ಬೆಂಗಳೂರು: ಸಿಮೆಂಟ್ ಇಟ್ಟಿಗೆಯಿಂದ ಹೊಡೆದು ಪರಾರಿಯಾಗುತ್ತಿದ್ದ ದರೋಡೆಕೋರನ ಕಾಲಿಗೆ ಪೊಲೀಸರ ಗುಂಡೇಟು!
ಬೆಂಗಳೂರು: ಪೊಲೀಸರೊಬ್ಬರ ಮೇಲೆ ಸಿಮೆಂಟ್ ಬ್ಲಾಕ್‌ನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಕುಖ್ಯಾತ ದರೋಡೆಕೋರನ ಕಾಲಿಗೆ ನೆಲಮಂಗಲ ಉಪವಿಭಾಗದ ಪೊಲೀಸರು ಗುಂಡು ಹಾರಿಸಿದ್ದಾರೆ.
ಯೋಗಾನಂದ ಅಲಿಯಾಸ್ ನೈಟ್ಶಿಫ್ಟ್ ಯೋಗಿ ಎಂಬ ನೆಲಮಂಗಲದ ದರೋಡೆಕೋರನ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಕೊಲೆ, ಪೆಟ್ರೋಲ್ ಬಂಕ್ ದರೋಡೆ, ಹೆದ್ದಾರಿ ದರೋಡೆ, ಡಕಾಯಿತಿ ಸೇರಿದಂತೆ 15ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಈತ ಬೇಕಾಗಿದ್ದ. ಈತನ ವಿರುದ್ಧ ಬೆಂಗಳೂರು, ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಪ್ರಕರಣಗಳಿವೆ.
ದರೋಡೆ ಪ್ರಕರಣವೊಂದರಲ್ಲಿ ನೆಲಮಂಗಲ ಟೌನ್ ಪೊಲೀಸರು ಮೈಸೂರಿನ ಹೆಬ್ಬಾಳದಲ್ಲಿ ಬಂಧನಕ್ಕೊಳಪಡಿಸಿದ್ದರು. ಪ್ರಕರಣದ ತನಿಖೆ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ಸ್ಥಳ ಮಹಜರು ಮಾಡಲು ಕರೆದುಕೊಂಡು ಹೋಗಿದ್ದರು. ಈ ವೇಳೆ ತಪ್ಪಿಸಿಕೊಳ್ಳಲು ಮುಂದಾಗಿದ್ದು, ಪೊಲೀಸರ ಮೇಲೆಯೇ ಸಿಮೆಂಟ್ ಬ್ಲಾಕ್ ನಿಂದ ಹಲ್ಲೆ ನಡೆಸಿದ್ದ.
ಆರೋಪಿಯು ಹನುಮಂತ ಹಿಪ್ಪರಗಿ ಎಂಬುವವರ ಮೇಲೆ ಸಿಮೆಂಟ್ ಬ್ಲಾಕ್‌ನಿಂದ ಹಲ್ಲೆ ನಡೆಸಿದ್ದ. ಈ ವೇಳೆ ಗಾಳಿಯಲ್ಲಿ ಗುಂಡುಹಾರಿಸಿ ಪೊಲೀಸರು ಎಚ್ಚರಿಸಿದರು. ರೌಡಿ ಹೆದರದಿದ್ದಾಗ ಕಾಲಿಗೆ ಗುಂಡು ಹಾರಿಸಿದರು ಎಂದು ತಿಳಿದುಬಂದಿದೆ.
ಆರೋಪಿಯ ಕಾಲಿಗೆ ಗುಂಡು ಹಾರಿಸಿದ ಬಳಿಕ ಕೂಡಲೇ ಸ್ಥಳವನ್ನು ಸುತ್ತುವರಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡರು. ನಂತರ ಚಿಕಿತ್ಸೆಗಾಗಿ ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಇದೀಗ ಘಟನೆಯಲ್ಲಿ ಗಾಯಗೊಂಡ ಪೇದೆ ಹನುಮಂತ ಹಿಪ್ಪರಗಿ ಕೂಡ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್‍ಸ್ಪೆಕ್ಟರ್ ಶಶಿಧರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯನ್ನು ಬೆಂಗಳೂರು ಜಿಲ್ಲಾ ಎಸ್‍ಪಿ ಮಲ್ಲಿಕಾರ್ಜುನ ಬಾಲದಂಡಿ ಶ್ಲಾಘಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ