ಬೆಂಗಳೂರು: ಬ್ಯಾಂಕ್ ನಲ್ಲಿ ನಕಲಿ ಚಿನ್ನವಿಟ್ಟು ವಂಚಿಸುತ್ತಿದ್ದ ಮೂವರ ಬಂಧನ!

ನಕಲಿ ಚಿನ್ನಾಭರಣಗಳನ್ನು ಅಡವಿಟ್ಟು ಸಾಲ ಪಡೆದು ಬ್ಯಾಂಕ್‌ಗಳಿಗೆ ವಂಚಿಸುತ್ತಿದ್ದ ಮೂವರನ್ನು ವಿಜಯನಗರ ಪೊಲೀಸರು ಬುಧವಾರ ಬಂಧನಕ್ಕೊಳಪಡಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ನಕಲಿ ಚಿನ್ನಾಭರಣಗಳನ್ನು ಅಡವಿಟ್ಟು ಸಾಲ ಪಡೆದು ಬ್ಯಾಂಕ್‌ಗಳಿಗೆ ವಂಚಿಸುತ್ತಿದ್ದ ಮೂವರನ್ನು ವಿಜಯನಗರ ಪೊಲೀಸರು ಬುಧವಾರ ಬಂಧನಕ್ಕೊಳಪಡಿಸಿದ್ದಾರೆ.

ಆರೋಪಿಗಳನ್ನು ಅರುಣ್ ರಾಜು ಕಾನಡೆ (30), ಸತ್ಯಾನಂದ ಅಲಿಯಾಸ್ ಸತ್ಯ ಮತ್ತು ದತ್ತಾತ್ರೇಯ ಬಾಕಳೆ ಅಲಿಯಾಸ್ ಯಶ್ ಎಂದು ಗುರುತಿಸಲಾಗಿದೆ.

ಸತ್ಯಾನಂದ ಮತ್ತು ಇನ್ನೋರ್ವ ಆರೋಪಿ ಸೆ.23ರಂದು ರಾಷ್ಟ್ರೀಕೃತ ಬ್ಯಾಂಕ್‌ಗೆ ಹೋಗಿ 7.15 ಲಕ್ಷ ಸಾಲ ಬೇಕು ಎಂದು ಹೇಳಿ 235.6 ಗ್ರಾಂ ಚಿನ್ನಾಭರಣ ನೀಡಿದ್ದರು. ಬಳಿಕ ಬ್ಯಾಂಕ್ ಅಧಿಕಾರಿಗಳು ಆರೋಪಿಗಳ ಬ್ಯಾಂಕ್ ವಿವರಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಇತರೆ ಬ್ಯಾಂಕ್ ಗಳಲ್ಲಿ  ನಕಲಿ ಚಿನ್ನ ನೀಡಿ ಸಾಲ ಪಡೆದು ಮೋಸ ಮಾಡಿರುವುದು ತಿಳಿದಿದಿದೆ. ಕೂಡಲೇ ಈ ಸಂಬಂಧ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪ್ರಕರಣ ಸಂಬಂಧ ಮೊದಲಿಗೆ ಸತ್ಯಾನಂದನನ್ನು ಬಂಧಿಸಲಾಯಿತು. ಈತನ ಮಾಹಿತಿ ಮೇರೆಗೆ ಇಬ್ಬರನ್ನು ಬಂಧಿಸಲಾಗಿದೆ.

ತನಿಖೆ ವೇಳೆ ಅರುಣ್ ಮತ್ತು ಬಾಕಳೆ ಅವರು ಪಶ್ಚಿಮ ಬಂಗಾಳದಿಂದ ನಕಲಿ ಚಿನ್ನಾಭರಣಗಳನ್ನು ಪಡೆದು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿರುವವರ ಮೂಲಕ ಗಿರವಿ ಇಟ್ಟಿರುವುದು ಬೆಳಕಿಗೆ ಬಂದಿದೆ.

ಇಎಂಐ ಮೂಲಕ ಹಣವನ್ನು ಮರುಪಾವತಿ ಮಾಡುವುದಾಗಿ ಹಾಗೂ ಕಮಿಷನ್ ನೀಡುವುದಾಗಿ ಹೇಳಿ ಖಾತೆ ಹೊಂದಿರುವವರ ಮೂಲಕ ನಕಲಿ ಚಿನ್ನವನ್ನು ಬ್ಯಾಂಕ್ ನಲ್ಲಿ ಅಡವಿಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು, ಉಡುಪಿ, ಗದಗ, ಕೊಪ್ಪಳ, ಹುಬ್ಬಳ್ಳಿ ಹಾಗೂ ಗುಜರಾತ್‌ನ ಸೂರತ್‌ನ ವಿವಿಧ ಬ್ಯಾಂಕ್‌ಗಳಲ್ಲಿ ಸುಮಾರು 15 ಕೆಜಿ ನಕಲಿ ಚಿನ್ನವನ್ನು ಅಡವಿಟ್ಟು ಕೋಟ್ಯಂತರ ರೂಪಾಯಿ ಸಾಲ ಮಾಡಿರುವುದು ಈವರೆಗಿನ ತನಿಖೆಯಿಂದ ದೃಢಪಟ್ಟಿದೆ.

ಆರೋಪಿಗಳಿಂದ ಇದೀಗ 1,475.640 ಗ್ರಾಂ ನಕಲಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com