ಮಂಗಳೂರು ಸ್ಫೋಟ ಪ್ರಕರಣ: ಪ್ರಮುಖ ಆರೋಪಿ ಶಾರೀಖ್ ಬೆಂಗಳೂರಿಗೆ ಶಿಫ್ಟ್

ಮಂಗಳೂರು ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಶಾರಿಖ್ ನನ್ನು ಬೆಂಗಳೂರಿಗೆ ಕರೆದೊಯ್ಯಲಾಗಿದೆ.
ಶಾರೀಖ್
ಶಾರೀಖ್

ಮಂಗಳೂರು: ಮಂಗಳೂರು ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಶಾರಿಖ್ ನನ್ನು ಬೆಂಗಳೂರಿಗೆ ಕರೆದೊಯ್ಯಲಾಗಿದೆ.

ಬಾಂಬ್ ಸ್ಫೋಟದಿಂದ ಗಾಯಗೊಂಡಿದ್ದ ಶಾರಿಕ್‌ಗೆ ನಗರದ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆತನ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿತ್ತು. ಆತನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು.

'ಆಸ್ಪತ್ರೆಯ ವೈದ್ಯರ ಶಿಫಾರಸಿನ ಮೇರೆಗೆ ಶಾರಿಕ್‌ನನ್ನು ಶನಿವಾರ ಬೆಳಿಗ್ಗೆ 6 ಗಂಟೆಗೆ ಬೆಂಗಳೂರಿಗೆ ಕರೆದೊಯ್ಯಲಾಗಿದೆ' ಎಂದು ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಅವರು ಮಾಹಿತಿ ನೀಡಿದ್ದಾರೆ.

ಕಳೆದ ತಿಂಗಳು ಮಂಗಳೂರಿನಲ್ಲಿ ಸ್ಪೋಟಗೊಂಡ ಬಾಂಬ್ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಕರ್ನಾಟಕದಲ್ಲಿ ಇಸಿಸ್ ಮಾದರಿ ಕೃತ್ಯಕ್ಕೆ ಸಂಚು ರೂಪಗೊಂಡಿದ್ದು ಈ ಸ್ಪೋಟದಿಂದ ಬಯಲಾಗಿತ್ತು.

ಮಂಗಳೂರಿನಲ್ಲಿ 2020 ರಲ್ಲಿ ಬರೆಯಲ್ಪಟ್ಟಿದ್ದ ಉಗ್ರ ಗೋಡೆ ಬರಹ ಪ್ರಕರಣದ ಆರೋಪಿಯಾಗಿದ್ದ ಮೊಹಮ್ಮದ್ ಶಾರೀಖ್ ತಂದ ಬಾಂಬ್ ಅವನ ಕಾಲ ಬುಡದಲ್ಲೇ ಸ್ಪೋಟಗೊಂಡಿತ್ತು. ಶಾರೀಖ್ ಮಂಗಳೂರು, ಮೈಸೂರು, ಕೇರಳ, ತಮಿಳುನಾಡು ಸುತ್ತಾಡಿಕೊಂಡಿದ್ದ. ಹಿಂದೂ ವೇಶ ಧರಿಸಿ ಮೈಸೂರಿನಲ್ಲಿ ಬಾಡಿಗೆ ಮನೆ ಮಾಡಿ ಅಲ್ಲಿಂದ ತನ್ನ ಉಗ್ರ ಕೃತ್ಯ ಮುಂದುವರೆಸಿದ್ದ. ಮೈಸೂರಿನ ಬಾಡಿಗೆ ಮನೆ ಪಡೆದು, ಅಲ್ಲಿ ಕುಕ್ಕರ್ ಬಾಂಬ್ ತಯಾರು ಮಾಡಿದ್ದ. ಅಲ್ಲಿಂದ ಮಂಗಳೂರಿಗೆ ತಂದು ಸ್ಫೋಟಗೊಳಿಸಲು ಯೋಜನೆ ರೂಪಿಸಿದ್ದ

ನವೆಂಬರ್ 19 ರ ಬೆಳಗ್ಗೆ ಮೈಸೂರಿನಿಂದ ತಾನು ತಯಾರಿಸಿದ್ದ ಕುಕ್ಕರ್ ಬಾಂಬ್ ಸಮೇತ ಮಂಗಳೂರಿನ ಕಡೆ ಹೊರಟಿದ್ದ. ಮೈಸೂರಿನ ತನ್ನ ಬಾಡಿಗೆ ಮನೆಯಿಂದ ಆಟೋದಲ್ಲಿ ಬಾಂಬ್ ನ್ನು ಇಟ್ಟುಕೊಂಡು ಕೆ.ಎಸ್.ಆರ್.ಟಿ.ಸಿ ಬಸ್ ಸ್ಟಾಂಡ್ ಗೆ ಬಂದಿಳಿದಿದ್ದ. ಮೈಸೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ 20 ನಿಮಿಷ ಬಸ್ ಗೆ ಕಾದಿದ್ದ.

ಅಲ್ಲಿಂದ ನೇರವಾಗಿ ಮಂಗಳೂರಿಗೆ ಹೋಗುವ ಕೆ.ಎಸ್.ಆರ್.ಟಿ.ಸಿ ಬಸ್ ಗೆ ಹತ್ತಿದ್ದ. ಅಲ್ಲಿಂದ ಕುಶಾಲನಗರ, ಮಡಿಕೇರಿ, ಸುಳ್ಯ, ಪುತ್ತೂರು ಮಾರ್ಗವಾಗಿ ಬಂದು ಮಂಗಳೂರಿನ ಪಡೀಲಿನಲ್ಲಿ ಇಳಿದಿದ್ದ. ಇದಕ್ಕೂ ಮುನ್ನ ತಾನು ತಂದಿದ್ದ ಬಾಂಬ್ ಜೊತೆ ಊಟಕ್ಕಾಗಿ ಬಸ್ ಬ್ರೇಕ್ ಕೊಟ್ಟಾಗ ಹೋಟೆಲ್ ಒಳಗೂ ಬಾಂಬ್ ತೆಗೆದುಕೊಂಡು ಹೋಗಿದ್ದ. ಇನ್ನು ಮಂಗಳೂರಿನ ಪಡೀಲು ಬಳಿ ಇಳಿದವನೇ ಪಂಪ್ ವೆಲ್ ಕಡೆ ಅರ್ಧ ಕಿಲೋ ಮೀಟರ್ ನಡೆದುಕೊಂಡು ಬಂದಿದ್ದ.

ಬಳಿಕ ಕುಕ್ಕರ್ ಬಾಂಬ್ ಗೆ ಟೈಮರ್ ಫಿಕ್ಸ್ ಮಾಡಿಕೊಂಡು ಆಟೋ ಹತ್ತಿದ್ದ. ಪಂಪ್ ವೆಲ್ ಡ್ರಾಪ್ ಅಂತಾ ಹೇಳಿ ಆಟೋ ಹತ್ತಿದ್ದು, ಆಟೋ ಪಂಪ್ ವೆಲ್ ತಲುಪುವ ಮಧ್ಯದಲ್ಲೇ ಬಾಂಬ್ ನಲ್ಲಿದ್ದ ಝೆಲ್ ಗೆ ಬೆಂಕಿ ಹೊತ್ತಿಕೊಂಡು ಬ್ಲಾಸ್ಟ್ ಆಗಿತ್ತು. ಆದರೆ ಡಿಟೊನೇಟರ್ ಮೂಲಕ ಸ್ಫೋಟವಾಗದ ಕಾರಣ ಭಾರೀ ದುರಂತವೊಂದು ತಪ್ಪಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com