ಬೆಂಗಳೂರು: ಕ್ಷಿಪ್ರ ಕಾಮಗಾರಿಗಾಗಿ 'ರ್‍ಯಾಪಿಡ್ ರೋಡ್ಸ್' ತಂತ್ರಜ್ಞಾನ ಅಳವಡಿಸಿಕೊಳ್ಳಲು ಬಿಬಿಎಂಪಿ ಮುಂದು!

ರಸ್ತೆ ಗುಂಡಿ, ಸಂಚಾರ ದಟ್ಟಣೆಯಿಂದಾಗಿ ಹಲವು ಟೀಕೆಗಳನ್ನು ಎದುರಿಸುತ್ತಿರುವ ಬಿಬಿಎಂಪಿ, ಸಮಸ್ಯೆಗಳ ದೂರಾಗಿಸಲು ಇದೀಗ ರ್ಯಾಪಿಡ್ ರೋಡ್ಸ್ ಎಂಬ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಕ್ಷಿಪ್ರಗತಿಯಲ್ಲಿ ರಸ್ತೆ ನಿರ್ಮಾಣ ಕಾರ್ಯಕ್ಕೆ ಮುಂದಾಗಿದೆ.
ಹಳೇ ಮದ್ರಾಸ್ ರಸ್ತೆಯಲ್ಲಿ ನಡೆಯುತ್ತಿರುವ ರಸ್ತೆ ನಿರ್ಮಾಣ ಕಾಮಗಾರಿ.
ಹಳೇ ಮದ್ರಾಸ್ ರಸ್ತೆಯಲ್ಲಿ ನಡೆಯುತ್ತಿರುವ ರಸ್ತೆ ನಿರ್ಮಾಣ ಕಾಮಗಾರಿ.

ಬೆಂಗಳೂರು: ರಸ್ತೆ ಗುಂಡಿ, ಸಂಚಾರ ದಟ್ಟಣೆಯಿಂದಾಗಿ ಹಲವು ಟೀಕೆಗಳನ್ನು ಎದುರಿಸುತ್ತಿರುವ ಬಿಬಿಎಂಪಿ, ಸಮಸ್ಯೆಗಳ ದೂರಾಗಿಸಲು ಇದೀಗ ರ್ಯಾಪಿಡ್ ರೋಡ್ಸ್ ಎಂಬ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಕ್ಷಿಪ್ರಗತಿಯಲ್ಲಿ ರಸ್ತೆ ನಿರ್ಮಾಣ ಕಾರ್ಯಕ್ಕೆ ಮುಂದಾಗಿದೆ.

ವೈಟ್ ಟಾಪಿಂಗ್ ಅಥವಾ ಟೆಂಡರ್ ಶ್ಯೂರ್ ರಸ್ತೆ ಕಾಮಗಾರಿ ಸಮಯದಲ್ಲಿ ವಾಹನ ಸಂಚಾರ ನಿಷೇಧಿಸುವುದರಿಂದ ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುತ್ತದೆ. ಹೀಗಾಗಿ ಅದನ್ನು ತಪ್ಪಿಸಲು ರ್ಯಾಪಿಡ್ ರಸ್ತೆ ಎಂಬ ತಂತ್ರಜ್ಞಾನವನ್ನು ಬಿಬಿಎಂಪಿ ಅಳವಡಿಸಿಕೊಂಡಿದೆ.

ರ್ಯಾಪಿಡ್ ರಸ್ತೆಯನ್ನು ಪ್ರೀಕಾಸ್ಟ್ ಪೋಸ್ಟ್ ಟೆನ್ಷನಿಂಗ್ ಕಾಂಕ್ರೀಟ್ ಪೇವ್ ಮೆಂಟ್ ನಿಂದ ನಿರ್ಮಿಸಲಾಗುತ್ತಿದೆ. ಮೊದಲಿಗೆ ರಸ್ತೆಯನ್ನು ಸಮತಟ್ಟಾಗಿ ಮಾಡಿಕೊಂಡು ಅದರ ಮೇಲೆ ಫ್ರೀಕಾಸ್ಟ್ ಪ್ಯಾನಲ್ ಗಳನ್ನು ಅಳವಡಿಸಲಾಗುತ್ತದೆ. ಪ್ರತಿ ಪ್ರೀಕಾಸ್ಟ್ ಪ್ಯಾನಲ್ ಗಳಲ್ಲಿ 4 ರಂಧ್ರಗಳಿರಲಿದ್ದು, ವಾಹನಗಳು ಇದರ ಮೇಲೆ ಸಂಚರಿಸುವಾಗ ವಾಹನಗಳ ಭಾರದಿಂದ ಪ್ಯಾನಲ್ ಗಳು ಅಲುಗಾಡದಂತೆ ಒಂದು ಪ್ಯಾನಲ್ ನಿಂದ ಮತ್ತೊಂದು ಪ್ಯಾನಲ್'ಗೆ ಪೋಸ್ಟ್ ಟೆನ್ಷನಿಂಗ್ ಮಾಡಲಾಗುತ್ತದೆ. ಇದರಿಂದ ಎಷ್ಟೇ ಭಾರದ ವಾಹನಗಳು ಸಂಚರಿಸಿದರೂ ಯಾವುದೇ ಸಮಸ್ಯೆಯಾಗುವುದಿಲ್ಲ.

ಮೊದಲಿಗೆ ನಗರದ  ಹಳೆ ಮದ್ರಾಸ್ ರಸ್ತೆಯಲ್ಲಿ ಈ ಹೊಸ ತಂತ್ರಜ್ಞಾನ ಬಳಸಿ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಿನ್ನೆ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಹಳೆ ಮದ್ರಾಸ್ ರಸ್ತೆಯಲ್ಲಿ 100 ಅಡಿ ರಸ್ತೆ ಜಂಕ್ಷನ್‌ನಿಂದ ಪೆಟ್ರೋಲ್ ಜಂಕ್ಷನ್‌ವರೆಗಿನ 500 ಮೀಟರ್ ವ್ಯಾಪ್ತಿಯ ರಸ್ತೆಯನ್ನು ಪರಿಶೀಲಿಸಿದರು.

ಹಳೇ ಮದ್ರಾಸ್ ರಸ್ತೆಯಲ್ಲಿ ಪ್ರಾಯೋಗಿಕವಾಗಿ ಯೋಜನೆಯನ್ನು ಕೈಗೊಳ್ಳಲಾಗಿದೆ. ಪ್ರತಿ ಕಿಲೋಮೀಟರ್‌ಗೆ ಸಾಂಪ್ರದಾಯಿಕ ವಿಧಾನಕ್ಕಿಂತ ಈ ತಂತ್ರಜ್ಞಾನ 20 ಪ್ರತಿಶತ ಹೆಚ್ಚು ವೆಚ್ಚವಾಗಿದ್ದರೂ, ನಿರ್ಮಾಣ ಸಮಯ ಕಡಿಮೆಯಾಗಿದೆ. “ಇದರಲ್ಲಿ ಪ್ರಿ-ಕಾಸ್ಟ್ ವಿಧಾನವನ್ನು ಬಳಸಲಾಗುತ್ತದೆ ಎಂದು ತುಷಾರ್ ಗಿರಿನಾಥ್ ಅವರು ಹೇಳಿದರು.

ಹಳೆ ಮದ್ರಾಸ್ ರಸ್ತೆಯ ಹೊಸ ಬಿನ್ನಮಂಗಲ ವೃತ್ತದ ಬಳಿ ರ‍್ಯಾಪಿಡ್ ರಸ್ತೆ ನಿರ್ಮಾಣ ಮಾಡುತ್ತಿದ್ದು, ನಿನ್ನೆಯಿಂದ ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ. ಈ ಪೈಕಿ 500 ಮೀಟರ್ ಉದ್ದದ ರಸ್ತೆಯಲ್ಲಿ ಈವರೆಗೆ ಸುಮಾರು ಸುಮಾರು 100 ಮೀಟರ್ ಗಳಿಗೆಪ್ರೀಕಾಸ್ಟ್ ಪ್ಯಾನಲ್‌ಗಳನ್ನು ಅಳವಡಿಸಲಾಗಿದ್ದು, ಇನ್ನು 2 ದಿನದೊಳಗಾಗಿ ರ್ಯಾಪಿಡ್ ರಸ್ತೆ ನಿರ್ಮಾಣವಾಗಲಿದೆ.

ವಿಂಡ್‌ಟನಲ್ ಜಂಕ್ಷನ್ ಬಳಿ ನಿರ್ಮಿಸುತ್ತಿರುವ ಕೆಳಸೇತುವೆ ಕಾಮಗಾರಿಯು ಪ್ರಗತಿಯಲ್ಲಿದ್ದು, ಎನ್.ಎ.ಎಲ್ ಮತ್ತು ಇಸ್ರೋ ಸಂಸ್ಥೆಗೆ ಸೇರಿದ ಜಾಗವನ್ನು ಭೂಸ್ವಾಧೀನ ಪಡಿಸಿಕೊಳ್ಳಲಾಗಿರುತ್ತದೆ. ಒಂದು ಭಾಗದಲ್ಲಿ ಕೆಳಸೇತುವೆಯ ರಿಟೈನಿಂಗ್ ವಾಲ್ ಕಾಮಗಾರಿ ಪೂರ್ಣಗೊಳಿಸಲಾಗಿರುತ್ತದೆ. ರಸ್ತೆಯ ಇನ್ನೊಂದು ಭಾಗದಲ್ಲಿ ಬದಲಿ ವಾಹನ ಸಂಚಾರಕ್ಕೆ ಅನುಮತಿ ಪಡೆದು ಸಂಚಾರಿ ಮಾರ್ಗ ಬದಲಾವಣೆಯಾದ ಕೂಡಲೆ ರಿಟೈನಿಂಗ್ ವಾಲ್ ಕಾಮಗಾರಿ ಮತ್ತು ಪ್ರೀಕಾಸ್ಟ್ ಬಾಕ್ಸ್ ಎಲಿಮೆಂಟ್ಸ್ ಅಳವಡಿಸಿ ಕಾಮಗಾರಿಯನ್ನು ಮುಂದಿನ ಜೂನ್ 2023ರೊಳಗಾಗಿ ಪೂರ್ಣಗೊಳಿಸಲು ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದರು.

ವಿಧಾನವನ್ನು ವಿವರಿಸಿದ ಅಲ್ಟ್ರಾಟೆಕ್ ಸಿಮೆಂಟ್ ಪ್ರಾದೇಶಿಕ ವ್ಯವಸ್ಥಾಪಕ ಪಿ.ಎಂ.ಹಿರೇಮಠ ಅವರು, ಅಮೆರಿಕಾದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಈ ಹೊಸ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. “ಪ್ರಿಕಾಸ್ಟ್ ಟೆನ್ಷನಿಂಗ್ ಕಾಂಕ್ರೀಟ್ ವಿಧಾನದಲ್ಲಿ, ರೆಡಿಮೇಡ್ ಕಲ್ಲುಗಳನ್ನು ಹಾಕಲಾಗುತ್ತದೆ ಮತ್ತು ಕ್ರೇನ್‌ಗಳನ್ನು ಬಳಸಿಕೊಂಡು ಕೀಲುಗಳ ಎರಡೂ ಬದಿಗಳಲ್ಲಿ ಉಕ್ಕಿನ ಕೇಬಲ್‌ಗಳಿಂದ ಜೋಡಿಸಲಾಗುತ್ತದೆ. ಕೇವಲ ಒಂದು ಅಥವಾ ಎರಡು ದಿನಗಳಲ್ಲಿ 150 ಮೀಟರ್ ವಿಸ್ತಾರವನ್ನು ಹಾಕಬಹುದು ಮತ್ತು ಶೀಘ್ರದಲ್ಲೇ ಸಂಚಾರಕ್ಕೆ ಅನುವು ಮಾಡಿಕೊಡಬಹುದು ಎಂದು ಹೇಳಿದರು.

ಪ್ರೀಕಾಸ್ಟ್ ಕಾಂಕ್ರೀಟ್ ಕಲ್ಲುಗಳನ್ನು ಅಸ್ತಿತ್ವದಲ್ಲಿರುವ ಮತ್ತು ಭವಿಷ್ಯದ ಸಂಚಾರ ಪರಿಸ್ಥಿತಿಗಳನ್ನು ಪರಿಗಣಿಸಿ ವಿನ್ಯಾಸಗೊಳಿಸಲಾಗಿದೆ. ಇದು ಕನಿಷ್ಠ ನಾಲ್ಕು ದಶಕಗಳವರೆಗೆ ಸಮಸ್ಯೆಗಳನ್ನು ಸೃಷ್ಟಿಯಾಗದಂತೆ ನೋಡಿಕೊಳ್ಳಲಿದೆ. 1 ಕಿ.ಮೀ ರಸ್ತೆಯ ವೈಟ್‌ ಟಾಪಿಂಗ್‌ಗೆ 7.5 ಕೋಟಿ ರ ವೆಚ್ಚವಾಗಲಿದೆ. ಹೊಸ ತಂತ್ರಜ್ಞಾನದ ವೆಚ್ಚ ರೂ.9.3 ಕೋಟಿ ಆಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com