ಕನ್ನಡ ಗೊತ್ತಿಲ್ಲದ್ದಕ್ಕೆ ಮಹಿಳೆಯ ನಿಂದಿಸಿ, ಥಳಿಸಿದ ಗುಂಪು!
ಕನ್ನಡ ಮಾತನಾಡಲು ಬರುವುದಿಲ್ಲ ಎಂಬ ಕಾರಣಕ್ಕೆ ಪಂಜಾಬ್ ಮೂಲದ ಮಹಿಳೆಯೊಬ್ಬರನ್ನು ಮಹಿಳೆಯರ ಗುಂಪೊಂದು ನಿಂದಿಸಿ, ಥಳಿಸಿರುವ ಘಟನೆ ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡಬೊಮ್ಮಸಂದ್ರದ ಸರ್ಕಾರಿ ಶಾಲೆಯ ಬಳಿ ನಡೆದಿದೆ.
Published: 29th November 2022 09:11 AM | Last Updated: 29th November 2022 11:56 AM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಕನ್ನಡ ಮಾತನಾಡಲು ಬರುವುದಿಲ್ಲ ಎಂಬ ಕಾರಣಕ್ಕೆ ಪಂಜಾಬ್ ಮೂಲದ ಮಹಿಳೆಯೊಬ್ಬರನ್ನು ಮಹಿಳೆಯರ ಗುಂಪೊಂದು ನಿಂದಿಸಿ, ಥಳಿಸಿರುವ ಘಟನೆ ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡಬೊಮ್ಮಸಂದ್ರದ ಸರ್ಕಾರಿ ಶಾಲೆಯ ಬಳಿ ನಡೆದಿದೆ.
ನೀಲಂಜಿತ್ ಕೌರ್ (46) ಥಳಿತಕ್ಕೊಳಗಾದ ಮಹಿಳೆಯಾಗಿದ್ದಾರೆ. ಇವರು ಮೂಲತಃ ಪಂಜಾಬ್ ಮೂಲದವರಾಗಿದ್ದು, ನಗರದಲ್ಲಿ ಸಲೂನ್ ಮತ್ತು ಸ್ಪಾ ನಡೆಸುತ್ತಿದ್ದಾರೆ.
ಸ್ಕೂಟರ್ ನಲ್ಲಿ ತೆರಳುತ್ತಿದ್ದಾಗ ಅಡ್ಡ ಬಂದ 7 ವರ್ಷದ ಮಗುವನ್ನು ಉಳಿಸಲು ಕೌರ್ ಅವರು ಹಠಾತ್ ಬ್ರೇಕ್ ಹಾಕಿದ್ದರು. ಬಳಿಕ ಮಗುವಿನ ಪಾಲಕರಿಗೆ ಮಗುವನ್ನು ನೋಡಿಕೊಳ್ಳುವಂತೆ ಮತ್ತು ರಸ್ತೆಯಲ್ಲಿ ಬಿಡದಂತೆ ಹೇಳಿದ್ದಾರೆ. ಈ ವೇಳೆ ಕೋಪಗೊಂಡ ಮಹಿಳೆಯರ ಗುಂಪು ಅವರನ್ನು ಸುತ್ತುವರೆದಿದೆ.
ಇದನ್ನೂ ಓದಿ: ಬಿಬಿಎಂಪಿ ಕಸದ ಲಾರಿ ಡಿಕ್ಕಿಯಾಗಿ ಇಬ್ಬರು ಯುವಕರು ಬಲಿ: ಸರ್ಕಾರದಿಂದ 25 ಲಕ್ಷ ರೂ.ಪರಿಹಾರ ಘೋಷಣೆ
ಬಳಿಕ ಮಹಿಳೆಗೆ ಕನ್ನಡ ಗೊತ್ತಿಲ್ಲ ಎಂದು ನಿಂದಿಸಲು ಆರಂಭಿಸಿದೆ. ನಂತರ ಮಾತಿಗೆ ಮಾತು ಬೆಳೆದು ಮಹಿಳೆಯರು ಕೌರ್ ಅವರನ್ನು ಥಳಿಸಿದ್ದಾರೆ. ಅಲ್ಲದೆ, ರಾಜ್ಯ ಬಿಟ್ಟು ಹೋಗುವಂತೆ ಹೇಳಿದ್ದಾರೆ.
ಇದರಿಂದ ಹತಾಶಳಾದ ಮಹಿಳೆ ತನ್ನನ್ನು ಹಿಂಬಾಲಿಸಿಕೊಂಡು ಬಂದು ಪ್ಲಾಸ್ಟಿಕ್ ಪೈಪ್ ನಿಂದ ಥಳಿಸಿರುವ ವಿಡಿಯೋವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದ್ದಾರೆ. ಮಹಿಳೆಯರ ಗುಂಪು ಕೌರ್ ಅವರ ಕೂದಲನ್ನು ಹಿಡಿದು ಎಳೆದಾಡಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಶುಕ್ರವಾರ ರಾತ್ರಿ 10ರಿಂದ 10.15ರ ನಡುವೆ ಈ ಘಟನೆ ನಡೆದಿದೆ.
ಜಗಳ ಆರಂಭವಾದಾಗ ಸ್ಥಳದಲ್ಲಿ ಒಬ್ಬರು ಆಕೆಗೆ ಕನ್ನಡ ಗೊತ್ತಿಲ್ಲ. ಹೊರಗಿನವಳು ಎಂದು ಹೇಳಿದ್ದಾರೆ. ಘಟನೆ ವೇಳೆ ಕೌರ್ ಒಬ್ಬಂಟಿಯಾಗಿದ್ದು, ಯಾರೊಬ್ಬರೂ ಇವರ ನೆರವಿಗೆ ಬಂದಿಲ್ಲ. ಮಹಿಳೆಯರು ಥಳಿಸಿರುವ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ಮತದಾರರ ಗುರುತಿನ ಚೀಟಿ ಪರಿಷ್ಕರಣೆ ಅಕ್ರಮ: ಮತ್ತೋರ್ವನ ಬಂಧನ
ಪ್ರಕರಣ ಸಂಬಂಧ ಇದೂವರಗೆ ಯಾರೊಬ್ಬರನ್ನೂ ಬಂಧನಕ್ಕೊಳಪಡಿಸಿಲ್ಲ. ವಶಕ್ಕೂ ಪಡೆದುಕೊಂಡಿಲ್ಲ. ಪ್ರಕರಣ ಇನ್ನೂ ವಿಚಾರಣೆಯ ಹಂತದಲ್ಲಿದೆ. ಪ್ರಕರಣದಲ್ಲಿ ಯಾರೊಬ್ಬರು ತಪ್ಪಿತಸ್ಥರೆಂದು ತಿಳಿದುಬಂದರೆ ಶಿಕ್ಷೆ ನೀಡಲಾಗುತ್ತದೆ ಎಂದು ತನಿಖೆಯ ಭಾಗವಾಗಿರುವ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಘಟನೆ ಸಂಬಂಧ ವಿದ್ಯಾರಣ್ಯಪುರ ಪೊಲೀಸರು ಐಪಿಸಿ ಸೆಕ್ಷನ್ 143 (ಕಾನೂನುಬಾಹಿರ ಸಭೆ), ಐಪಿಸಿ 323 (ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದು) ಐಪಿಸಿ 324 (ಅಪಾಯಕಾರಿ ಆಯುಧಗಳಿಂದ ಗಾಯಗೊಳಿಸುವುದು) ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿದ್ದಾರೆ.