ಬೆಂಗಳೂರು: 'ಈದ್ ಮಿಲಾದ್' ಆಚರಣೆ ವೇಳೆ ಹಾಡಹಗಲೇ ಸಾರ್ವಜನಿಕವಾಗಿ ಮಾರಕಾಸ್ತ್ರ ಪ್ರದರ್ಶನ ಮಾಡಿ ನೃತ್ಯ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ 14 ಅಪ್ರಾಪ್ತರು ಸೇರಿ 19 ಮಂದಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಹೌದು.. ಮುಸ್ಲಿಮರ ಪವಿತ್ರ ಹಬ್ಬ ಈದ್ ಮಿಲಾದ್ ಅಥವಾ ಈದ್ ಮಿಲಾದ್-ಉನ್-ನಬಿಯ ದಿನದಂದು ನಗರದ ದರ್ಗಾ ಅವರಣವೊಂದರಲ್ಲಿ ನಡೆದಿದ್ದ ಸಂಭ್ರಮಾಚರಣೆ ವೇಳೆ ಸಾರ್ವಜನಿಕವಾಗಿ ಮಾರಕಾಸ್ತ್ರ ಪ್ರದರ್ಶನ ಮಾಡಿ ನೃತ್ಯ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ 14 ಅಪ್ರಾಪ್ತರು ಸೇರಿ 19 ಮಂದಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಚಿಕ್ಕಪೇಟೆ ವಿಧಾನ ಸಭಾ ಕ್ಷೇತ್ರದ ವಾರ್ಡ್ ನಂಬರ್ 144 ಸಿದ್ದಾಪುರದಲ್ಲಿ ಈದ್ ಮಿಲಾದ್ ಹಬ್ಬದ ಮೆರವಣಿಗೆ ವೇಳೆ ಯುವಕರು ಲಾಂಗ್ ಹಿಡಿದು ಡ್ಯಾನ್ಸ್ ಮಾಡಿದ ವಿಡಿಯೋ ವೈರಲ್ ಆಗಿತ್ತು.
ಇನ್ನು ಮೆರವಣಿಗೆ ವೇಳೆ ಸಂಪೂರ್ಣ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಎಲ್ಲಾ ಪೊಲೀಸರು ಕೂಡ ಬಂದೋಬಸ್ತ್ ನಲ್ಲಿದ್ರು. ಈ ವೇಳೆ ಪೊಲೀಸರು ಇರದ ಸಂದರ್ಭದಲ್ಲಿ ಯುವಕರು ಡ್ಯಾನ್ಸ್ ಮಾಡಿದ್ದಾರೆ ಎನ್ನಲಾಗಿದೆ.
ಒವೈಸಿ ದ್ವೇಷ ಭಾಷಣಕ್ಕೆ ಡಿಜೆ ಮಿಕ್ಸ್
ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಸಹೋದರ ಅಕ್ಬರುದ್ದಿನ್ ಓವೈಸಿ ಸುಮಾರು 10 ವರ್ಷಗಳ ಹಿಂದೆ ಮಾಡಿದ್ದ ದ್ವೇಷ ಭಾಷಣಕ್ಕೆ ಡಿಜೆ ಸಾಂಗ್ಸ್ ಬಳಸಿ ಯುವಕರು ಲಾಂಗ್ ಹಿಡಿದು ಸಂಭ್ರಮಿಸಿದ್ದಾರೆ. ಹಿಂದೂಸ್ತಾನದ ಹಿಂದೂಗಳೇ ನೀವು ನೂರು ಕೋಟಿ ಜನಸಂಖ್ಯೆ ಇದ್ದೀರಲ್ಲ ಸರಿ. ನಮಗಿಂತ ನೀವು ಇಷ್ಟೊಂದು ಜನಸಂಖ್ಯೆ ಹೆಚ್ಚಾಗಿದ್ದೀರಾ ಅಲ್ವ. ನಾವು ಕೇವಲ 25 ಕೋಟಿ ಇದ್ದೀವಿ ಅಷ್ಟೇ. ಆದರೆ ಯಾರಲ್ಲಿ ತಾಕತ್ತು ಇದೆ ನೋಡೋಣ. ಪೊಲೀಸರು ಹತ್ತು ನಿಮಿಷ ಸೈಲೆಂಟ್ ಆಗಿ ಇರಲಿ ನೋಡೋಣ ಎಂದು ವೇದಿಕೆ ಮೇಲೆ ಒವೈಸಿ ದ್ವೇಷದ ಭಾಷಣ ಮಾಡಿದ್ದ ಆಡಿಯೋಗೆ ಡಿಜೆ ಸಾಂಗ್ಸ್ ಮೂಲಕ ಡ್ಯಾನ್ಸ್ ಮಾಡಿದ್ದಾರೆ.
14 ಬಾಲಕರು ಸೇರಿದಂತೆ 19 ಜನರ ಬಂಧನ
ಲಾಂಗು ಮಚ್ಚು ಹಿಡಿದು ಡ್ಯಾನ್ಸ್ ಮಾಡಿದ್ದ 14 ಬಾಲಕರು ಸೇರಿದಂತೆ 19 ಜನರನ್ನ ಪೊಲೀಸರು ಬಂಧಿಸಿದ್ದಾರೆ. ಸಿದ್ದಾಪುರ ಠಾಣೆ ಪೊಲೀಸರು ವಿಷಯ ತಿಳಿಯುತ್ತಿದ್ದಂತೆ ಆರೋಪಿಗಳನ್ನ ಬಂಧಿಸಿ ಎಫ್ಐಆರ್ ದಾಖಲಿಸಿ ತನಿಖೆ ಶುರು ಮಾಡಿದ್ದಾರೆ. ತನಿಖೆ ವೇಳೆ ದುಷ್ಕರ್ಮಿಗಳ ಮತ್ತಷ್ಟು ವಿಡಿಯೋ ಲಭ್ಯವಾಗಿದೆ. ಟ್ಯಾಂಕ್ ಗಾರ್ಡನ್ ರಸ್ತೆಯನ್ನ ‘APNA AREA’ ಮಾಡಿಕೊಂಡು ತಲ್ವಾರ್ ಜೊತೆ ಇವರು ಡಾನ್ಸ್ ಮಾಡಿದ್ದಾರೆ. ರಾತ್ರಿಯಿಂದಲೇ ಪೊಲೀಸರು ಕಾರ್ಯಾಚರಣೆ ನಡೆಸಿದ್ದು ಮುಂಜಾನೆ ಮೂರು ಗಂಟೆವರೆಗೂ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ವೈರಲ್ ಆಗಿದ್ದ ವಿಡಿಯೋ, ವ್ಯಾಪಕ ಖಂಡನೆ
ಇನ್ನು ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿತ್ತು. ಅಲ್ಲದೆ ಹುಡುಗರ ವರ್ತನೆಗೆ ಆಕ್ರೋಶ ಕೂಡ ವ್ಯಕ್ತವಾಗಿತ್ತು. ಈದ್ ಮಿಲಾದ್ ಪ್ರಯುಕ್ತ ಆದ ಸಂಭ್ರಮಾಚರಣೆಯಲ್ಲಿ ಯುವಕರು ಲಾಂಗೂ, ಮಚ್ಚು ಹಿಡಿದು ಡಿಜೆ ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ. ಗೃಹ ಸಚಿವರೇ ನಿಮ್ಮ ಪೊಲೀಸ್ ಇಲಾಖೆ ಏನ್ ಮಾಡ್ತಿದೆ? ಈ ಸಣ್ಣ ಹುಡುಗರ ಕೈಗೆ ಲಾಂಗು ಮಚ್ಚು ಎಲ್ಲಿಂದ ಬಂತು? ಇಷ್ಟು ರಾಜರೋಷವಾಗಿ ನಡು ರೋಡಲ್ಲಿ ಲಾಂಗೂ ಮಚ್ಚು ಡ್ಯಾನ್ಸ್ ಮಾಡ್ತಿದ್ರು ನಿಮ್ಮ ಪೊಲೀಸ್ ಇಲಾಖೆ ಏನ್ ಮಾಡ್ತಿದೆ? ಎಂದು ಕೆಲವರು ಆಕ್ರೋಶ ಹೊರ ಹಾಕಿದ್ದರು.
ಪ್ರವಾದಿ ಮೊಹಮ್ಮದ್ ಅವರ ಹುಟ್ಟು ಹಬ್ಬ ಮತ್ತು ಸಾವಿನ ದಿನದಂದು ಈದ್ ಮಿಲಾದ್ ಅಥವಾ ಈದ್ ಮಿಲಾದ್-ಉನ್-ನಬಿಯ ದಿನವಾಗಿ ಮುಸ್ಲೀಂಮರು ಆಚರಿಸುತ್ತಾರೆ. ಈ ದಿನ ಕುರಾನ್ ಪಠಣೆ, ಪ್ರಾರ್ಥನೆ ಸಂಜೆ ಮೆರವಣಿಗೆಗಳನ್ನು ಮಾಡಲಾಗುತ್ತದೆ.
Advertisement