ಶಾಲೆಗಳ ಬಳಿ ವಾಹನ ನಿಲುಗಡೆ ನಿಷೇಧ, ಶಾಲಾ ವಾಹನಗಳಿಗೂ ನಿಯಮ ಅನ್ವಯ: ಬೆಂಗಳೂರು ಟ್ರಾಫಿಕ್ ಪೊಲೀಸ್

ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ನಿವಾರಣೆಗೆ ಒಂದಲ್ಲ ಒಂದು ರೀತಿಯ ಸುಧಾರಣಾ ಕ್ರಮಗಳನ್ನು ಜಾರಿಗೆ ತರುತ್ತಿರುವ ಬೆಂಗಳೂರು ಸಂಚಾರ ಪೊಲೀಸರು ಇದೀಗ ಶಾಲೆಗಳ ಬಳಿ ವಾಹನ ನಿಲುಗಡೆಗೆ ನಿಷೇಧ ಹೇರಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ನಿವಾರಣೆಗೆ ಒಂದಲ್ಲ ಒಂದು ರೀತಿಯ ಸುಧಾರಣಾ ಕ್ರಮಗಳನ್ನು ಜಾರಿಗೆ ತರುತ್ತಿರುವ ಬೆಂಗಳೂರು ಸಂಚಾರ ಪೊಲೀಸರು ಇದೀಗ ಶಾಲೆಗಳ ಬಳಿ ವಾಹನ ನಿಲುಗಡೆಗೆ ನಿಷೇಧ ಹೇರಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ವಿಶೇಷ ಪೊಲೀಸ್ ಆಯುಕ್ತ(ಸಂಚಾರ) ಡಾ.ಎಂ.ಎ.ಸಲೀಂ ಅವರು ಬೆಳಿಗ್ಗೆ 8.30 ರ ನಂತರ ಶಾಲಾ ಬಸ್‌ಗಳ ಸಂಚಾರವನ್ನು ನಿಷೇಧಿಸಲು ಮುಂದಾಗಿದ್ದಾರೆ. ಬೆಳಗ್ಗೆ 8.15 ರ ನಂತರ ಶಾಲೆಗಳ ಸಮೀಪವೇ ವಿದ್ಯಾರ್ಥಿಗಳನ್ನು ಇಳಿಸಿ ಮತ್ತು ಅಲ್ಲೇ ನಿಲುಗಡೆ ಮಾಡುವ ಶಾಲಾ ಬಸ್‌ಗಳಿಗೆ ದಂಡ ವಿಧಿಸಲು ಅವರು ಸಿಬ್ಬಂದಿಗೆ ನಿರ್ದೇಶನ ನೀಡಿದ್ದಾರೆ. ಬೆಳಗ್ಗೆ 8.30 ರ ನಂತರ ಯಾವುದೇ ಶಾಲಾ ವಾಹನಗಳನ್ನು ಶಾಲೆಗಳ ಬಳಿ ನಿಲ್ಲಿಸಲು ಅನುಮತಿ ಇಲ್ಲ. ನಿಲ್ಲಿಸಿದರೆ ದಂಡವನ್ನು ಪಾವತಿಸಬೇಕಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತರಗತಿಗಳನ್ನು ಬೇಗ ಆರಂಭಿಸುವಂತೆ ಶಾಲಾ ಆಡಳಿತ ಮಂಡಳಿಗೆ ಈಗಾಗಲೇ ಸೂಚನೆ ನೀಡಿದ್ದೇವೆ. ಮಕ್ಕಳು ಸುರಕ್ಷಿತವಾಗಿ ಶಾಲೆಗೆ ಹೋಗುವುದನ್ನು ಖಚಿತಪಡಿಸಿಕೊಳ್ಳಲು ಸಂಚಾರ ಪೊಲೀಸ್ ಇಲಾಖೆಯು “ಮೀಸಲಾದ ಕ್ಯಾರೇಜ್‌ವೇ” ಮತ್ತು “ಸುರಕ್ಷಿತ ಮಾರ್ಗ”ವನ್ನು ಜಾರಿಗೊಳಿಸುತ್ತದೆ. ಮಕ್ಕಳನ್ನು ಶಾಲೆಗೆ ಪಿಕ್ ಮತ್ತು ಡ್ರಾಪ್ ಮಾಡಲು ಪೋಷಕರಿಗೆ ಪ್ರವೇಶ ಮತ್ತು ನಿರ್ಗಮನವನ್ನು ನಿಯೋಜಿಸಲಾಗುವುದು. ಆ ಮೀಸಲಾದ ಜಾಗದಿಂದಲೇ ಪೋಷಕರು ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವುದು, ಬರುವುದು ಮಾಡಬಹುದು. ಪೋಷಕರಿಗೆ ನೀಡಲಾದ ಎಂಟ್ರಿ ಪಾಯಿಟ್‌ನಿಂದ ವಾಹನ ಚಲಾಯಿಸಿ ಮಕ್ಕಳನ್ನು ಆಟದ ಮೈದಾನದಲ್ಲಿ ಬಿಟ್ಟು ಮತ್ತೆ ಎಗ್ಸಿಟ್(ಹೊರ ಹೋಗುವ) ಪಾಯಿಂಟ್‌ಗೆ ಹಿಂತಿರುಗಬೇಕು. ಇದರಿಂದ ರಸ್ತೆಯಲ್ಲಿ ಪೋಷಕರ ವಾಹನಗಳು ನಿಂತು ಟ್ರಾಫಿಕ್ ಉಂಟಾಗುತ್ತಿದ್ದ ಸಮಸ್ಯೆ ನಿಯಂತ್ರಣಕ್ಕೆ ಬರುತ್ತದೆ ಎಂದರು.

ಈ ಹಿಂದೆ ಹಲವಾರು ಬಾರಿ ಶಾಲಾ ಬಸ್‌ಗಳು ವಿದ್ಯಾರ್ಥಿಗಳನ್ನು ಮನೆಗೆ ಬಿಡುವವರೆಗೆ ದಿನವಿಡೀ ಆಯಾ ಶಾಲೆಗಳ ಹೊರಗೆ ಪಾರ್ಕ್ ಮಾಡುತ್ತವೆ ಮತ್ತು ಆ ಮೂಲಕ ರಸ್ತೆಯ ಒಂದು ಭಾಗವನ್ನು ಶಾಲಾ ವಾಹನವೇ ಆಕ್ರಮಿಸಿಕೊಂಡಿರುತ್ತದೆ. ಇದರಿಂದ ಪ್ರಯಾಣಿಕರಿಗೆ, ಬೇರೆ ವಾಹನ ಸವಾರರಿಗೆ ಕಿರಿಕಿರಿಯಾಗುತ್ತದೆ. ರೆಸಿಡೆನ್ಸಿ ರಸ್ತೆ, ಬ್ರಿಗೇಡ್ ರಸ್ತೆಯಿಂದ ರಿಚ್‌ಮಂಡ್ ರಸ್ತೆಯ ಮೇಲ್ಸೇತುವೆ, ಎಚ್‌ಎಸ್‌ಆರ್ ಲೇಔಟ್ ಸೇರಿದಂತೆ ಇತರೆ ಪ್ರದೇಶಗಳನ್ನು ಈ ರೀತಿಯ ಸಮಸ್ಯೆಗಳ ಪ್ರದೇಶವೆಂದು ಗುರುತಿಸಲಾಗಿದೆ. ಪ್ರಸ್ತುತ ಶಾಲೆಗಳಲ್ಲಿ ಸುರಕ್ಷಿತ ಮಾರ್ಗಗಳನ್ನು ಪುನಃ ಸ್ಥಾಪಿಸಲಾಗುತ್ತಿದೆ ಮತ್ತು ಈ ಮಾದರಿಯು ಈ ಹಿಂದೆ ಅಸ್ತಿತ್ವದಲ್ಲಿದ್ದರೂ, ಅದನ್ನು ಕಟ್ಟುನಿಟ್ಟಾಗಿ ಅನ್ವಯಿಸಲಾಗಿಲ್ಲ ಎಂದು ಸಂಚಾರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಶಾಲಾಗಳು ಬಸ್ ಮತ್ತು ವ್ಯಾನ್‌ಗಳನ್ನು ತಮ್ಮ ಮೈದಾನದಲ್ಲಿ ನಿಲ್ಲಿಸುವಂತೆ ಸಂಚಾರ ಪೊಲೀಸರು ಕಟ್ಟುನಿಟ್ಟಾಗಿ ಸೂಚನೆಗಳನ್ನು ನೀಡಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com