ವೋಟರ್ ಐಡಿ ಅಕ್ರಮ: ಚಿಲುಮೆ ಎನ್‌ಜಿಒ ಕುರಿತ ಆರೋಪ ತಳ್ಳಿ ಹಾಕಿದ BBMP ಆಯುಕ್ತ! ಎಆರ್‌ಒ ಅಮಾನತು

ಬೆಂಗಳೂರಿನಲ್ಲಿ ಮತದಾರರ ವೈಯಕ್ತಿಕ ಮಾಹಿತಿ (ದತ್ತಾಂಶ) ಕಳವು ಪ್ರಕರಣದ ಸಂಬಂಧ ಚಿಲುಮೆ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮೇಲೆ ಪೊಲೀಸರು ದಾಳಿ ಮಾಡಿದ್ದು, ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.
ವೋಟರ್ ಐಡಿ ಅಕ್ರಮ: ಚಿಲುಮೆ ಎನ್‌ಜಿಒ ಕುರಿತ ಆರೋಪ ತಳ್ಳಿ ಹಾಕಿದ BBMP ಆಯುಕ್ತ! ಎಆರ್‌ಒ ಅಮಾನತು
Updated on

ಬೆಂಗಳೂರು: ಬೆಂಗಳೂರಿನಲ್ಲಿ ಮತದಾರರ ವೈಯಕ್ತಿಕ ಮಾಹಿತಿ (ದತ್ತಾಂಶ) ಕಳವು ಪ್ರಕರಣದ ಸಂಬಂಧ ಚಿಲುಮೆ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮೇಲೆ ಪೊಲೀಸರು ದಾಳಿ ಮಾಡಿದ್ದು, ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.

ಮತಗಟ್ಟೆ ಅಧಿಕಾರಿ‌ ಸೋಗಿನಲ್ಲಿ ಮತದಾರರ ವೈಯಕ್ತಿಕ ಮಾಹಿತಿ ಸಂಗ್ರಹಿಸುತ್ತಿರುವ ಆರೋಪ ಸಂಬಂಧ‌ ಬಿಬಿಎಂಪಿ ವತಿಯಿಂದ ಪ್ರಕರಣ ದಾಖಲಾಗಿತ್ತು. ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಚುನಾವಣಾ ಸಹಭಾಗಿತ್ವ (SVEEP) ಚಟುವಟಿಕೆಯಲ್ಲಿ ತೊಡಗಿರುವ ಎನ್‌ಜಿಒ ಚಿಲುಮೆ ಶೈಕ್ಷಣಿಕ ಸಾಂಸ್ಕೃತಿಕ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ವಿರುದ್ಧ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ದೂರು ನೀಡಿತ್ತು. ಈ ಹಿನ್ನೆಲೆ ಹಲಸೂರು ಗೇಟ್ ಪೊಲೀಸರು ಮಲ್ಲೇಶ್ವರದಲ್ಲಿರುವ ಚಿಲುಮೆ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಗ್ರಾಮೀಣಾಭಿವೃದ್ದಿ ಸಂಸ್ಥೆ ಮೇಲೆ ನಗರ ಕೇಂದ್ರ ವಿಭಾಗದ ಪೊಲೀಸರು ದಾಳಿ ಮಾಡಿದ್ದಾರೆ. 

ಈ ದೂರಿನ ಆಧಾರದ ಮೇಲೆ ಹಲಸೂರು ಗೇಟ್ ಠಾಣೆ​ ಇನ್ಸ್​​ಪೆಕ್ಟರ್​​ ಜಗದೀಶ್​ ನೇತೃತ್ವದಲ್ಲಿ ದಾಳಿ ಮಾಡಲಾಗಿದ್ದು, ಪೊಲೀಸರು ಚಿಲುಮೆ ಸಂಸ್ಥೆಯಲ್ಲಿ‌ ಕೆಲಸ ಮಾಡುತ್ತಿದ್ದ ನಾಲ್ವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಉಳಿದಂತೆ ಸಂಸ್ಥೆಯ‌ ಮುಖ್ಯಸ್ಥ ಲೋಕೇಶ್ ತಲೆಮರೆಸಿಕೊಂಡಿದ್ದು, ಅವರಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.

ಸಿಸಿಬಿ ಟೆಕ್ನಿಕಲ್ ತಂಡ ಭೇಟಿ 
ಮಲ್ಲೇಶ್ವರಂನ ಚಿಲುಮೆ ಸಂಸ್ಥೆಯ ಕಚೇರಿಗೆ ಸಿಸಿಬಿ ಟೆಕ್ನಿಕಲ್ ತಂಡ ಕೂಡ ಆಗಮಿಸಿದ್ದು, ಚಿಲುಮೆ ಕಚೇರಿಯ ಕಂಪ್ಯೂಟರ್‌ನಲ್ಲಿರುವ ಡೇಟಾ ಪರಿಶೀಲನೆ ಮಾಡುತ್ತಿದೆ. ಸಿಸಿಬಿ ಇನ್ಸ್‌ಪೆಕ್ಟರ್‌ ಪ್ರಶಾಂತ್‌ ಬಾಬು ನೇತೃತ್ವದ ತಂಡ ಡಿಲೀಟ್‌ ಆಗಿರುವ ಡೇಟಾ ರಿಟ್ರೀವ್‌ ಮಾಡುತ್ತಿದೆ.

ದೂರು ನೀಡಿದ್ದ ಬಿಬಿಎಂಪಿ ವಿಶೇಷ ಆಯುಕ್ತ ರಂಗಪ್ಪ
ಮತದಾರರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುತ್ತಿರುವ ಬಗ್ಗೆ ದೂರು ಬಂದಿದ್ದು ಷರತ್ತು ಉಲ್ಲಂಘಿಸಿರುವುದನ್ನು ಪರಿಗಣಿಸಿ ಅನುಮತಿ ಪತ್ರವನ್ನು ರದ್ದುಪಡಿಸಲಾಗಿದೆ. ಜೊತೆಗೆ ಈ ಸಂಸ್ಥೆಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಬಿಬಿಎಂಪಿ ವಿಶೇಷ ಆಯುಕ್ತ ರಂಗಪ್ಪ ಅವರು ಹಲಸೂರುಗೇಟ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಚಿಲುಮೆ ಶೈಕ್ಷಣಿಕ, ಸಾಮಾಜಿಕ ಸಾಂಸ್ಕೃತಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಗೆ ಬಿಬಿಎಂಪಿ ವ್ಯಾಪ್ತಿಯ ಬಿಎಲ್‌ಓಗಳೊಂದಿಗೆ ಸಮನ್ವಯ ಸಾಧಿಸಿ ಹಲವು ಷರತ್ತುಗಳನ್ನು ಪಾಲಿಕೆ ವಿಧಿಸಿತ್ತು. ಮತದಾರರ ಪಟ್ಟಿಪರಿಷ್ಕರಣೆಯ ಜಾಗೃತಿ ಹಾಗೂ ಆಧಾರ್‌ ಸಂಖ್ಯೆಯನ್ನು ಲಿಂಕ್‌ ಮಾಡಲು ಬಿಎಲ್‌ಓ ಹಾಗೂ ಮತದಾರರ ನೋಂದಣಾಧಿಕಾರಿಗಳ ಸಹಯೋಗದೊಂದಿಗೆ ಕೆಲವು ಷರತ್ತುಗಳನ್ನು ವಿಧಿಸಿ ಅನುಮತಿ ನೀಡಲಾಗಿತ್ತು.

ಷರತ್ತುಗಳನ್ನು ಉಲ್ಲಂಘಿಸಿದ್ದರಿಂದ ಚಿಲುಮೆ ಸಂಸ್ಥೆಗೆ ನೀಡಿದ್ದ ಅನುಮತಿಯನ್ನು ಬಿಬಿಎಂಪಿ ರದ್ದುಪಡಿಸಿತ್ತು. ಆದರೂ ಸಂಸ್ಥೆ ಮತ್ತು ಸಂಸ್ಥೆಗೆ ಸೇರಿದ್ದ ಕೆ.ಎಂ.ಲೋಕೇಶ್‌ ಎಂಬುವವರು ಬಿಬಿಎಂಪಿಯಿಂದ ಯಾವುದೇ ಅನುಮತಿ ಪಡೆಯದೇ ಮತಗಟ್ಟೆಮಟ್ಟದ ಸಮನ್ವಯ ಅಧಿಕಾರಿ ಎಂಬ ಗುರುತಿನ ಚೀಟಿಯನ್ನು ಸೃಷ್ಟಿಸಿಕೊಂಡಿದ್ದರು. ಅಲ್ಲದೇ ನಾವು ಮತಗಟ್ಟೆಮಟ್ಟದ ಅಧಿಕಾರಿಗಳು ಎಂದು ಹೇಳಿಕೊಂಡು ನಕಲಿ ಮತಗಟ್ಟೆಮಟ್ಟದ ಅಧಿಕಾರಿಗಳ(ಬಿಎಲ್‌ಓ) ಗುರುತಿನ ಚೀಟಿಯನ್ನು ದುರುಪಯೋಗ ಪಡಿಸಿಕೊಂಡಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ವ್ಯಕ್ತಿಯು ಬಿಬಿಎಂಪಿ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸದೇ ನೇರವಾಗಿ ಮನೆ, ಮನೆಗೆ ಹೋಗಿ ಸಾರ್ವಜನಿಕರಿಂದ ಮತದಾರರ ಗುರುತಿನ ಚೀಟಿ ಹಾಗೂ ಆಧಾರ್‌ ಚೀಟಿಯನ್ನು ಸಂಗ್ರಹಿಸಿ ಅದನ್ನು ವೈಯಕ್ತಿಕವಾಗಿ ಯಾವುದೋ ಆ್ಯಪ್‌ ಸಿದ್ಧಪಡಿಸಿಕೊಂಡು ಮತದಾರರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಿ ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮಕೈಗೊಳ್ಳಿ ಎಂದು ಬಿಬಿಎಂಪಿ ವಿಶೇಷ ಆಯುಕ್ತ ರಂಗಪ್ಪ ಅವರು ದೂರಿನಲ್ಲಿ ವಿವರಿಸಿದ್ದಾರೆ.

ಬಿಬಿಎಂಪಿ ಅಧಿಕಾರಿಗಳ ಬಂಧನವಿಲ್ಲ
ಗುರುವಾರ ಚಿಲುಮೆ ಎನ್‌ಜಿಒ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆ ಮತ್ತು ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದು, ಈವರೆಗೆ ಯಾವುದೇ ಬಿಬಿಎಂಪಿ ಕಂದಾಯ ಅಧಿಕಾರಿಗಳನ್ನು ಬಂಧಿಸಿಲ್ಲ ಎಂದು ಬಿಬಿಎಂಪಿ ಉನ್ನತ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಅಂತೆಯೇ 48 ಗಂಟೆಗಳಲ್ಲಿ ವಿವರವಾದ ವರದಿ ಸಲ್ಲಿಸುವಂತೆ ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸೂಚಿಸಲಾಗಿದ್ದು, ಅಧಿಕಾರಿಗಳ ಪಾತ್ರ ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎನ್ನಲಾಗಿದೆ.

ಬಿಬಿಎಂಪಿ ಕ್ರಮ ಸಮರ್ಥಿಸಿಕೊಂಡ ಮುಖ್ಯ ಆಯುಕ್ತ
ಏತನ್ಮಧ್ಯೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮತ್ತು ವಿಶೇಷ ಆಯುಕ್ತ ಎಸ್ ರಂಗಪ್ಪ ಅವರು ಆರು ಲಕ್ಷ ಮತದಾರರನ್ನು ಪಟ್ಟಿಯಿಂದ ಕೈಬಿಡುವ ಪಾಲಿಕೆಯ ಕಾರ್ಯವನ್ನು ಸಮರ್ಥಿಸಿಕೊಂಡಿದ್ದಾರೆ. ಅಂತೆಯೇ ಚಿಲುಮೆಯೊಂದಿಗೆ ಭಾಗಿಯಾದ ಆರೋಪವನ್ನು ತಳ್ಳಿಹಾಕಿದ್ದಾರೆ. ಗುರುತಿನ ಚೀಟಿಗೆ ಸಹಿ ಹಾಕಿದ ಆರೋಪದಲ್ಲಿ ಕರ್ತವ್ಯಲೋಪ ಎಸಗಿದ ಕಾರಣ ಮಹದೇವಪುರ ವಲಯದ ಚಂದ್ರಶೇಖರ ಎಆರ್‌ಒ ಅವರನ್ನು ಅಮಾನತು ಮಾಡಲಾಗಿದೆ ಎಂದು ವರದಿಯಾಗಿದೆ. ಇನ್ನೂ ತನಿಖೆ ನಡೆಯುತ್ತಿದೆ ಎಂದು ತುಷಾರ್ ಗಿರಿನಾಥ್ ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com