
ಸಾಂದರ್ಭಿಕ ಚಿತ್ರ
ಬೆಂಗಳೂರು: ತಮ್ಮ ಅಂಗಡಿಯಲ್ಲಿ ಕಳ್ಳತನ ಮಾಡಿದ್ದನೆಂದು 51 ವರ್ಷದ ವ್ಯಕ್ತಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ತಂದೆ ಮತ್ತು ಮಗನನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಕರುಣಾಕರನ್ ಮತ್ತು ಆತನ ಪುತ್ರ ಶ್ರೀನಿವಾಸ್ ಎಂದು ಗುರುತಿಸಲಾಗಿದೆ. ಮೃತ ಅಮರನಾಥ್ ಬಿಹಾರ ಮೂಲದವರಾಗಿದ್ದು, ಯಲಹಂಕದ ಮಾರುತಿ ನಗರದಲ್ಲಿ ವಾಸಿಸುತ್ತಿದ್ದು, ಮೇಸ್ತ್ರಿ ವೃತ್ತಿ ಮಾಡಿಕೊಂಡಿದ್ದರು.
ಕರುಣಾಕರನ್ ಬಾಗಲೂರಿನ ದ್ವಾರಕಾನಗರದಲ್ಲಿ ಫ್ಯಾಬ್ರಿಕೇಶನ್ ಮತ್ತು ಇಂಜಿನಿಯರಿಂಗ್ ವರ್ಕ್ ಶಾಪ್ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಎರಡು ಬಾರಿ ಅಂಗಡಿಯಲ್ಲಿ ಕಬ್ಬಿಣದ ವಸ್ತುಗಳು ಕಳವು ಆಗಿತ್ತು. ಸಿಸಿಟಿವಿ ಪರೀಕ್ಷಿಸಿದಾಗ ಒಬ್ಬನೇ ವ್ಯಕ್ತಿ ಎರಡು ಸಂದರ್ಭಗಳಲ್ಲಿ ಕಳ್ಳತನ ಮಾಡಿರುವುದು ಗೊತ್ತಾಗಿತ್ತು. ಆತನನ್ನು ಹಿಡಿಯಲು ಯೋಜಿಸಿ ಸಿಸಿಟಿವಿ ದೃಶ್ಯಾವಳಿಗಳ ಮೇಲೆ ನಿಗಾ ಇರಿಸಿದ್ದರು.
ಇದನ್ನೂ ಓದಿ: ಸಂಪ್‌ಗೆ ಹಾಕಿದ್ದ ಮೋಟರ್ ಕದ್ದ ಆರೋಪ: ಕಾರ್ಮಿಕನ ಥಳಿಸಿ ಕೊಂದ ಮಾಲೀಕ!!
ಶನಿವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಅಮರನಾಥ ಮತ್ತೆ ಕಳ್ಳತನಕ್ಕೆ ಯತ್ನಿಸಿದ್ದಾನೆ. ಅಂಗಡಿಯ ಪಕ್ಕದಲ್ಲಿದ್ದ ಕರುಣಾಕರನ್ ಮತ್ತು ಆತನ ಮಗ ಮತ್ತೊಬ್ಬ ಕೆಲಸಗಾರನೊಂದಿಗೆ ಧಾವಿಸಿ ಆತನನ್ನು ಹಿಡಿದಿದ್ದಾರೆ. ಆತನನ್ನು ಪೊಲೀಸರಿಗೆ ಒಪ್ಪಿಸುವ ಬದಲು, ಮೂವರು ಅಮರನಾಥ್ ಗೆ ಕಬ್ಬಿಣದ ರಾಡ್ ಗಳಿಂದ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ನಂತರ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಆತ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ತಂದೆ ಮತ್ತು ಮಗನನ್ನು ವಿಚಾರಣೆಗೆ ಒಳಪಡಿಸಿದಾಗ ಅವರು ಅಮರನಾಥ್ ಮೇಲೆ ಹಲ್ಲೆ ನಡೆಸಿ ಸಾವಿಗೆ ಕಾರಣವಾದುದನ್ನು ಒಪ್ಪಿಕೊಂಡಿದ್ದಾರೆ. ಪರಾರಿಯಾಗಿರುವ ಕಾರ್ಮಿಕನನ್ನು ಹಿಡಿಯಲು ಪ್ರಯತ್ನಗಳು ನಡೆಯುತ್ತಿರುವಾಗ ಇಬ್ಬರನ್ನು ಕೊಲೆಗಾಗಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.