51 ವರ್ಷಗಳಲ್ಲಿ 2ನೇ ದಾಖಲೆಯ ಗರಿಷ್ಠ ಮಳೆ: ಸೆಪ್ಟೆಂಬರ್‌ ಆರಂಭದಲ್ಲೇ 709 ಮಿ.ಮೀ ವರ್ಷಧಾರೆ!

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸುರಿಯುತ್ತಿರುವ ಭಾರಿ ಮಳೆ ಹಲವು ಅವಾಂತರಗಳನ್ನು ಸೃಷ್ಟಿ ಮಾಡುತ್ತಿರುವಂತೆಯೇ ಈ ಹಿಂದಿನ ದಾಖಲೆಗಳನ್ನೂ ಕೂಡ ಮುರಿಯುತ್ತಾ ಸಾಗಿದೆ.
ಮಳೆ ಪೀಡಿತ ಪ್ರದೇಶಗಳು
ಮಳೆ ಪೀಡಿತ ಪ್ರದೇಶಗಳು

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸುರಿಯುತ್ತಿರುವ ಭಾರಿ ಮಳೆ ಹಲವು ಅವಾಂತರಗಳನ್ನು ಸೃಷ್ಟಿ ಮಾಡುತ್ತಿರುವಂತೆಯೇ ಈ ಹಿಂದಿನ ದಾಖಲೆಗಳನ್ನೂ ಕೂಡ ಮುರಿಯುತ್ತಾ ಸಾಗಿದೆ.

ಹೌದು.. ನಗರದಲ್ಲಿ ಸುರಿಯುತ್ತಿರುವ ಭಾರಿ ಮಳೆ 51 ವರ್ಷಗಳಲ್ಲಿ ಬಿದ್ದ 2ನೇ ದಾಖಲೆಯ ಗರಿಷ್ಠ ಮಳೆಯಾಗಿದೆ. ನಗರದಲ್ಲಿ 1971ರಲ್ಲಿ ಮಳೆಗಾಲದಲ್ಲಿ 725 ಮಿ.ಮೀ. ಮಳೆಯಾಗಿತ್ತು. ಈ ವರ್ಷ ಸೆಪ್ಟೆಂಬರ್‌ನಲ್ಲಿ ಈಗಾಗಲೇ 709 ಮಿ.ಮೀ. ಮಳೆಯಾಗಿದ್ದು, ಇದು 51 ವರ್ಷಗಳಲ್ಲಿ ಎರಡನೇ ದಾಖಲೆ ಮಳೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಹೇಳಿದರು.

ಆಗಸ್ಟ್‌ 31ರ ರಾತ್ರಿಯಿಂದ ನಿರಂತರ ಮಳೆಯಾಗುತ್ತಿದ್ದು, ಭಾನುವಾರ ರಾತ್ರಿ ಅತಿಹೆಚ್ಚು ಪ್ರಮಾಣದಲ್ಲಿ ಮಳೆಯಾಗಿದೆ. ಪೂರ್ವ ಹಾಗೂ ಬೊಮ್ಮನಹಳ್ಳಿ ಭಾಗದಲ್ಲಿ ಹೆಚ್ಚಾಗಿ ಮಳೆಯಾಗಿದ್ದು, ಸೆಪ್ಟೆಂಬರ್‌ವರೆಗೆ ಸಾಮಾನ್ಯವಾಗಿ ಈ ಭಾಗದಲ್ಲಿ 313 ಮಿ.ಮೀ. ಮಳೆಯಾಗುತ್ತಿತ್ತು. ಆದರೆ, 709 ಮಿ.ಮೀ. ಮೀಟರ್‌ ಆಗಿದೆ. 1998 ಹೊರತುಪಡಿಸಿದರೆ ನಗರದಲ್ಲಿ ಅತಿ ಹೆಚ್ಚು ಮಳೆಯಾಗಿರುವುದು ಇದೇ ವರ್ಷ. 1975ರಲ್ಲಿ ಒಟ್ಟಾರೆ 725 ಮಿ.ಮೀ. ಮಳೆಯಾಗಿತ್ತು.  1971ರ ನಂತರ ಅತಿಹೆಚ್ಚು ಮಳೆ ಇದಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ವಾಡಿಕೆಗಿಂತ ನಾಲ್ಕು ಪಟ್ಟು ಹೆಚ್ಚು ಮಳೆಯಿಂದ ಸಮಸ್ಯೆ
2017 ಬಿಟ್ಟರೆ ಇದೀಗ ಮಹದೇವಪುರ, ಪೂರ್ವವಲಯದಲ್ಲಿ ಅತಿ ಹೆಚ್ಚು ಮಳೆಯಾಗಿದ್ದು, ಜೂನ್‌ನಿಂದ ಸೆಪ್ಟೆಂಬರ್‌ವರೆಗೆ 700 ಮಿ.ಮೀ. ಹೆಚ್ಚು ಮಳೆಯಾಗಿದೆ. ಹೀಗಾಗಿ, ಸಮಸ್ಯೆ ಹೆಚ್ಚಾಗಿದೆ. ನಾಲ್ಕು ಪಟ್ಟು ಹೆಚ್ಚು ಮಳೆ ಆಗಸ್ಟ್‌ 30ರಿಂದ ಸೆಪ್ಟೆಂಬರ್‌ 5ರವರೆಗೆ ಆಗಿದೆ. ಬೊಮ್ಮನಹಳ್ಳಿಯಲ್ಲಿ 9 ಪ್ರದೇಶಗಳಲ್ಲಿ ಸಾಕಷ್ಟು ಸಮಸ್ಯೆ ಆಗಿದೆ. ಪೂರ್ವ ಭಾಗದಲ್ಲಿ 24 ಕಡೆ ಹಾಗೂ ಮಹದೇಪುರದಲ್ಲಿ 22 ಕಡೆ ಸಮಸ್ಯೆ ಆಗಿದೆ ಎಂದು ತುಷಾರ್ ಗಿರಿನಾಥ್ ವಿವರಿಸಿದರು.

ಸವಳು ಕೆರೆಯಿಂದ ನೀರು ಹರಿಯುತ್ತಿದ್ದು, ಇದರಿಂದ ಬೆಳ್ಳಂದೂರು–ಸರ್ಜಾಪುರ ರಸ್ತೆಯಲ್ಲಿ ನೀರು ಹರಿಯುತ್ತಿದೆ. ನಗರದ ಬಹುತೇಕ ಎಲ್ಲ ಕೆರೆಗಳು ತುಂಬಿದ್ದು ಅದರಿಂದ ನೀರು ಹರಿಯುತ್ತಿದೆ. ನೀರು ಹೋಗಲು ರಾಜಕಾಲುವೆ ಒತ್ತುವರಿ ಆಗಿರುವುದರಿಂದ ನೀರು ನಿಧಾನಗತಿಯಲ್ಲಿ ಹೋಗುತ್ತಿದೆ. ಒತ್ತುವರಿ ಹೆಚ್ಚಾಗಿರುವುದರಿಂದ ನೀರು ಹೋಗುತ್ತಿಲ್ಲ. ಅದರ ತೆರುವಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ರಾಜ್ಯ ವಿಪತ್ತು ನಿರ್ವಹಣೆ ದಳ, ಅಗ್ನಿಶಾಮಕ ದಳ ರಕ್ಷಣೆ ಕಾರ್ಯ ಕೈಗೊಳ್ಳಲಾಗುತ್ತಿದೆ. ದಕ್ಷಿಣ, ಪಶ್ಚಿಮ, ದಾಸರಹಳ್ಳಿ, ರಾಜರಾಜೇಶ್ವರಿನಗರ ವಲಯದಲ್ಲಿ ಅಷ್ಟೇನೂ ತೊಂದರೆ ಆಗಿಲ್ಲ. ದಕ್ಷಿಣದಲ್ಲಿ ಮೂರು ಕಡೆ ಹಾಗೂ ಆರ್‌.ಆರ್‌. ನಗರದಲ್ಲಿ ನಾಲ್ಕು ಮನೆಗಳಲ್ಲಿ ನೀರು ನುಗ್ಗಿದೆ ಎಂದು ಹೇಳಿದರು.

ಅಂತೆಯೇ ಎಚ್‌ಎಎಲ್‌ ಬಳಿ ದಿವ್ಯಶ್ರೀ ಅಪಾರ್ಟ್‌ಮೆಂಟ್‌ ಅಪಾರ್ಟ್‌ಮೆಂಟ್‌ನವರು ರಾಜಕಾಲುವೆಯನ್ನು ತಿರುಗಿಸಿದ್ದಾರೆ. ಅದನ್ನು ಸಂಪೂರ್ಣ ಮುಚ್ಚಿದ್ದಾರೆ. ಹೀಗಾಗಿ ನೀರು ಹೊರಹೋಗದೆ ಉಕ್ಕಿ ಹರಿಯುತ್ತಿದೆ. ಅಲ್ಲಿ ಡಿಎನ್ಎ, ಅಪ್ಸರಾ, ಪ್ರೆಸ್ಟೀಜ್‌ ಅಪಾರ್ಟ್‌ಮೆಂಟ್‌ಗಳಿಗೆ ತೊಂದರೆಯಾಗಿದೆ. ಒತ್ತುವರಿ ತೆರವು ಮಾಡಿ ನೀರು ಹರಿವಿಗೆ ಅನುವು ಮಾಡಿಕೊಡಲಾಗುತ್ತದೆ. ಆರ್‌.ಎಂ.ಝಡ್‌ ಹಾಗೂ ಇಕೊಸ್ಪೇಸ್‌ನಲ್ಲೂ ರಾಜಕಾಲುವೆ ಒತ್ತುವರಿಯಾಗಿದೆ. ಅವುಗಳನ್ನು ಒಡೆಯಲು ಕ್ರಮ ಕೈಗೊಳ್ಳಲಾಗುತ್ತಿದೆ. ಹೀಗಾಗಿ ನೀರು ಹರಿವಿಗೆ ಜಾಗವಿಲ್ಲ. ಸವಳು ಕೆರೆ ಕೋಡಿ ಹರಿವು ಎಲ್ಲೆಡೆ ನುಗ್ಗುತ್ತಿದೆ. ಇದು ಹೊರವರ್ತುಲ ರಸ್ತೆಗೂ ಬರುತ್ತಿದೆ ಎಂದು ಹೇಳಿದರು.

ಬಿಡಿಎ ವಿರುದ್ಧ ಆಕ್ರೋಶ
ಇನ್ನು ‘ಯಮಲೂರು ಕೆರೆ ಕೋಡಿ ಬಳಿ ಹೆಚ್ಚಿನ ನೀರು ಬರುತ್ತಿದ್ದು, ಇದನ್ನು ತಡೆಯಬೇಕು. ಏನು ಕೆಲಸ ಮಾಡುತ್ತಿದ್ದೀರೋ ಗೊತ್ತಿಲ್ಲ. ಯಾರು ಮಾಡುತ್ತಿದ್ದೀರೋ ಗೊತ್ತಿಲ್ಲ. ಇಕೊಸ್ಪೇಸ್‌ ಕಡೆಗೆ ನೀರು ಹೆಚ್ಚಾಗಿ ಹರಿಯಬಾರದು. ಕೂಡಲೇ ಕ್ರಮ ಕೈಗೊಳ್ಳಿ ಎಂದು ಸಿ.ಎಂ ಹೇಳಿದ್ದಾರೆ. ನೀವೂ ಕೆಲಸ ಮಾಡಿ’ ಎಂದು ಬಿಡಿಎ ಎಂಜಿನಿಯರ್‌ ಸದಸ್ಯ ಶಾಂತ ರಾಜಣ್ಣ ಅವರನ್ನು ಬಿಬಿಎಂಪಿ ಆಯುಕ್ತ ಗಿರಿನಾಥ್ ತರಾಟೆಗೆ ತೆಗೆದುಕೊಂಡರು. ಬಿಡಿಎ ಮಾಡಿರುವ ಕೆಲವು ಕಾಮಗಾರಿಗಳಿಂದ ಸಾಕಷ್ಟು ಸಮಸ್ಯೆ ಆಗಿದೆ. ನೀವು ಕೂಡಲೇ ಸ್ಥಳಕ್ಕೆ ಬಂದು ಕೆಲಸ ಮಾಡಿ’ ಎಂದು ಯಮಲೂರಿನಲ್ಲಿ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com