಸಮುದಾಯದ ಕಲ್ಯಾಣಕ್ಕೆ ಆದ್ಯತೆ ನೀಡಿದೆ. ನವ ಕರ್ನಾಟಕ ನಿರ್ಮಾಣ ನಮ್ಮ ಗುರಿಯಾಗಿದೆ. ಕನ್ನಡ ಭಾಷೆಗೆ ಸೀಮಿತವಾಗದೆ ನಮ್ಮ ಬದುಕಾಗಬೇಕು. ಕನ್ನಡಾಭಿಮಾನ ಮತ್ತು ಸ್ವಾಭಿಮಾನವನ್ನು ಎತ್ತಿ ಹಿಡಿಯಬೇಕು ಎಂದರು.

ಪ್ರಧಾನಿ ನರೇಂದ್ರ ಮೋದಿಯವರಿಗೆ ದೇಶದ ಎಲ್ಲಾ ಭಾಷೆಗಳು ಮಾತೃಭಾಷೆ ಮತ್ತು ರಾಷ್ಟ್ರ ಭಾಷೆಗಳಾಗಿವೆ. "ಆ ಅರ್ಥದಲ್ಲಿ, ಕನ್ನಡ ನಮ್ಮ ಮಾತೃಭಾಷೆ ಮತ್ತು ರಾಷ್ಟ್ರ ಭಾಷೆಯಾಗಿದೆ" ಎಂದು ಬೊಮ್ಮಾಯಿ ಹೇಳಿದರು.

ಪ್ರಸ್ತಾವಿತ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಮಸೂದೆಯನ್ನು ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಲಾಗುವುದು. “ಇದು ಜಾರಿಯಾದರೆ, ಭಾಷೆಗೆ ಕಾನೂನುಬದ್ಧವಾಗಿ ಅಧಿಕಾರ ಸಿಗುತ್ತದೆ. ಈ ಸಂಬಂಧ ರಾಜ್ಯ ಸರ್ಕಾರ ಎಲ್ಲ ಸಲಹೆಗಳ ಸ್ವೀಕರಿಸಲು ಮುಕ್ತವಾಗಿದೆ,'' ಎಂದು ಹೇಳಿದರು.

ಸರ್ಕಾರಿ ಶಾಲೆಗಳಲ್ಲಿ ಒಂದು ವರ್ಷದಲ್ಲಿ ಸುಮಾರು 8 ಸಾವಿರ ಹೊಸ ತರಗತಿ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ. ಮುಂದಿನ ಮೂರು ವರ್ಷಗಳ ಕಾಲ ಇದೇ ರೀತಿ ಮುಂದುವರಿದರೆ ತರಗತಿ ಕೊಠಡಿಗಳ ಕೊರತೆಯಾಗದು ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com