ವಸತಿ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆಗೆ ಅವಕಾಶ ನೀಡುವುದಿಲ್ಲ: ಹೈಕೋರ್ಟ್'ಗೆ ಬಿಬಿಎಂಪಿ ಮಾಹಿತಿ
ಬೆಂಗಳೂರು: ವಸತಿ ಪ್ರದೇಶಗಳಲ್ಲಿ ಅಧಿಸೂಚಿತ ಯುಟಿಲಿಟಿ ಸೇವೆಗಳನ್ನು ಹೊರತುಪಡಿಸಿ ಯಾವುದೇ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಬಿಬಿಎಂಪಿ ಹೈಕೋರ್ಟ್'ಗೆ ತಿಳಿಸಿದೆ. ಅಲ್ಲದೆ, ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಪ್ರಕಾರ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆಂದು ಭರವಸೆ ನೀಡಿದೆ.
ಕಾನೂನು ಉಲ್ಲಂಘಿಸಿ ವಸತಿ ಪ್ರದೇಶಗಳಲ್ಲಿ ನಡೆಯುವ ವಾಣಿಜ್ಯ ಚಟುವಟಿಕೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿಲ್ಸನ್ ಗಾರ್ಡನ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.
ಈ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್ ಕಿಣಗಿ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿದ್ದು, ವಿಚಾರಣೆ ವೇಳೆ ಬಿಬಿಎಂಪಿ ನ್ಯಾಯಾಲಯಕ್ಕೆ ಈ ಭರವಸೆಯನ್ನು ನೀಡಿದೆ.
ವಿಚಾರಣೆ ವೇಳೆ ಹೈಕೋರ್ಟ್'ಗೆ ಮಾಹಿತಿ ನೀಡಿದ ಬಿಬಿಎಂಪಿ ಪರ ವಕೀಲೆ ವಿ ಶ್ರೀನಿಧಿಯವರು, ವಿಲ್ಸನ್ ಗಾರ್ಡನ್‌ನ ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ನಡೆಸುತ್ತಿರುವ 101 ಹೂವಿನ ಅಂಗಡಿಗಳ ವಿರುದ್ಧ ಅಧಿಕಾರಿಗಳ ತಂಡ ಕ್ರಮ ಕೈಗೊಂಡಿದ್ದು, ಈಗಾಗಲೇ 60 ಹೂವಿನ ಅಂಗಡಿಗಳನ್ನು ಸೀಲ್ ಮಾಡಿದೆ. ಉಳಿದ 41 ಅಂಗಡಿಗಳನ್ನು 2 ವಾರಗಳಲ್ಲಿ ಸೀಲ್ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ