ಪ್ರವಾಸಿ ತಾಣಗಳ ಗೈಡ್‌ಗಳ ಪ್ರೋತ್ಸಾಹ ಧನ ಹೆಚ್ಚಳ: ಸಿಎಂ ಬೊಮ್ಮಾಯಿ

ಪ್ರವಾಸಿ ತಾಣಗಳ ಮಾರ್ಗದರ್ಶಿ (ಗೈಡ್) ಗಳಿಗೆ ಪ್ರೋತ್ಸಾಹ ಧನವನ್ನು 2 ಸಾವಿರದಿಂದ 5 ಸಾವಿರ ರೂ.ಗಳಿಗೆ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ
Updated on

ಬೆಂಗಳೂರು: ಪ್ರವಾಸಿ ತಾಣಗಳ ಮಾರ್ಗದರ್ಶಿ (ಗೈಡ್) ಗಳಿಗೆ ಪ್ರೋತ್ಸಾಹ ಧನವನ್ನು 2 ಸಾವಿರದಿಂದ 5 ಸಾವಿರ ರೂ.ಗಳಿಗೆ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ವಿಧಾನಸೌಧದ ಬ್ಯಾಕ್ವೆಂಟ್ ಹಾಲ್‌ನಲ್ಲಿಂದು ರಾಜ್ಯ ಪ್ರವಾಸೋದ್ಯಮ ಇಲಾಖೆ ಆಯೋಜಿಸಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ರಾಜ್ಯದ ಪ್ರವಾಸಿ ಮಾರ್ಗದರ್ಶಿ (ಗೈಡ್) ಗಳಿಗೆ ಪ್ರೋತ್ಸಾಹ ಧನ ವಿತರಣೆ ಹಾಗೂ ಪ್ರವಾಸೋದ್ಯಮ ನೀತಿ ಬಿಡುಗಡೆ ಮಾಡಿ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, 'ಪ್ರವಾಸಿ ಮಾರ್ಗದರ್ಶಿಗಳಿಗೆ ಪ್ರಸ್ತುತ 2 ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಅದನ್ನು 5 ಸಾವಿರ ರೂ. ಗಳಿಗೆ ಹೆಚ್ಚಿಸುವಂತೆ ಪ್ರವಾಸೋದ್ಯಮ ಸಚಿವ ಆನಂದ್‌ಸಿಂಗ್ ಮನವಿ ಮಾಡಿದ್ದು, ಅದರಂತೆ ಪ್ರವಾಸಿ ಮಾರ್ಗದರ್ಶಿ ಗೌರವ ಧನವನ್ನು 5 ಸಾವಿರ ರೂ.ಗಳಿಗೆ ಹೆಚ್ಚಿಸಲಾಗುವುದು ಎಂದರು.

ಅಂತೆಯೇ ಪ್ರವಾಸಿ ಮಾರ್ಗದರ್ಶಿಗಳಿಗೆ ಸರ್ಕಾರದಿಂದಲೇ ಸಮವಸ್ತ್ರ ಕೂಡಾ ನೀಡಲಾಗುವುದು. ಹಾಗೆಯೇ ಪ್ರವಾಸಿಗರಿಗೆ ವರ್ಣರಂಜಿತವಾಗಿ ಕತೆ ಹೇಳಲು ತರಬೇತಿಯನ್ನು ಗೈಡ್‌ಗಳಿಗೆ ಕೊಡುತ್ತೇವೆ. ಯುನೆಸ್ಕೋ ಹತ್ತು ಹಲವು ದಿನಾಚರಣೆಗಳನ್ನು ಮಾಡುತ್ತಿದೆ. ಅದರಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕೂಡಾ ಒಂದು. ಇದನ್ನು ರಾಜ್ಯದಲ್ಲಿ ಅತ್ಯಂತ ಅದ್ಧೂರಿಯಾಗಿ ಆಚರಿಸುತ್ತಿದ್ದೇವೆ. ಪ್ರವಾಸ ಮಾಡುವುದು ಮನುಷ್ಯನ ಮೂಲಭೂತ ಗುಣ. ಅನಾದಿ ಕಾಲದಿಂದಲೂ ಮನುಷ್ಯ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣಿಸುತ್ತಲೇ ಇದ್ದಾನೆ. ಮನುಷ್ಯನ ಈ ಪ್ರಯಾಣ ಹಲವಾರು ರೂಪಾಂತರ ಪಡೆದಿದೆ. ಊರುಗಳು ಸ್ಥಾಪನೆಯಾಗಿ, ಮನೆಗಳು ನಿರ್ಮಾಣವಾದರೂ ಪ್ರಯಾಣ ನಿಲ್ಲಲಿಲ್ಲ ಎಂದರು.

ಸುಮಾರು 25 ವರ್ಷಗಳ ಹಿಂದೆ ವಿದೇಶಕ್ಕೆ ಹೋಗಲು ಕಷ್ಟವಾಗುತ್ತಿತ್ತು. ತಿಂಗಳುಗಟ್ಟಲೆ ಪ್ರಯತ್ನ ನಡೆಸಬೇಕಿತ್ತು. ಆದರೆ ತಂತ್ರಜ್ಞಾನ ಪ್ರವಾಸದಲ್ಲೂ ಬದಲಾವಣೆ ತಂದಿದೆ. ಟೂರಿಸಂ ಒಂದು ಮಾಧ್ಯಮವಾಗಿ ಬೆಳೆದಿದೆ. ಭಾರತದಲ್ಲೂ ಪ್ರವಾಸೋದ್ಯಮ ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಪ್ರವಾಸಿ ತಾಣಗಳಲ್ಲಿ ಜನ ಉತ್ತಮ ಸೌಲಭ್ಯ ನಿರೀಕ್ಷಿಸುತ್ತಾರೆ. ಉತ್ತಮ ಆಹಾರ, ಗೈಡ್, ಉತ್ತಮ ವಾಸ್ತವ್ಯ, ಸೇರಿದಂತೆ ಅನೇಕ ನಿರೀಕ್ಷೆಗಳು ಇರುತ್ತವೆ. ಅದರಂತೆ ಪ್ರವಾಸಿ ತಾಣಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ಗಮನಹರಿಸಿದೆ. ಮೂಲಭೂತ ಸೌಕರ್ಯಗಳನ್ನು ಒದಗಿಸಿದೆ. ಟೂರಿಸಂ ನಾವು ಸೃಷ್ಟಿಸಿದ್ದಲ್ಲ ರಾಜ ಮಹಾರಾಜರ ಕಾಲದಲ್ಲೇ ಹತ್ತು ಹಲವಾರು ಕೋಟೆಗಳು, ದೇವಾಲಯಗಳು ಪ್ರವಾಸಿ ತಾಣಗಳು ರೂಪುಗೊಂಡಿದ್ದವು. ಹಿರಿಯರು ನಿರ್ಮಿಸಿದ್ದನ್ನು ನಾವು ಶೋಕೇಸ್ ಮಾಡುತ್ತಿದ್ದೇವೆ ಎಂದರು.

ಓರ್ವ ವಿದೇಶಿ ಪ್ರಯಾಣಿಕ ಪ್ರವಾಸಕ್ಕೆ ಟಿಕೆಟ್ ಬುಕ್ ಮಾಡಿದರೆ ಏರ್‌ಪೋರ್ಟ್‌ನಿಂದ ನೇರವಾಗಿ ಪ್ರವಾಸಿ ಸ್ಥಳಕ್ಕೆ ಕರೆದೊಯ್ಯಬೇಕು. ಆ ರೀತಿಯ ವ್ಯವಸ್ಥೆಗಳನ್ನು ಮಾಡುತ್ತೇವೆ. ಉತ್ತಮ ವಾಸ್ತವ್ಯ, ಗೈಡ್ ಕೊಟ್ಟರೆ ವಿದೇಶಿಗರು ಆಕರ್ಷಿತರಾಗುತ್ತಾರೆ. ಹಾಗಾಗಿ ಸರ್ಕಾರ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದೆ. ರಾಜ್ಯದಲ್ಲಿ ಅಂಜನಾದ್ರಿ ಬೆಟ್ಟವನ್ನು ಪ್ರವಾಸಿ ತಾಣವನ್ನಾಗಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಮಾಡುತ್ತಿದ್ದೇವೆ. ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಪ್ರವಾಸೋದ್ಯಮ ಸಚಿವ ಆನಂದ್‌ಸಿಂಗ್, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಾಪು ಸಿದ್ಧಲಿಂಗಸ್ವಾಮಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com