ಕಾರಿನ ಬಾಗಿಲು ಬಡಿದು ಕೆಳಗೆ ಬಿದ್ದಾತನ ಮೇಲೆ ಹರಿದ ಟ್ರಕ್: ಬೈಕ್ ಸವಾರ ಸಾವು

ಏಕಾಏಕಿ ತೆರೆದ ಕಾರಿನ ಬಾಗಿಲಿಗೆ ಡಿಕ್ಕಿ ಹೊಡೆದು ವೇಗವಾಗಿ ಬರುತ್ತಿದ್ದ ಟ್ರಕ್‌ನ ಚಕ್ರಕ್ಕೆ ಸಿಲುಕಿ 58 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಕನಕಪುರ ರಸ್ತೆಯಲ್ಲಿ ಶನಿವಾರ ಬೆಳಗ್ಗೆ  ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಏಕಾಏಕಿ ತೆರೆದ ಕಾರಿನ ಬಾಗಿಲಿಗೆ ಡಿಕ್ಕಿ ಹೊಡೆದು ವೇಗವಾಗಿ ಬರುತ್ತಿದ್ದ ಟ್ರಕ್‌ನ ಚಕ್ರಕ್ಕೆ ಸಿಲುಕಿ 58 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಕನಕಪುರ ರಸ್ತೆಯಲ್ಲಿ ಶನಿವಾರ ಬೆಳಗ್ಗೆ  ನಡೆದಿದೆ.

ಮೃತರನ್ನು ಹಾರೋಹಳ್ಳಿ ನಿವಾಸಿ ಪುಟ್ಟಸ್ವಾಮಿ ಕೆ ಎಂದು ಗುರುತಿಸಲಾಗಿದೆ. ಆರೋಗ್ಯ ಇಲಾಖೆಯಲ್ಲಿ ಮೇಲ್ವಿಚಾರಕರಾಗಿದ್ದ ಅವರು ನಿವೃತ್ತಿಯ ನಂತರ ಕನಕಪುರದ ಸರ್ಕಾರಿ ನೌಕರರ ಸಂಘದ ಖಜಾಂಚಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ಸಂಘಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಲು ಪುಟ್ಟಸ್ವಾಮಿ ಬೈಕ್‌ನಲ್ಲಿ ಬ್ಯಾಂಕ್‌ಗೆ ಹೋಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಎಂ.ಜಿ.ರಸ್ತೆ ವೃತ್ತದಲ್ಲಿ ಕಾರು ಚಾಲಕ ಬಲ ಬದಿಯಿಂದ ವಾಹನಗಳು ಬರುತ್ತಿವೆಯೇ ಎಂಬುದನ್ನು ಪರಿಶೀಲಿಸದೆ ಏಕಾಏಕಿ ಬಾಗಿಲು ತೆರೆದಿದ್ದು, ಈ ವೇಳೆ ಪುಟ್ಟಸ್ವಾಮಿ ಬಾಗಿಲಿಗೆ ಢಿಕ್ಕಿ ಹೊಡೆದು ರಸ್ತೆಗೆ ಬಿದ್ದಿದ್ದು ಪಕ್ಕದಲ್ಲೇ ವೇಗವಾಗಿ ಬಂದ ಲಾರಿ ಅವರ ಮೇಲೆ ಹರಿದಿದೆ. ಘಟನೆಯಲ್ಲಿ ಪುಟ್ಟಸ್ವಾಮಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆಂದು ಮಾಹಿತಿ ನೀಡಿದ್ದಾರೆ.

ಈ ನಡುವೆ ಘಟನೆ ಬಗ್ಗೆ ಹಲವು ಬಾರಿ ಮಾಹಿತಿ ನೀಡಿದರೂ ಕನಕಪುರ ಸಂಚಾರ ಪೊಲೀಸರು ಸ್ಥಳಕ್ಕೆ ಧಾವಿಸದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿ, ಅಧಿಕಾರಿಗಳ ವರ್ತನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಂತರ ಸ್ಥಳೀಯ ಮುಖಂಡರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಪ್ರತಿಭಟನಾಕಾರರನ್ನು ಸಮಾಧಾನಪಡಿಸಿ ಪರಿಸ್ಥಿತಿ ಹತೋಟಿಗೆ ತಂದರು. ಇದೀಗ ಘಟನೆ ಸಂಬಂಧ ಕಾರು ಮತ್ತು ಟ್ರಕ್ ಚಾಲಕರ ವಿರುದ್ಧ ನಿರ್ಲಕ್ಷ್ಯದ ಚಾಲನೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com