ಶಾಸಕರ ಹೆಸರಲ್ಲಿ ಕೆಎಸ್‌ಆರ್ ಟಿಸಿ ಎಂಡಿಗೆ ವರ್ಗಾವಣೆಗೆ ಕರೆ; ವ್ಯಕ್ತಿ ಬಂಧನ

ಶಾಸಕರ ಹೆಸರಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್ ಟಿಸಿ) ವ್ಯವಸ್ಥಾಪಕ ನಿರ್ದೇಶಕ (ಎಂಡಿ)ಗೆ ವರ್ಗಾವಣೆಗೆ ಕರೆ ಮಾಡಿದ್ದ ವ್ಯಕ್ತಿಯೊಬ್ಬನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಶಾಸಕರ ಹೆಸರಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್ ಟಿಸಿ) ವ್ಯವಸ್ಥಾಪಕ ನಿರ್ದೇಶಕ (ಎಂಡಿ)ಗೆ ವರ್ಗಾವಣೆಗೆ ಕರೆ ಮಾಡಿದ್ದ ವ್ಯಕ್ತಿಯೊಬ್ಬನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ವಿಧಾನಸಭಾ ಸದಸ್ಯರ ಸೋಗಿವಿನಲ್ಲಿ ಕೆಎಸ್‌ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಸಿಬ್ಬಂದಿಗಳ ವರ್ಗಾವಣೆಗಾಗಿ ಕರೆ ಮಾಡಿ ವಂಚಿಸಿದ ಖದೀಮನನ್ನು ವಿಲ್ಸನ್ ಗಾರ್ಡನ್ ಪೊಲೀಸರು ಬಂಧಿಸಿದ್ದಾರೆ. ಮಳವಳ್ಳಿ ತಾಲೂಕಿನ ಅಗಸನಪುರದ ಪುನೀತ್ ಬಂಧಿತ ಆರೋಪಿಯಾಗಿದ್ದು ಆತನನ್ನು ಹೆಚ್ಚಿನ ವಿಚಾರಣೆ ನಡೆಸಲಾಗಿದೆ.

ವಿಧಾನಸಭಾ ಸದಸ್ಯರುಗಳು ನಿಗಮದ ಸಿಬ್ಬಂದಿಗಳ ಅಂತರ ಘಟಕದಿಂದ-ಅಂತರ ವಿಭಾಗಗಳಿಂದ ವರ್ಗಾವಣೆ ಕೋರಿ ಎಂಡಿ ಹಾಗೂ ನಿರ್ದೇಶಕರಿಗೆ ದೂರವಾಣಿ ಮೂಲಕ ಕರೆ ಮಾಡಿ ಸಿಬ್ಬಂದಿಗಳ ಅಹವಾಲನ್ನು ನಿಯಮಾನುಸಾರ ಪರಿಗಣಿಸಲು ಕೋರುವುದು ಸಾಮಾನ್ಯವಾಗಿದೆ. ಈ ಅವಕಾಶವನ್ನು ದುರ್ಬಳಕೆ ಮಾಡಿಕೊಂಡು ಕಳೆದ ಅ.28ರಂದು ಎಂಡಿ ಅವರ ಮೊಬೈಲ್ ಸಂಖ್ಯೆಗೆ ವ್ಯಕ್ತಿಯೊಬ್ಬ ಕರೆ ಮಾಡಿ ನಾನು ನಾಗೇಂದ್ರ, ಎಂ ಎಲ್ ಎ, ಮೈಸೂರು ವಿಧಾನ ಸಭಾ ಕ್ಷೇತ್ರ ಎಂದು ಪರಿಚಯಿಸಿಕೊಂಡು ಚಾಲಕ ಕಮ್ ನಿರ್ವಾಹಕ ಬಾಲರಾಜ್‌ರನ್ನು ಕೌಟಂಬಿಕ ಕಾರಣ ಮಂಡ್ಯ ಘಟಕದಿಂದ ಮಳವಳ್ಳಿ ಘಟಕಕ್ಕೆ ವರ್ಗಾವಣೆ ಮಾಡಿಕೊಡಿ ಎಂದು ಕೇಳಿದ್ದಾನೆ.

ಮನವಿಯ ಬಗ್ಗೆ ಪರಿಶೀಲಿಸಲು ಎಂಡಿ ಅವರು, ಮಂಡ್ಯ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜುಗೆ ಸೂಚಿಸಿದ್ದು, ಈ ಬಗ್ಗೆ ಶಾಸಕ ನಾಗೇಂದ್ರ ರವರ ಬಳಿ ಮಾತನಾಡಿದಾಗ, ಶಾಸಕರು ಆ ರೀತಿಯ ಯಾವುದೇ ಕರೆಯನ್ನು ತಾವು ಮಾಡಿರುವುದಿಲ್ಲ ಎಂದು ತಿಳಿಸಿದ್ದಾರೆ. ಈ ಬಗ್ಗೆ ಚಾಲನಾ ಸಿಬ್ಬಂದಿ, ಬಾಲರಾಜುರನ್ನು ವಿಚಾರಿಸಿ, ಮೊಬ್ಯೆಲ್ ಸಂಖ್ಯೆ ತಿಳಿಸಿ, ಕರೆ ಮಾಡಿದ ವ್ಯಕ್ತಿಯ ಬಗ್ಗೆ ಕೇಳಿದಾಗ ಕರೆ ಮಾಡಿದ ವ್ಯಕ್ತಿ ತಮಗೆ ತಿಳಿದ ಪುನೀತ್ ಗೆ ಸೇರಿದ್ದು, ಕರಾರಸಾ ನಿಗಮದ ಕೇಂದ್ರ ಕಛೇರಿಯಲ್ಲಿ ಕೆಲಸ ಮಾಡುತ್ತಿರುವುದಾಗಿ, ತಮ್ಮ ವರ್ಗಾವಣೆಯನ್ನು ಮಾನ್ಯ ವ್ಯವಸ್ಥಾಪಕ ನಿರ್ದೇಶಕರಿಂದ ಮಾಡಿಸುವುದಾಗಿ ನನಗೆ ತಿಳಿಸಿದ್ದ ಎಂದು ಮಾಹಿತಿ ನೀಡಿದ್ದಾರೆ.

ನಿಗಮದ ನಿರ್ದೇಶಕರಿಗೆ ಈ ಬಗ್ಗೆ ವಿಷಯ ತಿಳಿದಾಗ, ತಮ್ಮ ದೂರವಾಣಿ ಸಂಖ್ಯೆಗೂ ಸಹ ಸದರಿ ವ್ಯಕ್ತಿಯ ಮೊಬೈಲ್ ಸಂಖ್ಯೆಯಿಂದ ಶಾಸಕ ನಾಗೇಂದ್ರ ಎಂದು ಹಲವಾರು ಸಿಬ್ಬಂದಿಗಳ ವರ್ಗಾವಣೆ ಕುರಿತು ಕರೆ ಮಾಡಿ, ವಾಟ್ಸಪ್ ಮೂಲಕ ಮನವಿಗಳನ್ನು ಕಳುಹಿಸಿರುವುದಾಗಿ ತಿಳಿಸಿರುತ್ತಾರೆ. ಕೂಡಲೇ ಈ ವಿಷಯದ ಬಗ್ಗೆ ನಿಗಮದ ಭದ್ರತಾ ಮತ್ತು ಜಾಗೃತಾ ಇಲಾಖೆಯು ಕಾರ್ಯ ಪ್ರವೃತ್ತರಾಗಿ ಪ್ರಾಥಮಿಕ ವಿಚಾರಣೆ ನಡೆಸಿ ಸಾಕ್ಷಿ ಸಂಗ್ರಹಿಸಿ ನಿಗಮದ ಸಿಬ್ಬಂದಿಗಳಿಗೆ ಕೆಎಸ್‌ಆರ್‌ಟಿಸಿ ನೌಕರನೆಂದು ಸುಳ್ಳು ಹೇಳಿಕೊಂಡು, ವರ್ಗಾವಣೆ ಮಾಡಿಕೊಡುವುದಾಗಿ ಭರವಸೆ ನೀಡಿದ್ದ ಮತ್ತು ಎಂಎಲ್‌ಎ ಎಂಬ ಸಾರ್ವಜನಿಕ ಪ್ರತಿನಿಧಿ ಸೋಗಿನಲ್ಲಿ ನಿಗಮದ ಎಂಡಿ ನಿರ್ದೇಶಕರು ರವರ ಮೊಬೈಲ್ ಸಂಖ್ಯೆಗೆ ಕರೆ ಮಾಡಿ, ವಂಚಿಸಿರುವ ಪುನೀತ್ ನನ್ನು ನಿಗಮದ ಅಧಿಕಾರಿಗಳ ದೂರಿನನ್ವಯ ವಿಲ್ಸನ್ ಗಾರ್ಡನ್ ಪೊಲೀಸರು ಬಂಧಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com