ವಿದ್ಯಾರ್ಥಿಗಳಿಂದ ಪಾಕ್ ಪರ ಘೋಷಣೆ: 'ಪಾಕಿಗಳು ನಮ್ಮ ಶತ್ರುಗಳಲ್ಲ'; ನಟ ಚೇತನ್ ಅಹಿಂಸಾ ಸಮರ್ಥನೆ

ಕಾಲೇಜು ಕಾರ್ಯಕ್ರಮದಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿ ಆಕ್ರೋಶಕ್ಕೆ ತುತ್ತಾಗಿರುವ ವಿದ್ಯಾರ್ಥಿಗಳ ನಡೆಯನ್ನು ನಟ-ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಸಮರ್ಥಿಸಿಕೊಂಡಿದ್ದು, ಪಾಕಿಸ್ತಾನಿಯರು ನಮ್ಮ ಶತ್ರುಗಳಲ್ಲ ಎಂದು ಹೇಳಿದ್ದಾರೆ.
ನಟ ಚೇತನ್ ಅಹಿಂಸಾ
ನಟ ಚೇತನ್ ಅಹಿಂಸಾ

ಬೆಂಗಳೂರು: ಕಾಲೇಜು ಕಾರ್ಯಕ್ರಮದಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿ ಆಕ್ರೋಶಕ್ಕೆ ತುತ್ತಾಗಿರುವ ವಿದ್ಯಾರ್ಥಿಗಳ ನಡೆಯನ್ನು ನಟ-ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಸಮರ್ಥಿಸಿಕೊಂಡಿದ್ದು, ಪಾಕಿಸ್ತಾನಿಯರು ನಮ್ಮ ಶತ್ರುಗಳಲ್ಲ ಎಂದು ಹೇಳಿದ್ದಾರೆ.

ಹೌದು.. ಈ ಹಿಂದೆ ಕಾಂತಾರ ಚಿತ್ರದ ಕುರಿತು ಹೇಳಿಕೆ ನೀಡಿ ವಿವಾದಕ್ಕೆ ಗ್ರಾಸವಾಗಿದ್ದ ನಟ ಚೇತನ್ ಇದೀಗ ಮತ್ತೊಮ್ಮೆ ಸುದ್ದಿಗೆ ಗ್ರಾಸವಾಗಿದ್ದು ಈ ಬಾರಿ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದ ವಿದ್ಯಾರ್ಥಿಗಳ ಬೆನ್ನಿಗೆ ನಿಲ್ಲುವ ಮೂಲಕ ಸುದ್ದಿಯಾಗುತ್ತಿದ್ದಾರೆ. 

ಬೆಂಗಳೂರಿನ ನ್ಯೂ ಹಾರಿಜಾನ್ ಖಾಸಗಿ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ದಾವಣೆಗೆರೆ ಮೂಲದ ರಿಯಾ (18), ಪಂಜಾಬ್ ಮೂಲದ ಆರ್ಯನ್ (18) ಮತ್ತು ಆಂಧ್ರ ಮೂಲದ 17 ವರ್ಷದ ವಿದ್ಯಾರ್ಥಿ ದಿನಕರ್ ಎಂಬುವವರು ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದರು. ವಿದ್ಯಾರ್ಥಿಗಳ ನಡೆ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ಸಂಬಂಧ ಮಾರತ್ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದ್ದು, ಪೊಲೀಸರು ವಿದ್ಯಾರ್ಥಿಗಳಿಗೆ ಸ್ಟೇಷನ್ ಬೇಲ್ ನೀಡಿ ಷರತ್ತಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಅಂತೆಯೇ ಹಾರಿಜಾನ್ ಕಾಲೇಜು ಆಡಳಿತ ಮಂಡಳಿ ಸಹ ಈ ಸಂಬಂಧ ದೂರು ನೀಡಿದ್ದು ಮಾತ್ರವಲ್ಲದೇ ಆರೋಪಿ ವಿದ್ಯಾರ್ಥಿಗಳನ್ನು ಅಮಾನತು ಮಾಡಿದೆ.

ನಟ ಚೇತನ್ ಸಮರ್ಥನೆ
ಇದೀಗ ಈ ಪ್ರಕರಣ ಮಾಧ್ಯಮಗಳಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾದ ಬೆನ್ನಲ್ಲೇ ವಿದ್ಯಾರ್ಥಿಗಳ ಬೆನ್ನಿಗೆ ನಿಂತಿರುವ ನಟ ಚೇತನ್ ಅಹಿಂಸಾ ಈ ಸಂಬಂಧ ಟ್ವೀಟ್ ಮೂಲಕ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. 'ನಿನ್ನೆ ನಡೆದ ಕಾಲೇಜು ಫೇಸ್ಟ್ ನಲ್ಲಿ ಬೆಂಗಳೂರಿನ 3 ವಿದ್ಯಾರ್ಥಿಗಳು ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆಗಳನ್ನು ಕೂಗಿದ್ದಾರೆ. ಇದನ್ನು ವಿನೋದಕ್ಕಾಗಿ ಮಾಡಲಾಗಿದೆ. ಈ ಕಾರಣಕ್ಕಾಗಿ ಆರ್ಯನ್, ರಿಯಾ ಮತ್ತು ದಿನಕರ್ ಅವರನ್ನು ಥಳಿಸಿದ ಬೆದರಿಸಿ ಮತ್ತು ಪೊಲೀಸ್ ಕಸ್ಟಡಿಗೆ ತಗೆದುಕೊಳ್ಳಲಾಗಿದೆ. ಇದು ಅಸಂಬಂಧ ಮತ್ತು ಅಪಾಯಕಾರಿ' ಎಂದು ಟ್ವಿಟ್ ಮಾಡಿದ್ದಾರೆ.

ಅಂತೆಯೇ 'ಪಾಕಿಸ್ತಾನದ ಜನರು ನಮ್ಮ ಸಹೋದರಿಯರು ಮತ್ತು ಸಹೋದರರು ಶತ್ರುಗಳಲ್ಲ. ವಿದ್ಯಾರ್ಥಿಗಳನ್ನು ಥಳಿಸಿ ಬೆದರಿಸಿ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದು ಅಪಾಯಕಾರಿ. ಪಾಕಿಸ್ತಾನ ಕ್ಕೆ ಜೈಕಾರ ಹಾಕೋದು ವಾಕ್ ಸ್ವಾತಂತ್ರ್ಯ' ಎಂದು ಚೇತನ್ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಇದೀಗ ಸಾಕಷ್ಟು ವೈರಲ್ ಕೂಡ ಆಗಿದ್ದು, ಚೇತನ್ ಟ್ವೀಟ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com