ವಿಜಯಪುರದಲ್ಲಿ ಭೀಕರ ರಸ್ತೆ ಅಪಘಾತ: ಸಿಂದಗಿ ಸರ್ಕಲ್ ಇನ್ಸ್ ಪೆಕ್ಟರ್ ರವಿ ಉಕ್ಕುಂದ ಮತ್ತು ಪತ್ನಿ ಸಾವು
ಸಿಂದಗಿ ಸರ್ಕಲ್ ಇನ್ಸ್ ಪೆಕ್ಟರ್ ರವಿ ಉಕ್ಕುಂದ ಹಾಗೂ ಅವರ ಪತ್ನಿ ಮಧು ರಸ್ತೆ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ. ಪಿಐ ರವಿ ಉಕ್ಕುಂದ ಚಲಾಯಿಸುತ್ತಿದ್ದ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.
Published: 07th December 2022 02:07 PM | Last Updated: 07th December 2022 06:37 PM | A+A A-

ರವಿ ಉಕ್ಕುಂದ ಮತ್ತು ಮಧು
ವಿಜಯಪುರ: ಸಿಂದಗಿ ಸರ್ಕಲ್ ಇನ್ಸ್ ಪೆಕ್ಟರ್ ರವಿ ಉಕ್ಕುಂದ (43) ಹಾಗೂ ಅವರ ಪತ್ನಿ ಮಧು (39) ರಸ್ತೆ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ.
ಸಿಂದಗಿಯಿಂದ ಕಲಬುರ್ಗಿಗೆ ಬುಧವಾರ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ತೆರಳುತ್ತಿರುವಾಗ ಜೇವರ್ಗಿ ತಾಲ್ಲೂಕಿನ ನೆಲೋಗಿ ಕ್ರಾಸ್‌ನಲ್ಲಿ ರಸ್ತೆ ಬದಿ ನಿಂತಿದ್ದ ಕಂಟೈನರ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ರಭಸಕ್ಕೆ ಸ್ಥಳದಲ್ಲೇ ಇಬ್ಬರೂ ಸಾವಿಗೀಡಾಗಿದ್ದಾರೆ.
ಸಿಪಿಐ ರವಿ ಉಕ್ಕುಂದ ಚಲಾಯಿಸುತ್ತಿದ್ದ ಕಾರಿನ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ. ರವಿ ಅವರು ಮೂಲತಃ ಕೊಪ್ಪಳ ಜಿಲ್ಲೆಯವರು. ರಿವಿ ಉಕ್ಕುಂದ ಅವರು ವಿಜಯಪುರ ಜಿಲ್ಲೆ ಸಿಂಧಗಿ ಠಾಣೆಯಲ್ಲಿ ಸಿಪಿಐ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಕಲಬುರಗಿಯ ಆಸ್ಪತ್ರೆಗೆಂದು ಸಿಂಧಗಿಯಿಂದ ಪತ್ನಿ ಜತೆಗೆ ರವಿ ಉಕ್ಕುಂದ ಅವರು ಸ್ವಂತ ಕಾರಿನಲ್ಲಿ ತೆರಳುವಾಗ ಮಾರ್ಗಮಧ್ಯೆ ಅಪಘಾತ ಸಂಭವಿಸಿದೆ.
ರವಿ ಉಕ್ಕುಂದ ಅವರೇ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದರು. ರಸ್ತೆ ಕ್ರಾಸ್ ಮಾಡುವಾಗ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿಯಾಗಿದ್ದು, ಸ್ಥಳದಲ್ಲೇ ದಂಪತಿ ದುರಂತ ಅಂತ್ಯ ಕಂಡಿದ್ದಾರೆ. ನೆಲೋಗಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆಯ ನಂತರ ಮೃತದೇಹಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಿದ್ದಾರೆ.