ಬೆಂಗಳೂರು: ಬೆಂಗಳೂರಿನಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಹಲವು ಪ್ರದೇಶಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ಮನೆಗಳಿಗೆ ನೀರು ನುಗ್ಗಿವೆ. ಇದೇ ಹಿನ್ನೆಲೆಯಲ್ಲಿ ಹೋಟೆಲ್ ದರಗಳು ಕೂಡ ಗಗನಕ್ಕೇರಿವೆ. ಪ್ರವಾಹದಿಂದಾಗಿ ಸ್ಥಳಾಂತರಗೊಂಡ ಮತ್ತು ಹತಾಶ ಕುಟುಂಬಗಳು ಈಗ ಸಾಮಾನ್ಯ ಶ್ರೇಣಿಯ 10,000-20 ಸಾವಿರ ರೂಪಾಯಿಯ ರೂಂಗಳಿಗೆ ಸರಾಸರಿ 30,000-40,000 ರೂಪಾಯಿ ನೀಡಬೇಕಾಗಿದ್ದು, ಪರದಾಡುವಂತಾಗಿದೆ.
ಪರ್ಪಲ್‌ಫ್ರಂಟ್ ಟೆಕ್ನಾಲಜೀಸ್‌ನ ಸಿಇಒ ಮತ್ತು ಸಂಸ್ಥಾಪಕಿ ಮೀನಾ ಗಿರಿಸಬಲ್ಲಾ ಮಾತನಾಡಿ, ಯೆಮಲೂರಿನಲ್ಲಿನ ತಮ್ಮ ಐಷಾರಾಮಿ ಗೇಟೆಡ್ ಸಮುದಾಯವು ಜಲಾವೃತಗೊಂಡ ನಂತರ ಓಲ್ಡ್ ಏರ್‌ಪೋರ್ಟ್ ರಸ್ತೆಯ ಹೋಟೆಲ್‌ನಲ್ಲಿ ರಾತ್ರಿ ಕಳೆಯಲು ಅವರ ನಾಲ್ಕು ಜನರ ಕುಟುಂಬವು 42,000 ರೂಪಾಯಿ ನೀಡಿದೆ ಎಂದಿದ್ದಾರೆ.
'ಹೋಟೆಲ್‌ಗಳಲ್ಲಿನ ಬೆಲೆ ಆಕಾಶದೆತ್ತರಕ್ಕೆ ಏರಿಕೆಯಾಗುತ್ತಿದ್ದರೂ ಕೂಡ ಜನರಿಗೆ ರೂಂಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. 'ಆರಂಭದಲ್ಲಿ, ಪ್ರವಾಹದ ನೀರು ಕಡಿಮೆಯಾಗುವವರೆಗೂ ನಾವು ನಮ್ಮ ವಿಲ್ಲಾದ ಮೊದಲ ಮಹಡಿಯಲ್ಲಿ ಇರಬಹುದೆಂದು ನಾವು ಭಾವಿಸಿದ್ದೆವು. ಆದರೆ, ವಿದ್ಯುತ್ ಬ್ಯಾಕ್‌ಅಪ್ ಖಾಲಿಯಾಯಿತು. ಹೀಗಾಗಿ, ಬೆಲೆ ಎಷ್ಟೇ ಇದ್ದರೂ ಹೋಟೆಲ್ ಕೋಣೆಯೇ ನಮಗೆ ಲಭ್ಯವಿರುವ ಏಕೈಕ ಆಯ್ಕೆಯಾಗಿದೆ. ಹೀಗಾಗಿ ಹೋಟೆಲ್‌ಗಳು ಹೆಚ್ಚಿನ ದರ ವಿಧಿಸುತ್ತಿರುವುದರಲ್ಲಿ ಆಶ್ಚರ್ಯವಿಲ್ಲ' ಎನ್ನುತ್ತಾರೆ ಮತ್ತೋರ್ವ ನಿವಾಸಿ.
ಅನೇಕ ಹೋಟೆಲ್‌ಗಳು ಸಾಕುಪ್ರಾಣಿಗಳೊಂದಿಗೆ ಅತಿಥಿಗಳನ್ನು ಒಳಸೇರಿಸಲು ನಿರಾಕರಿಸುತ್ತಿರುವುದರಿಂದ ರೂಂಗಳಿಗೆ ಬೇಡಿಕೆ ಮತ್ತು ಬೆಲೆ ಏರಿಕೆಯಾಗಲು ಪ್ರಮುಖ ಕಾರಣವಾಗಿದೆ.
ಆತಿಥ್ಯ ವಲಯದ ಮೂಲಗಳು ಹೇಳುವಂತೆ, ಸ್ಟಾರ್ ಹೋಟೆಲ್‌ಗಳಲ್ಲಿನ ಕೊಠಡಿಗಳು 10-15 ದಿನಗಳವರೆಗೆ ಕಾಯ್ದಿರಿಸಲ್ಪಟ್ಟಿವೆ. ಏಕೆಂದರೆ ಅತಿಥಿಗಳು ತಮ್ಮ ಐಷಾರಾಮಿ ಮನೆಗಳನ್ನು ಸ್ವಚ್ಛಗೊಳಿಸಲು ಮತ್ತು ನವೀಕರಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದು ನಿರೀಕ್ಷಿಸಲಾಗಿದೆ' ಎನ್ನುತ್ತಾರೆ.
Advertisement