ಬೆಂಗಳೂರು: ಜಿ20 ಶೃಂಗಸಭೆಯಲ್ಲಿ ಕಪ್ಪು ಬಾವುಟ ಪ್ರದರ್ಶಿಸಲು ಮುಂದಾದ ರೈತರ ಬಂಧನ

ಕಬ್ಬು ಬೆಳೆಗೆ ಉತ್ತಮ ಬೆಲೆ ನೀಡುವಂತೆ ಆಗ್ರಹಿಸಿ ಕಳೆದ 22 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ಕಬ್ಬು ಬೆಳೆಗಾರರು ಮಂಗಳವಾರ ದೇವನಹಳ್ಳಿಯ ಜಿ20 ಸಮಾವೇಶದ ಕಪ್ಪು ಬಾವುಟ ಪ್ರದರ್ಶಿಸಲು ಮುಂದಾದರು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕಬ್ಬು ಬೆಳೆಗೆ ಉತ್ತಮ ಬೆಲೆ ನೀಡುವಂತೆ ಆಗ್ರಹಿಸಿ ಕಳೆದ 22 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ಕಬ್ಬು ಬೆಳೆಗಾರರು ಮಂಗಳವಾರ ದೇವನಹಳ್ಳಿಯ ಜಿ20 ಸಮಾವೇಶದ ಕಪ್ಪು ಬಾವುಟ ಪ್ರದರ್ಶಿಸಲು ಮುಂದಾದರು.

ಕೇಂದ್ರ ಹಣಕಾಸು ಸಚಿವಾಲಯ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಆಯೋಜಿಸಿರುವ ಮೊದಲ G20 ಹಣಕಾಸು ಮತ್ತು ಕೇಂದ್ರ ಬ್ಯಾಂಕ್ ಡೆಪ್ಯೂಟೀಸ್ (FCBD) ಸಭೆ ಮಂಗಳವಾರ ಬೆಂಗಳೂರಿನಲ್ಲಿ ಆರಂಭವಾಯಿತು. ಮಂಗಳವಾರದಿಂದ ಮೂರು ದಿನಗಳ ಕಾಲ ಜಿ20 ರಾಷ್ಟ್ರಗಳ ಪ್ರತಿನಿಧಿಗಳು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಸಭೆ ಆರಂಭವಾದ ಕೆಲವು ಗಂಟೆಗಳಲ್ಲೇ ‘ರೈತರು ತಂಡೋಪತಂಡವಾಗಿ ವಾಹನಗಳ ಮೂಲಕ ಬಳ್ಳಾರಿ ರಸ್ತೆಯಲ್ಲಿ ತೆರಳುತ್ತಿದ್ದಾಗ ಹೆಬ್ಬಾಳ ಮೇಲ್ಸೇತುವೆ ಸಮೀಪ ಪೊಲೀಸರು ರಸ್ತೆ ಮಧ್ಯದಲ್ಲಿ ತಡೆದು ನಿಲ್ಲಿಸಿದರು.

ಈ ವೇಳೆ ರೈತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ ರೈತರ ಮೂರು ತಂಡಗಳನ್ನು ವಶಕ್ಕೆ ಪಡೆದ ಪೊಲೀಸರು ಕೆಎಸ್‌ಆರ್‌ಪಿ ಮೈದಾನಕ್ಕೆ ಕರೆತಂದರು.

ಈ ಸಂಬಂಧ ಪ್ರತಿಕ್ರಿಯೆ ನೀಡಿದ ರೈತ ಮುಖಂಡ ಕುರುಬೂರು ಶಾಂತಕುಮಾರ್‌ ಅವರು, ಕಬ್ಬಿಗೆ ನ್ಯಾಯಸಮ್ಮತ ಬೆಲೆ ನೀಡಬೇಕು, ರೈತರ ಕೃಷಿ ಸಾಲಕ್ಕೆ ಸಿಬಿಲ್‌ ಕಡ್ಡಾಯ ಮಾಡಬಾರದು, ದೇಶದ ಜನರಿಗೆ ಆಹಾರ ಉತ್ಪಾದಿಸುವ ವಲಯವಾಗಿರುವ ಕೃಷಿಕರಿಗೆ ಮತ್ತು ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಬಡ್ಡಿರಹಿತ ಸಾಲ ನೀಡಬೇಕು ಎಂದು  ಆಗ್ರಹಿಸಿದರು.

“ನಾವು ಕಳೆದ ಕೆಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದೇವೆ. ನಮ್ಮ ಆಗ್ರಹಗಳ ಈಡೇರಿಸುವಂತೆ ಜಿ 20 ಶೃಂಗಸಭೆ ನಡೆಯುತ್ತಿದ್ದ ಸ್ಥಳಕ್ಕೆ ಹೊರಟಿದ್ದೆವು. ಆದರೆ, ಪೊಲೀಸರು ನಮ್ಮನ್ನು ತಡೆದು ದೌರ್ಜನ್ಯ ಎಸಗಿದ್ದಾರೆ. ನಮ್ಮ ಬಂಧನಕ್ಕೆ ಪೊಲೀಸರು ಕಾರಣ ನೀಡಿಲ್ಲ. ನಮ್ಮ ಮೂರು ಬ್ಯಾಚ್ ಗಳ ರೈತರನ್ನು ಕೆಎಸ್‌ಆರ್‌ಪಿ ಮೈದಾನಕ್ಕೆ ಕರೆದೊಯ್ದರು, ಫ್ರೀಡಂ ಪಾರ್ಕ್‌ನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಕೆಲ ರೈತರನ್ನೂ ಬಂಧಿಸಲಾಗಿದೆ ಎಂದು ತಿಳಿಸಿದರು.

ಈ ವಿಚಾರ ಸಂಬಂಧ ಪ್ರತಿಪಕ್ಷ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರವಾಗಿ ಕಿಡಿಕಾರಿದೆ. ಅಲ್ಲದೆ, ಪೊಲೀಸರ ಕ್ರಮವನ್ನು ಖಂಡಿಸಿದೆ.

ನಿನ್ನೆ ದಲಿತರ ಮೇಲೆ ಹಲ್ಲೆಯಾಯಿತು. ಇಂದು ರೈತರ ಮೇಲೆ ಹಲ್ಲೆಯಾಗಿದೆ ಎಂದು ಟ್ವೀಟ್ ಮಾಡಿದೆ.

ಬಾಕಿ ಇರುವ ಹಣವನ್ನು ನೀಡುವಂತೆ ಒತ್ತಾಯಿಸುತ್ತಿದ್ದ ರೈತರನ್ನು ಬಂಧಿಸಲಾಗಿದ್ದು, ಸರ್ಕಾರ ರೈತರ ವಿರೋಧಿಯಾಗಿದೆ ಎಂಬುದನ್ನು ಇದು ತೋರ್ಪಡಿಸುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಶೀಘ್ರದಲ್ಲೇ ಅಂತ್ಯಗೊಳ್ಳಲಿದೆ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com