ಬೆಂಗಳೂರಿನಲ್ಲಿ ಶ್ರೀಮಂತರಿಗೆ ಮಾತ್ರ ಆಟೋಗಳು?, ಮತ್ತೆ ಬರಲಿದೆ ಪ್ರೀಪೇಯ್ಡ್ ಆಟೋರಿಕ್ಷಾ ನಿಲ್ದಾಣಗಳು

ಆಟೋಗಳಲ್ಲಿ 1-2 ಕಿಮೀ ಸಂಚರಿಸಲು ಕನಿಷ್ಠ 100 ರೂ.ಗಳನ್ನು ಇದೀಗ ಭರಿಸಬೇಕಾಗಿದೆ. ಟ್ರಾಫಿಕ್ ಪೊಲೀಸ್ ಇಲಾಖೆಯು ಪ್ರಿ-ಪೇಯ್ಡ್ ಆಟೋರಿಕ್ಷಾ ಸ್ಟ್ಯಾಂಡ್‌ಗಳನ್ನು ಮರುಸ್ಥಾಪಿಸಲು ಮತ್ತು ಅವುಗಳನ್ನು ಇತರ ಸ್ಥಳಗಳಿಗೂ ವಿಸ್ತರಿಸಲು ಯೋಜಿಸುತ್ತಿದ್ದು, ಗ್ರಾಹಕರಿಗೆ ಬರೆಯಾಗುತ್ತಿರುವುದು ನಿಲ್ಲುವ ನಿರೀಕ್ಷೆಯಿದೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಒಂದು ಕಾಲದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಉತ್ತೇಜನ ನೀಡಿದ ಆಟೋರಿಕ್ಷಾಗಳು ಇದೀಗ ಶ್ರೀಮಂತರು ಮತ್ತು ಗಣ್ಯರಿಗೆ ಮಾತ್ರ ಎನ್ನುವಂತಾಗಿದೆ. ಏಕೆಂದರೆ, ಆಟೋಗಳಲ್ಲಿ 1-2 ಕಿಮೀ ಸಂಚರಿಸಲು ಕನಿಷ್ಠ 100 ರೂ.ಗಳನ್ನು ಇದೀಗ ಭರಿಸಬೇಕಾಗಿದೆ. ಇದಕ್ಕೆಂದೇ ಟ್ರಾಫಿಕ್ ಪೊಲೀಸ್ ಇಲಾಖೆಯು ಪ್ರಿ-ಪೇಯ್ಡ್ ಆಟೋರಿಕ್ಷಾ ಸ್ಟ್ಯಾಂಡ್‌ಗಳನ್ನು ಮರುಸ್ಥಾಪಿಸಲು ಮತ್ತು ಅವುಗಳನ್ನು ಇತರ ಸ್ಥಳಗಳಿಗೂ ವಿಸ್ತರಿಸಲು ಯೋಜಿಸುತ್ತಿದ್ದು, ಗ್ರಾಹಕರಿಗೆ ಬರೆಯಾಗುತ್ತಿರುವುದು ನಿಲ್ಲುವ ನಿರೀಕ್ಷೆಯಿದೆ.

ಹೆಚ್ಚಿನ ಬೆಂಗಳೂರಿಗರು ಆಟೋ ಸವಾರಿಗಾಗಿ ಮೀಟರ್ ದರಕ್ಕಿಂತ ಹೆಚ್ಚಿನ ಹಣವನ್ನು ಪಾವತಿಸುವ ಪರಿಸ್ಥಿತಿಯಿದೆ ಅಥವಾ ಚೌಕಾಶಿಯಲ್ಲಿ ತೊಡಗಿದ್ದಾರೆ. ಕಡಿಮೆಗೆ ಸಾಧ್ಯವಾಗದಿದ್ದಾಗ ತಾವು ತೆರಳಬೇಕಿದ್ದ ಸ್ಥಳಗಳಿಗೆ ನಡೆದೇ ತೆರಳಲು ನಿರ್ಧರಿಸುತ್ತಿದ್ದಾರೆ.  ಲಲಿತ್ ಅಶೋಕ್ ಹೋಟೆಲ್‌ನಲ್ಲಿ ಆಯೋಜಿಸಲಾಗಿದ್ದ ಬೆಂಗಳೂರು ಸಾಹಿತ್ಯ ಉತ್ಸವ 2022ಕ್ಕೆ ತಲುಪಲು ಪ್ರೇಕ್ಷಕರು ಮತ್ತು ಪ್ರತಿನಿಧಿಗಳು ತೊಂದರೆಗಳನ್ನು ಎದುರಿಸಿದರು. ಆಟೋ ಚಾಲಕರು ಹೈಗ್ರೌಂಡ್ಸ್‌ನಿಂದ ಸ್ಥಳಕ್ಕೆ ಕನಿಷ್ಠ 100 ರಿಂದ 150 ರೂ. ಶುಲ್ಕ ವಿಧಿಸುತ್ತಾರೆ. ಇದು ನಗರದ ದುಸ್ಥಿತಿಯ ಸೂಕ್ಷ್ಮರೂಪವಾಗಿದೆ.

ಆಟೋ ಚಾಲಕರು ಮೀಟರ್ ಲೆಕ್ಕದಲ್ಲಿ ಶುಲ್ಕವನ್ನು ತೆಗೆದುಕೊಳ್ಳುತ್ತಿಲ್ಲ. ಮೀಟರ್ ಶುಲ್ಕ 45 ರಿಂದ 60 ತೋರಿಸಿದರೂ ಕೂಡ 100 ರೂ.ಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇದು ಒಂದೂವರೆ ಶುಲ್ಕ ಹೆಚ್ಚಳದ ಪರಿಕಲ್ಪನೆ ಆಗಿದೆ. ಒಂದು ವೇಳೆ ಅಷ್ಟು ಹಣ ಕೊಡಲು ನಿರಾಕರಿಸಿದರೆ, ಅವರು (ಚಾಲಕರು) ನಡೆದುಕೊಂಡು ಹೋಗಿ ಎನ್ನುತ್ತಾರೆ ಎಂದು ಹೇಳುತ್ತಾರೆ ಹಿರಿಯ ನಾಗರಿಕರಾದ ಪದ್ಮಜಾ ಎಂ.

ಮೆಟ್ರೋ ನಿಲ್ದಾಣಗಳು, ಮಾಲ್‌ಗಳು ಮತ್ತು ಇತರ ಜನಸಂದಣಿ ಇರುವ ಸ್ಥಳಗಳ ಬಳಿಗಳಲ್ಲಿಯೂ ಅವರು ಹೆಚ್ಚು ಶುಲ್ಕ ವಿಧಿಸುವುದು ಕಂಡುಬರುತ್ತಿದೆ. ಆಟೋರಿಕ್ಷಾ ಚಾಲಕರು ಪ್ರಯಾಣಿಕರನ್ನು ಒಂದು ಕಡೆಗೆ ಬಿಟ್ಟು ಅಲ್ಲಿಂದ ಖಾಲಿ ಬರಬೇಕೆಂದು ವಾದಿಸುತ್ತಾರೆ. ಅಲ್ಲದೆ, ಹೆಚ್ಚುತ್ತಿರುವ ಇಂಧನ ವೆಚ್ಚವನ್ನು ಭರಿಸಬೇಕು ಎನ್ನುತ್ತಾರೆ.

ಚಾಲಕರನ್ನು ಸಮರ್ಥಿಸಿಕೊಳ್ಳುವ ಒಕ್ಕೂಟದ ಸದಸ್ಯರೊಬ್ಬರು, 'ಚಾಲಕರು ಪರವಾನಗಿಗಾಗಿ ಆರ್‌ಟಿಒಗೆ ಹೆಚ್ಚಿನ ಶುಲ್ಕವನ್ನು ಪಾವತಿಸುವುದರಿಂದ ಮತ್ತು ಆಟೋರಿಕ್ಷಾ ಖರೀದಿಸಲು ಅಥವಾ ಬಾಡಿಗೆಗೆ ಆಟೋ ಪಡೆದಿರುವುದರಿಂದ ಕೆಲವರು ಹೆಚ್ಚಿನ ಶುಲ್ಕ ವಿಧಿಸುತ್ತಿದ್ದಾರೆ. ಅಗ್ರಿಗೇಟರ್‌ಗಳು ಹೆಚ್ಚಿನ ಶುಲ್ಕ ವಿಧಿಸುತ್ತಿರುವುದರಿಂದ ಮೀಟರ್ ಓಡುವ ಆಟೋಗಳು ಸಹ ಹೆಚ್ಚಿನ ಶುಲ್ಕವನ್ನು ವಿಧಿಸುತ್ತಿವೆ.

ಬೆಂಗಳೂರಿನಲ್ಲಿ ಸುಮಾರು 1.40 ಲಕ್ಷ ಆಟೋಗಳು ಸಂಚರಿಸುತ್ತಿದ್ದು, ಪ್ರತಿ ಚಾಲಕರು ನಿರ್ವಹಣೆಗಾಗಿ ದಿನಕ್ಕೆ ಸುಮಾರು 1,000 ರೂ.ಗಳನ್ನು ವ್ಯಯಿಸಬೇಕಿರುತ್ತದೆ ಎಂದು ಒಕ್ಕೂಟದ ಸದಸ್ಯರು ಹೇಳುತ್ತಾರೆ.

ಟ್ರಾಫಿಕ್ ವಿಶೇಷ ಆಯುಕ್ತ ಎಂ.ಎ. ಸಲೀಂ ಅವರು ಸಮಸ್ಯೆ ಇರುವುದನ್ನು ಒಪ್ಪಿಕೊಂಡಿದ್ದು, ಎಂ.ಜಿ. ರಸ್ತೆ ಮತ್ತು ಮೆಜೆಸ್ಟಿಕ್‌ನ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಪ್ರಿಪೇಯ್ಡ್ ಆಟೊರಿಕ್ಷಾಗಳನ್ನು ಮರುಪ್ರಾರಂಭಿಸಲಾಗುವುದು. ಕಮರ್ಷಿಯಲ್ ಸ್ಟ್ರೀಟ್, ಒಪೇರಾ ಹೌಸ್, ಫೋರಂ ಮಾಲ್, ಜಯನಗರ 4 ನೇ ಬ್ಲಾಕ್ ಮತ್ತು ಇತರ ಸ್ಥಳಗಳಲ್ಲಿಯೂ ಸಹ ಇದನ್ನು ಪ್ರಾರಂಭಿಸಲಾಗುತ್ತದೆ. ಸಾಂಕ್ರಾಮಿಕ ರೋಗದಿಂದಾಗಿ ಈ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಯಿತು ಎಂದರು.

'ಹೆಚ್ಚಿನ ಶುಲ್ಕ ಪಡೆಯುವುದು ಕಂಡುಬಂದರೆ ನಾಗರಿಕರು ತಕ್ಷಣವೇ 112 ಅಥವಾ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಬೇಕು. ನಿಗದಿತ ದರಕ್ಕಿಂತ ಹೆಚ್ಚು ಶುಲ್ಕ ವಿಧಿಸುವವರ ಮೇಲೆ ನಿಗಾ ಇಡಲು ಡಿಜಿಟಲ್ ಸ್ವೈಪಿಂಗ್ ವ್ಯವಸ್ಥೆಯನ್ನು ಪರಿಚಯಿಸುವ ಕೆಲಸ ಮಾಡುತ್ತಿದ್ದೇವೆ. ಹೆಚ್ಚು ಶುಲ್ಕ ವಿಧಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು' ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com