ಮತದಾರರ ಮಾಹಿತಿ ಕಳವು ಪ್ರಕರಣ: ಚಿಲುಮೆ ಸಂಸ್ಥೆಯ ಮತ್ತಿಬ್ಬರು ಬಂಧನ

ಬಿಬಿಎಂಪಿ ವ್ಯಾಪ್ತಿಯ ಮತದಾರರ ಮಾಹಿತಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಲುಮೆ ಸಂಸ್ಥೆಯ ಮತ್ತಿಬ್ಬರು ನೌಕರರನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬುಧವಾರ ಬಂಧನಕ್ಕೊಳಪಡಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಮತದಾರರ ಮಾಹಿತಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಲುಮೆ ಸಂಸ್ಥೆಯ ಮತ್ತಿಬ್ಬರು ನೌಕರರನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬುಧವಾರ ಬಂಧನಕ್ಕೊಳಪಡಿಸಿದ್ದಾರೆ.

ಮಲ್ಲೇಶ್ವರ ದೋಬಿಘಾಟ್ ನಿವಾಸಿಗಳಾದ ಮಾರುತಿ ಗೌಡ ಮತ್ತು ಅಭಿಷೇಕ್ ಎಂಬುವವರನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆಂದು ತಿಳಿದುಬಂದಿದೆ.

ಚಿಲುಮೆ ಸಂಸ್ಥೆಯ ಮುಖ್ಯಸ್ಥ ರವಿಕುಮಾರ್ ಸೂಚನೆ ಮೇರೆಗೆ ಮತದಾರರ ಮಾಹಿತಿ ಕಲೆ ಹಾಕುವಲ್ಲಿ ಈ ಇಬ್ಬರು ಪ್ರಮುಖ ಪಾತ್ರವಹಿಸಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಚಿಲುಮೆ ಸಂಸ್ಥೆಗೆ 2016ರಲ್ಲಿ ಮಾರುತಿ ಹಾಗೂ 2019ರಲ್ಲಿ ಮಂಡ್ಯದ ಅಭಿಷೇಕ್ ಕೆಲಸಕ್ಕೆ ಸೇರಿದ್ದರು. ಆ ಸಂಸ್ಥೆಯ ಹಣಕಾಸು ವ್ಯವಹಾರವನ್ನು ಮಾರುತಿ ನಿರ್ವಹಿಸಿದ್ದರೆ, ಬಿಬಿಎಂಪಿ ವ್ಯಾಪ್ತಿ ಮತದಾರರ ಮಾಹಿತಿ ಸಂಗ್ರಹಿಸುವ ಕಾರ್ಯದ ಕುರಿತು ಸಿಬ್ಬಂದಿಗೆ ಅಭಿಷೇಕ್ ತರಬೇತಿ ನೀಡಿದ್ದ.

ಈ ಪ್ರಕರಣ ದಾಖಲಾದ ಬಳಿಕ ಇಬ್ಬರು ತಲೆಮರೆಸಿಕೊಂಡು ಧರ್ಮಸ್ಥಳ ಹಾಗೂ ಕೂಡಲಸಂಗಮ ಸೇರಿದಂತೆ ಧಾರ್ಮಿಕ ಕ್ಷೇತ್ರಗಳಿಗೆ ಯಾತ್ರೆ ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮಲ್ಲೇಶ್ವರದಲ್ಲಿದ್ದ ಮಾರುತಿ ಮನೆ ಮೇಲೆ ದಾಳಿ ನಡೆಸಿ ಎರಡು ಲ್ಯಾಪ್ ಟಾಪ್ ಸೇರಿದಂತೆ ಕೆಲ ದಾಖಲೆಗಳನ್ನು ಜಪ್ತಿ ಮಾಡಲಾಗಿತ್ತು. ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಬಳಿಕ ತನಿಖಾಧಿಕಾರಿ ಮುಂದೆ ಮಂಗಳವಾರ ಇಬ್ಬರು ವಿಚಾರಣೆಗೆ ಹಾಜರಾಗಿದ್ದರು. ಎರಡು ದಿನಗಳ ಸತತ ವಿಚಾರಣೆ ಬಳಿಕ ಬುಧವಾರ ಅವರನ್ನು ಅಂತಿಮವಾಗಿ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ಸಾಕ್ಷ್ಯಗಳು ಮತ್ತು ದಾಖಲೆಗಳ ಆಧಾರದ ಮೇಲೆ, ಬುಧವಾರ ಮಾರುತಿ ಗೌಡ ಮತ್ತು ಅಭಿಷೇಕ್ ಅವರನ್ನು ತನಿಖೆಯ ನಂತರ ಬಂಧನಕ್ಕೊಳಪಡಿಸಲಾಗಿದೆ. ಆರೋಪಿಯನ್ನು ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಹಲಸೂರು ಗೇಟ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಮೂಲಕ ಮತದಾರರ ದತ್ತಾಂಶ ತಿರುಚಿದ ಪ್ರಕರಣದಲ್ಲಿ ಕೇಂದ್ರ ವಿಭಾಗದ ಪೊಲೀಸರು ಬಂಧಿಸಿರುವ ಒಟ್ಟು ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಬಿಬಿಎಂಪಿ ಅಧಿಕಾರಿಗಳಿಂದ ದೂರು ಸ್ವೀಕರಿಸಿದ ಅಧಿಕಾರಿಗಳು ಆರಂಭದಲ್ಲಿ ಇಬ್ಬರು ಚಿಲುಮೆ ಸಿಬ್ಬಂದಿಗಳಾದ ಧರ್ಮೇಶ್ ಮತ್ತು ರೇಣುಕಾ ಪ್ರಸಾದ್ ಅವರನ್ನು ಬಂಧಿಸಿ, ನಂತರ ನಾಲ್ವರು ಬಿಬಿಎಂಪಿ ಕಂದಾಯ ಅಧಿಕಾರಿಗಳನ್ನು ಬಂಧಿಸಿದ್ದರು.

ಚಿಲುಮೆ ಸಿಬ್ಬಂದಿ ಬೂತ್ ಮಟ್ಟದ ಅಧಿಕಾರಿಗಳನ್ನು ಯಾಮಾರಿಸಿದ್ದು, ನಕಲಿ ಗುರುತಿನ ಚೀಟಿಯೊಂದಿಗೆ ಬಿಬಿಎಂಪಿ ಅಧಿಕಾರಿಗಳು ಸಹಾಯ ಮಾಡಿದ್ದಾರೆ ಎನ್ನಲಾಗಿದೆ.

ಈ ನಡುವೆ ಅಲ್ಪಸಂಖ್ಯಾತರ ಮತಗಳು ಮತ್ತು ಬಿಜೆಪಿಯೇತರ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಿದ್ದಾರೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.

ತನ್ನ ಘನತೆಗೆ ಧಕ್ಕೆ ತರುವ ಬೆಳವಣಿಗೆಗಳು ಕಂಡು ಬಂದ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಚುನಾವಣಾ ಆಯೋಗವು, ಪ್ರಕರಣ ಸಂಬಂದ ಹೆಚ್ಚುವರಿ ಚುನಾವಣಾ ನೋಂದಣಿ ಅಧಿಕಾರಿಗಳಾದ ಎಸ್ ರಂಗಪ್ಪ ಮತ್ತು ಕೆ ಶ್ರೀನಿವಾಸ್ ಅವರನ್ನು ಅಮಾನತುಗೊಳಿಸಿದೆ.

ತನಿಖೆ ಎದುರಿಸುವಂತೆ ಇಬ್ಬರು ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗುವುದು ಎಂದು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com