ಬೆಂಗಳೂರಿಗೆ ಪ್ರಧಾನಿ ಮೋದಿ ಭೇಟಿ; ಸಕಲ ಸಿದ್ಧತೆ ಪೂರ್ಣ, ಕಾರ್ಯಕ್ರಮ ಪಟ್ಟಿ ಇಂತಿದೆ!
ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆ ಅನಾವರಣ ಸೇರಿಂದತೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಬೆಂಗಳೂರಿಗೆ ಆಗಮಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಸ್ವಾಗತಕ್ಕೆ ಉದ್ಯಾನನಗರಿ ಸಕಲ ರೀತಿಯಲ್ಲೂ ಸಜ್ಜಾಗಿದೆ.
Published: 11th November 2022 12:14 AM | Last Updated: 11th November 2022 01:41 PM | A+A A-

ಬೆಂಗಳೂರಿಗೆ ಪ್ರಧಾನಿ ಮೋದಿ
ಬೆಂಗಳೂರು: ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆ ಅನಾವರಣ ಸೇರಿಂದತೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಬೆಂಗಳೂರಿಗೆ ಆಗಮಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಸ್ವಾಗತಕ್ಕೆ ಉದ್ಯಾನನಗರಿ ಸಕಲ ರೀತಿಯಲ್ಲೂ ಸಜ್ಜಾಗಿದೆ.
ಹೌದು.. ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆಯಲ್ಲಿ ವಿಶೇಷ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಹಾಗೆಯೇ, ಸಂಚಾರ ವ್ಯವಸ್ತೆಯಲ್ಲೂ ಕೆಲವೊಂದು ಮಾರ್ಪಾಡುಗಳನ್ನು ಮಾಡಲಾಗಿದೆ. ನಾಳೆ ದೆಹಲಿಯಿಂದ ವಿಶೇಷ ವಿಮಾನದಲ್ಲಿ ಬೆಳಿಗ್ಗೆ 10.05ಕ್ಕೆ ಬೆಂಗಳೂರಿನ ಹೆಚ್‌ಎಎಲ್ ವಿಮಾನನಿಲ್ದಾಣಕ್ಕೆ ಪ್ರಧಾನಿ ಮೋದಿ ಆಗಮಿಸಲಿದ್ದಾರೆ. ವಿಮಾನ ನಿಲ್ದಾಣದಿಂದ ರಸ್ತೆ ಮೂಲಕ 10.30ಕ್ಕೆ ವಿಧಾನಸೌಧದ ಶಾಸಕರ ಭವನಕ್ಕೆ ಆಗಮಿಸುವ ಪ್ರಧಾನಿಗಳು, ಶಾಸಕರ ಭವನದ ಅವರಣದಲ್ಲಿರುವ ಸಂತ ಶ್ರೇಷ್ಠ ಕನಕದಾಸ ಹಾಗೂ ಮಹರ್ಷಿ ವಾಲ್ಮೀಕಿ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಲಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿ ನಾಳೆ ಬೆಂಗಳೂರಿಗೆ: ಯಾವ ಸಮಯಕ್ಕೆ ಏನು ಕಾರ್ಯಕ್ರಮ, ಎಲ್ಲೆಲ್ಲಿ ಸಂಚಾರ ನಿರ್ಬಂಧ, ಇಲ್ಲಿದೆ ಮಾಹಿತಿ...
ಅಲ್ಲಿಂದ ನೇರವಾಗಿ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲುನಿಲ್ದಾಣಕ್ಕೆ ಆಗಮಿಸುವ ಪ್ರಧಾನಿಗಳು, ವಂದೇ ಮಾತರಂ ಮತ್ತು ಭಾರತ್ ಗೌರವ್ ಕಾಶಿದರ್ಶನ್ ರೈಲುಗಳ ಸಂಚಾರಕ್ಕೆ ಹಸಿರು ನಿಶಾನೆ ತೋರುವರು.ರೈಲುನಿಲ್ದಾಣದಿಂದ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ತೆರಳುವ ಪ್ರಧಾನಿಗಳು, ಅಲ್ಲಿ ವಿಮಾನನಿಲ್ದಾಣದ 2ನೇ ಟರ್ಮಿನಲ್‌ನ್ನು ಉದ್ಘಾಟಿಸಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಸ್ಥಾಪಿಸಲಾಗಿರುವ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸುವರು. ಇದಾದ ನಂತರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಪ್ರಧಾನಿಗಳು ಮಾತನಾಡಲಿದ್ದಾರೆ.
ಇದನ್ನೂ ಓದಿ: ಕೆಂಪೇಗೌಡರ ಹೆಸರಿಗೆ ಮತ್ತೊಂದು ಗರಿ: 108 ಅಡಿ ಎತ್ತರದ 'ಪ್ರಗತಿ ಪ್ರತಿಮೆ' ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಗೆ ಸೇರ್ಪಡೆ
ಈ ಸಾರ್ವಜನಿಕ ಸಭೆಯಲ್ಲಿ 4 ರಿಂದ 5 ಲಕ್ಷ ಜನ ಭಾಗಿಯಾಗುವ ನಿರೀಕ್ಷೆ ಇದ್ದು, ಎಲ್ಲ ರೀತಿಯ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಪ್ರಧಾನಿಯವರ ಕಾರ್ಯಕ್ರಮಗಳ ಭದ್ರತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಸರಣಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಬೆಂಗಳೂರಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ನಾಳೆ ನಗರದಾದ್ಯಂತ ಬಿಗಿ ಪೊಲೀಸ್ ಭದ್ರತೆಯನ್ನು ಕೈಗೊಳ್ಳಲಾಗಿದೆ. ಪ್ರಧಾನಿಗಳು ಪಾಲ್ಗೊಳ್ಳುವ ವಿಮಾನ ನಿಲ್ದಾಣ, ವಿಧಾನ ಸೌಧ, ರೈಲ್ವೆ ನಿಲ್ದಾಣವನ್ನು ಮುಂಜಾನೆಯಿಂದ ಕೇಂದ್ರ ಭದ್ರತಾ ಪಡೆಗಳು ವಶಕ್ಕೆ ಪಡೆಯಲಿದ್ದು ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು ಸೂಕ್ಷ್ಮ ಅತಿಸೂಕ್ಷ್ಮ ಪ್ರದೇಶದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಿ ಕಟ್ಟೆಚ್ಚರ ವಹಿಸಲಾಗಿದೆ.
ಇದನ್ನೂ ಓದಿ: ಪ್ರಧಾನಿ ಮೋದಿ ಬರುವ ಹಾದಿಯಲ್ಲಿ...: ರಸ್ತೆ ಸಂಚಾರ ನಿರ್ಬಂಧ ಎಲ್ಲೆಲ್ಲಿ? ಇಲ್ಲಿದೆ ಸಂಪೂರ್ಣ ಮಾಹಿತಿ
ಪ್ರಧಾನಿಗಳ ಭೇಟಿಯ ಹಿನ್ನೆಲೆಯಲ್ಲಿ ಬೆಳಿಗ್ಗೆ 8ರಿಂದ 11:30ರ ಅವಧಿಯಲ್ಲಿ ನಗರ ರೈಲು ನಿಲ್ದಾಣಕ್ಕೆ ಬರಬೇಕಿದ್ದ ಹಾಗೂ ನಗರ ರೈಲು ನಿಲ್ದಾಣದಿಂದ ಸಂಚರಿಸಬೇಕಿದ್ದ ಹಲವು ರೈಲುಗಳನ್ನು ಯಶವಂತಪುರ ಹಾಗೂ ಬೈಯಪ್ಪನಹಳ್ಳಿ ನಿಲ್ದಾಣಗಳಿಗೆ ಮಾರ್ಗ ಬದಲಾವಣೆ ಮಾಡಲಾಗಿದೆ. ಈ ಅವಧಿಯಲ್ಲಿ ನಗರ ರೈಲು ನಿಲ್ದಾಣದಿಂದ ಸಂಚಾರ ಆರಂಭಿಸಬೇಕಿದ್ದ ರೈಲುಗಳು 12 ಗಂಟೆಯ ನಂತರ ಹೊರಡಲಿವೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: KIA ಟರ್ಮಿನಲ್ 2: ಉದ್ಯಾನ ನಗರಿ ಖ್ಯಾತಿಗೆ ಮತ್ತೊಂದು ಗರಿ, ವಿಶೇಷತೆಗಳೇನು?
ರೈಲು ನಿಲ್ದಾಣ ಹಾಗೂ ಸುತ್ತಮುತ್ತಲ ಪ್ರದೇಶಗಳಿಗೆ ಪೊಲೀಸರು ಹಾಗೂ ರೈಲ್ವೆ ಇಲಾಖೆಯಿಂದ ಭದ್ರತೆ ಕಲ್ಪಿಸಲಾಗಿದೆ. ಬೆಳಗ್ಗೆ 8 ಗಂಟೆಯಿಂದ ಯಾವುದೇ ರೈಲುಗಳು ನಗರ ನಿಲ್ದಾಣಕ್ಕೆ ಬರುವುದಿಲ್ಲ. ಪ್ಲಾಟ್ ಫಾರಂ 7 ಅಥವಾ 8ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಂದೇ ಭಾರತ್ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಲಿದ್ದಾರೆ. ರೈಲು ನಿಲ್ದಾಣ ಸುತ್ತಮುತ್ತಲ ಪ್ರದೇಶದ ಭದ್ರತೆಗಾಗಿ 1200ಕ್ಕೂ ಹೆಚ್ಚು ರೈಲ್ವೆ ಪೊಲೀಸರನ್ನು ನೇಮಿಸಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಬೆಳಿಗ್ಗೆ 9 ಗಂಟೆಗೆ ಮೋದಿ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ನಂತರ ಹೆಲಿಕಾಪ್ಟರ್‌ನಲ್ಲಿ ಮೇಖ್ರಿ ಸರ್ಕಲ್ ಸಮೀಪದ ಏರ್‌ಫೋರ್ಸ್ ಕಮಾಂಡ್‌ಗೆ ಬರಲಿದ್ದಾರೆ. ಅಲ್ಲಿಂದ ಕಾರಿನಲ್ಲಿ ನಗರ ರೈಲು ನಿಲ್ದಾಣಕ್ಕೆ ತೆರಳಲಿದ್ದಾರೆ. ಮಾರ್ಗದಲ್ಲಿ ಭದ್ರತೆಗಾಗಿ 6500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ ನಗರದ ಎಲ್ಲಾ ಹೆಚ್ಚುವರಿ ಪೊಲೀಸ್ ಆಯುಕ್ತರು, ಜಂಟಿ ಆಯುಕ್ತರು, ಡಿಸಿಪಿಗಳು, ಎಸಿಪಿ, ಇನ್ಸ್‌ಪೆಕ್ಟರ್ ಸಬ್‌ಇನ್ಸ್‌ಪೆಕ್ಟರ್ ಸೇರಿ ಬಹುತೇಕ ಸಿಬ್ಬಂದಿ ಭದ್ರತೆಯಲ್ಲಿ ತೊಡಗಲಿದ್ದಾರೆ. 20 ಕೆಎಸ್‌ಆರ್‌ಪಿ ಹಾಗೂ ಸಿಎಆರ್ ತುಕಡಿಗಳು ಕಾರ್ಯ ನಿರ್ವಹಿಸಲಿವೆ. ರೈಲು ನಿಲ್ದಾಣದಿಂದ ವಿಮಾನ ನಿಲ್ದಾಣಕ್ಕೆ ಕಾರು ಅಥವಾ ಹೆಲಿಕಾಪ್ಟರ್ ಮೂಲಕ ತೆರಳಲಿದ್ದಾರೆ.
ಇದನ್ನೂ ಓದಿ: ಮೋದಿ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳ ಕರೆತರುವಂತೆ ಸೂಚನೆ: ವಿವಾದ ಭುಗಿಲೇಳುತ್ತಿದ್ದಂತೆ ಸುತ್ತೋಲೆ ವಾಪಸ್ ಪಡೆದ ಶಿಕ್ಷಣ ಇಲಾಖೆ
ಪ್ರಧಾನಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಗರದಾದ್ಯಂತ ಭಾರೀ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ. ಅವರು ಸಂಚರಿಸುವ ಮಾರ್ಗದ ರಸ್ತೆಗಳನ್ನು ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಅಲ್ಲದೆ, ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಸಹ ಬಂದ್ ಮಾಡಲಾಗಿದೆ. ಪ್ರಧಾನಿ ನರೇಂದ್ರಮೋದಿ ಅವರು ಸಂಚರಿಸುವ ರಸ್ತೆಗಳಿಗೆ ಹೊಸದಾಗಿ ಡಾಂಬರು ಹಾಕಲಾಗಿದ್ದು, ರಸ್ತೆ ಗುಂಡಿಗಳಿಗೆ ಮೋಕ್ಷ ಸಿಕ್ಕಂತಾಗಿದೆ. ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲವು ರಸ್ತೆಗಳು ಸಪಾಟಾಗಿದ್ದು, ರಸ್ತೆ ಗುಂಡಿಗಳ ಸಮಸ್ಯೆಯಿಂದ ಮುಕ್ತವಾಗಿವೆ.
2 ಲಕ್ಷಕ್ಕೂ ಅಧಿಕ ಜನರಿಗೆ ಭರ್ಜರಿ ತಿಂಡಿ, ಊಟದ ತಯಾರಿ
ಇನ್ನು ಸಮಾವೇಶ ಹಿನ್ನೆಲೆ 2 ಲಕ್ಷಕ್ಕೂ ಅಧಿಕ ಜನರಿಗೆ ಅಡುಗೆ ತಯಾರಿ ಮಾಡಲಾಗುತ್ತಿದೆ. 700 ಕ್ಕೂ ಅಧಿಕ ಬಾಣಸಿಗರಿಂದ ಬೆಳಗ್ಗೆ ತಿಂಡಿ ಮತ್ತು ಮಧ್ಯಾಹ್ನ ಊಟಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ತಿಂಡಿಗೆ ಟಮೋಟ ಬಾತ್, ಮೈಸೂರು ಪಾಕ್ ಇರಲಿದೆ. ಮಧ್ಯಾಹ್ನದ ಊಟಕ್ಕೆ ಪಲಾವ್, ಮೊಸರು ಬಜ್ಜಿ, ಮೊಸರನ್ನ ಮತ್ತು ಅಕ್ಕಿ ಪಾಯಸ ತಯಾರಿಸಲಾಗುತ್ತಿದೆ. ಎಸ್ಜಿಎಸ್ ಕ್ಯಾಟರಿಂಗ್ಸ್ ಮತ್ತು ಅನ್ನಪೂರ್ಣೇಶ್ವರಿ ಕ್ಯಾಟರಿಂಗ್ಸ್ ವತಿಯಿಂದ ಅಡುಗೆ ತಯಾರಿ ಮಾಡಲಾಗುತ್ತಿದೆ. ಊಟ ತಿಂಡಿ ಬಡಿಸಲು 150 ಕೌಂಟರ್ಗಳ ವ್ಯವಸ್ಥೆ ಮಾಡಲಾಗಿದ್ದು, ಬೆಳಗ್ಗೆ 08 ಗಂಟೆಯಿಂದ ತಿಂಡಿ ವ್ಯವಸ್ಥೆಯಿರಲಿದೆ. ಈಗಾಗಲೆ ಏರ್ಪೋಟ್ ಸಮಾವೇಶದ ಬಳಿ ಅಡುಗೆ ತಯಾರಿಯಲ್ಲಿ ಬಾಣಸಿಗರು ನಿರತರಾಗಿದ್ದಾರೆ.