ಬೆಂಗಳೂರು: ಎಟಿಎಂನಲ್ಲಿ 19 ಲಕ್ಷ ರೂ. ಕದ್ದಿದ್ದ ಭದ್ರತಾ ಸಿಬ್ಬಂದಿ ಬಂಧನ!
ತನ್ನ ಗೆಳತಿಯೊಂದಿಗೆ ನೆಲೆಸಲು ಎಟಿಎಂ ಕಿಯೋಸ್ಕ್‌ನಿಂದ 19.9 ಲಕ್ಷ ರೂಪಾಯಿ ಕಳ್ಳತನ ಮಾಡಿದ್ದ ಆರೋಪದ ಮೇಲೆ 23 ವರ್ಷದ ಭದ್ರತಾ ಸಿಬ್ಬಂದಿಯೊಬ್ಬನನ್ನು ವಿಲ್ಸನ್ ಗಾರ್ಡನ್ ಪೊಲೀಸರು ಸೋಮವಾರ ಬಂಧನಕ್ಕೊಳಪಡಿಸಿದ್ದಾರೆ.
Published: 30th November 2022 08:33 AM | Last Updated: 30th November 2022 02:24 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ತನ್ನ ಗೆಳತಿಯೊಂದಿಗೆ ನೆಲೆಸಲು ಎಟಿಎಂ ಕಿಯೋಸ್ಕ್‌ನಿಂದ 19.9 ಲಕ್ಷ ರೂಪಾಯಿ ಕಳ್ಳತನ ಮಾಡಿದ್ದ ಆರೋಪದ ಮೇಲೆ 23 ವರ್ಷದ ಭದ್ರತಾ ಸಿಬ್ಬಂದಿಯೊಬ್ಬನನ್ನು ವಿಲ್ಸನ್ ಗಾರ್ಡನ್ ಪೊಲೀಸರು ಸೋಮವಾರ ಬಂಧನಕ್ಕೊಳಪಡಿಸಿದ್ದಾರೆ.
ಬಂಧಿತನನ್ನು ಅಸ್ಸಾಂ ಮೂಲದ ದೀಪೋಂಕರ್ ನೊಮೊಸುದಾರ ಎಂದು ಗುರ್ತಿಸಲಾಗಿದೆ. ಆರು ತಿಂಗಳ ಹಿಂದೆ ಉದ್ಯೋಗ ನಿಮಿತ್ತ ನಗರಕ್ಕೆ ಬಂದಿದ್ದ. ವಿಲ್ಸನ್ ಗಾರ್ಡನ್‌ನ 13ನೇ ಕ್ರಾಸ್‌ನಲ್ಲಿರುವ ರಾಷ್ಟ್ರೀಕೃತ ಬ್ಯಾಂಕ್‌ನ ಎಟಿಎಂ ಕಿಯೋಸ್ಕ್‌ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಪಡೆದಿದ್ದ ದೀಪೋಂಕರ್, ನ.17 ರಂದು ನಗದು ಕಂಟೇನರ್ ಒಡೆದು 19.9 ಲಕ್ಷ ರೂ.ಗಳೊಂದಿಗೆ ಪರಾರಿಯಾಗಿದ್ದ. ಈ ಸಂಬಂಧ ಬ್ಯಾಂಕ್ ಮ್ಯಾನೇಜರ್ ಪ್ರಕರಣ ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದರು. ಈ ವೇಳೆ ದೀಪೋಂಕರ್ ಗ್ರಾಹಕರಂತೆ ನಟಿಸಿ ಕಿಯೋಸ್ಕ್‌ಗೆ ಪ್ರವೇಶಿಸಿ, ದೀಪಗಳನ್ನು ಸ್ವಿಚ್ ಆಫ್ ಮಾಡಿ ಕ್ಯಾಮೆರಾವನ್ನು ಮತ್ತೊಂದು ಕಡೆಗೆ ತಿರುಗಿಸಿರುವುದು ಕಂಡು ಬಂದಿತ್ತು. ಅದೇ ದಿನ, ದೀಪೋಂಕರ್ ನಗದಿನೊಂದಿಗೆ ಹೈದರಾಬಾದ್‌ಗೆ ತೆರಳಿದ್ದ. ಅಸ್ಸಾಂ ತಲುಪಲು ರೈಲು ಹತ್ತುವ ಮೊದಲು ಫೋನ್ ಮತ್ತು ಸಿಮ್ ಕಾರ್ಡ್ ಅನ್ನು ಎಸೆದಿದ್ದ ಎಂದು ತನಿಖೆಯಿಂದ ತಿಳಿದುಬಂದಿತ್ತು.
ಇದನ್ನೂ ಓದಿ: ಬೆಂಗಳೂರು: ಪ್ರತ್ಯೇಕ ಅಪಘಾತ; ನಾಲ್ವರ ಸಾವು
ಎಟಿಎಂನಲ್ಲಿ ಕದ್ದಿದ್ದ ಹಣದೊಂದಿಗೆ ರೆಸ್ಟೋರೆಂಟ್ ತೆರೆದು, ತಾನು ಪ್ರೀತಿಸಿದ್ದ ಯುವತಿಯೊಂದಿಗೆ ವಿವಾಹವಾಗಲು ಮುಂದಾಗಿತ್ತೆ. ಆದರೆ, ಪೊಲೀಸರು ಇದೀಗ ಆರೋಪಿಯನ್ನು ಬಂಧನಕ್ಕೊಳಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕದ್ದಿದ್ದ ಹಣದಲ್ಲಿ ಈಗಾಗಲೇ ದೀಪೋಂಕರ್ ರೂ.4 ಲಕ್ಷ ಹಣವನ್ನು ಖರ್ಚು ಮಾಡಿದ್ದು, ಉಳಿದ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ನೊಮೊಸುದಾರ ಈ ಹಿಂದೆ ಖಾಸಗಿ ಆಸ್ಪತ್ರೆಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡಿದ್ದ. ಎರಡು ತಿಂಗಳ ಹಿಂದೆ ಸೆಕ್ಯೂರಿಟಿ ಏಜೆನ್ಸಿಗೆ ಸೇರಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.