ಟಿವಿ, ಫ್ರಿಡ್ಜ್ ರಿಪೇರಿ ಹೆಸರಿನಲ್ಲಿ ಗ್ರಾಹಕರನ್ನು ವಂಚಿಸುತ್ತಿದ್ದ ನಕಲಿ ಟೆಕ್ನಿಷಿಯನ್ ಬಂಧನ

ಎಲೆಕ್ಟ್ರಾನಿಕ್ ವಸ್ತುಗಳು ಹಾಗೂ ಗೃಹಪಯೋಗಿ ವಸ್ತುಗಳನ್ನು ರಿಪೇರಿ ಮಾಡುವುದಾಗಿ ಹೇಳಿ ಆನ್'ಲೈನ್ ಮೂಲಕ ಹಣ ಪಡೆದು ಸಾರ್ವಜನಿಕರಿಗೆ ವಂಚಿಸುತ್ತಿದ್ದ ಕಿಡಿಗೇಡಿಯೊಬ್ಬನನ್ನು ಈಶಾನ್ಯ ವಿಭಾಗದ ಸಿಇಎನ್ ಠಾಣೆ ಪೊಲೀಸರು ಶನಿವಾರ ಬಂಧನಕ್ಕೊಳಪಡಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಎಲೆಕ್ಟ್ರಾನಿಕ್ ವಸ್ತುಗಳು ಹಾಗೂ ಗೃಹಪಯೋಗಿ ವಸ್ತುಗಳನ್ನು ರಿಪೇರಿ ಮಾಡುವುದಾಗಿ ಹೇಳಿ ಆನ್'ಲೈನ್ ಮೂಲಕ ಹಣ ಪಡೆದು ಸಾರ್ವಜನಿಕರಿಗೆ ವಂಚಿಸುತ್ತಿದ್ದ ಕಿಡಿಗೇಡಿಯೊಬ್ಬನನ್ನು ಈಶಾನ್ಯ ವಿಭಾಗದ ಸಿಇಎನ್ ಠಾಣೆ ಪೊಲೀಸರು ಶನಿವಾರ ಬಂಧನಕ್ಕೊಳಪಡಿಸಿದ್ದಾರೆ.

ಗುರಪ್ಪನಪಾಳ್ಯದ ಎಂ.ಕೆ.ಹೌಸ್ ನಿವಾಸಿ ಅಬ್ದುಲ್ ಸುಬಾನ ಬಂಧಿಕ ಆರೋಪಿಯಾಗಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಪ್ರೊಫೈಲ್ ಸೃಷ್ಟಿಸಿದ್ದ ಆರೋಪಿ, ರಿಪೇರಿಗಾಗಿ ಯಾರಾದರೂ ಸಂಪರ್ಕಿಸಿದಾಗ, ಹಾನಿಗೊಳಗಾದ ಉಪಕರಣಗಳ ಭಾಗಗಳ ಫೋಟೋಗಳನ್ನು ಹಂಚಿಕೊಳ್ಳುವಂತೆ ತಿಳಿಸುತ್ತಿದ್ದ. ಫೋಟೋ ಕಳುಹಿಸಿದ ಬಳಿಕ ರಿಪೇರಿಗಾಗುವ ಮೊತ್ತವನ್ನು ತಿಳಿಸಿ, ಆನ್ ಲೈನ್ ಮೂಲಕ ಹಣ ಪಾವತಿ ಮಾಡುವಂತೆ ಕೇಳುತ್ತಿದ್ದ. ಹಣ ಪಾವತಿ ಮಾಡಿದ ಬಳಿಕ ಗ್ರಾಹಕರ ಫೋನ್ ಸಂಖ್ಯೆಗಳನ್ನು ನಿರ್ಬಂಧಿಸುತ್ತಿದ್ದ.

ಒಂದು ವೇಳೆ ಗ್ರಾಹಕರು ಆನ್‌ಲೈನ್‌ನಲ್ಲಿ ಪಾವತಿಸಲು ನಿರಾಕರಿಸಿದರೆ, ಮನೆಗೆ ಭೇಟಿ ನೀಡುತ್ತಿದ್ದ. ಉಪಕರಣವನ್ನು ಪರಿಶೀಲಿಸಿದ ನಂತರ, ಅಗತ್ಯವಿರುವ ಭಾಗಗಳನ್ನು ಖರೀದಿಸಬೇಕೆಂದು ಹೇಳಿ ಹಣ ಪಡೆದುಕೊಂಡು ಪರಾರಿಯಾಗುತ್ತಿದ್ದ.

ಬಂಧಿತ ಆರೋಪಿಯಿಂದ ಪೊಲೀಸರು ಎರಡು ಮೊಬೈಲ್ ಫೋನ್‌ಗಳು ಮತ್ತು ನಾಲ್ಕು ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಯಾವುದೇ ಟೆಕ್ನಿಷಿಯನ್ ವಸ್ತುಗಳ ರಿಪೇರಿ ಮಾಡುವ ಮೊದಲು ಅಥವಾ ಉಪಕರಣವನ್ನು ಪರಿಶೀಲಿಸದೆಯೇ ಆರಂಭಿಕ ಪಾವತಿಯನ್ನು ಮಾಡಲು ಕೇಳಿದರೆ, ಅಂತಹ ವ್ಯಕ್ತಿಗಳಿಗೆ ಜನರು ಹಣವನ್ನು ನೀಡಬಾರದು. ರಿಪೇರಿ ಮಾಡಿದ ನಂತರವೇ ಹಣ ಪಾವತಿಸಬೇಕು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಆರೋಪಿಯ ವಿರುದ್ಧ ಐಟಿ ಕಾಯ್ದೆ, ಐಪಿಸಿ 419 (ವ್ಯಕ್ತಿಯಿಂದ ವಂಚನೆ) ಮತ್ತು 420 (ವಂಚನೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com