ಕೊಪ್ಪಳ: ಹುಲಿಹೈದರ್ ಗ್ರಾಮದಲ್ಲಿ ಗುಂಪು ಘರ್ಷಣೆ; 2 ಸಾವು, 6 ಮಂದಿಗೆ ಗಾಯ, ಪ್ರತಿಭಟನೆ

ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಸಂಭವಿಸಿದ ಮಾರಾಮಾರಿಯಲ್ಲಿ ಕನಿಷ್ಛ ಇಬ್ಬರು ಸಾವನ್ನಪ್ಪಿ 6 ಮಂದಿ ಗಾಯಗೊಂಡಿರುವ ಘಟನೆ ಗುರುವಾರ ಕೊಪ್ಪಳದಲ್ಲಿ ನಡೆದಿದೆ.
ಹುಲಿ ಹೈದರ್ ಗ್ರಾಮದಲ್ಲಿ ಸಂಘರ್ಷ
ಹುಲಿ ಹೈದರ್ ಗ್ರಾಮದಲ್ಲಿ ಸಂಘರ್ಷ

ಕೊಪ್ಪಳ: ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಸಂಭವಿಸಿದ ಮಾರಾಮಾರಿಯಲ್ಲಿ ಕನಿಷ್ಛ ಇಬ್ಬರು ಸಾವನ್ನಪ್ಪಿ 6 ಮಂದಿ ಗಾಯಗೊಂಡಿರುವ ಘಟನೆ ಗುರುವಾರ ಕೊಪ್ಪಳದಲ್ಲಿ ನಡೆದಿದೆ.

ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲ್ಲೂಕಿನ ಹುಲಿಹೈದರ್ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು ಇಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ಯಂಕಪ್ಪ ತಳವಾರ (60), ಭಾಷಾಸಾಬ್ (22) ಎಂದು ಗುರುತಿಸಲಾಗಿದೆ. ಅಂತೆಯೇ ಈ ಘಟನೆಯಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ. ಧರ್ಮಣ್ಣ ಹರಿಜನ ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 

ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಸಿಆರ್​ಪಿಸಿ ಸೆಕ್ಷನ್ 144ನೇ ವಿಧಿಯ ಅನ್ವಯ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ಈ ನಿಷೇಧಾಜ್ಞೆಯು ಆಗಸ್ಟ್ 20ರವರೆಗೆ ಜಾರಿಯಲ್ಲಿರುತ್ತದೆ ಎಂದು ಕೊಪ್ಪಳ ಉಪವಿಭಾಗಾಧಿಕಾರಿ ಬಸವಣ್ಣಪ್ಪ ಕಲ್ಲಶೆಟ್ಟಿ ಆದೇಶದಲ್ಲಿ ತಿಳಿಸಿದ್ದಾರೆ. ಗ್ರಾಮದ ಸುತ್ತಮುತ್ತ 2 ಕಿಮೀ ವ್ಯಾಪ್ತಿಯಲ್ಲಿ ಜನರು ಗುಂಪು ಸೇರುವುದನ್ನು ನಿಷೇಧಿಸಲಾಗಿದೆ. ಡಿವೈಎಸ್​ಪಿ ರುದ್ರೇಶ್ ಉಜ್ಜನಕೊಪ್ಪ, ತಹಶೀಲ್ದಾರ್ ಧನಂಜಯ ಮಾಲಗತ್ತಿ ಗ್ರಾಮದಲ್ಲಿಯೇ ಬೀಡುಬಿಟ್ಟಿದ್ದು, 100ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.

ಘರ್ಷಣೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಧರ್ಮಣ್ಣ ಅವರನ್ನು ಪ್ರಸ್ತುತ ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಹಿಂಸಾಚಾರ ಖಂಡಿಸಿ ಮುಸ್ಲಿಂ ಮಹಿಳೆಯರು ಗ್ರಾಮದಲ್ಲಿ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು. ಹೂ ತರಲು ಹೋಗಿದ್ದಾಗ ನಮ್ಮ ಹುಡುಗನಿಗೆ ಹೊಡೆದರು ಎಂದು ಹೇಳಿದ ಮಹಿಳೆಯರು ಪೊಲೀಸರ ವಿರುದ್ಧ ಧಿಕ್ಕಾರ ಕೂಗಿದರು. ಗಲಾಟೆಯ ನಂತರ ಗ್ರಾಮದಲ್ಲಿ ಬೂದಿಮುಚ್ಚಿದ ಕೆಂಡದಂಥ ವಾತಾವರಣ ನಿರ್ಮಾಣವಾಗಿದೆ. ಪೊಲೀಸರು ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದಾರೆ. ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿವೆ.

ಮುಂಜಾನೆ 9 ಗಂಟೆಯ ವೇಳೆಯಲ್ಲಿ ಗಲಭೆ ನಡೆದಿದ್ದು, ಮನೆಗಳ ಮುಂದೆ ನಿಲ್ಲಿಸಿದ್ದ ಬೈಕ್, ಟಾಟಾ ಏಸ್ ಸೇರಿದಂತೆ ಹಲವು ವಾಹನಗಳನ್ನು ಜಖಂ ಮಾಡಲಾಗಿದೆ. ಬೈಕ್​ಗಳ ಮೇಲೆ ಕಲ್ಲು ಎತ್ತಿಹಾಕಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com