ಮೂವರು ರೈಲ್ವೆ ಹೊರಗುತ್ತಿಗೆ ನೌಕರರ ಬಂಧನ: 80 ಲಕ್ಷ ರೂ. ಮೌಲ್ಯದ ಡ್ರಗ್ಸ್ ವಶಕ್ಕೆ

ಡ್ರಗ್ಸ್ ದಂಧೆ ಮಾಡುತ್ತಿದ್ದ ಆರೋಪದ ಮೇಲೆ ರೈಲ್ವೆಯ ಮೂವರು ಹೊರಗುತ್ತಿಗೆ ನೌಕರರನ್ನು ಕೇಂದ್ರ ಅಪರಾಧ ದಳದ (ಸಿಸಿಬಿ) ಪೊಲೀಸರು ಬಂಧನಕ್ಕೊಳಪಡಿಸಿದ್ದು, ರೂ. 80 ಲಕ್ಷ ಮೌಲ್ಯದ ಡ್ರಗ್ಸ್'ನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಡ್ರಗ್ಸ್ ದಂಧೆ ಮಾಡುತ್ತಿದ್ದ ಆರೋಪದ ಮೇಲೆ ರೈಲ್ವೆಯ ಮೂವರು ಹೊರಗುತ್ತಿಗೆ ನೌಕರರನ್ನು ಕೇಂದ್ರ ಅಪರಾಧ ದಳದ (ಸಿಸಿಬಿ) ಪೊಲೀಸರು ಬಂಧನಕ್ಕೊಳಪಡಿಸಿದ್ದು, ರೂ. 80 ಲಕ್ಷ ಮೌಲ್ಯದ ಡ್ರಗ್ಸ್'ನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಆರೋಪಿಗಳನ್ನು ಬಪ್ಪಾ ಕರ್ಡೆ, ಪಿಂಟು ದಾಸ್ ಮತ್ತು ರಾಜೇಶ್ ಪಾಲ್ ಎಂದು ಗುರ್ತಿಸಲಾಗಿದೆ. ಮೂವರು ಈಶಾನ್ಯ ಗಡಿ ರೈಲ್ವೆ ಕೋಚಿಂಗ್ ಡಿಪೊನಲ್ಲಿ ಎಸಿ ಅಟೆಂಡರ್ ಹಾಗೂ (ಬೆಡ್ ರೋಲ್) ಮಲಗುವ ಕೋಣೆಯ ಅಂಟೆಂಡರ್‍ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ.

ಆರೋಪಿಗಳು ತಮಗೆ ನೀಡಲಾಗಿದ್ದ ಬೋಗಿಗಳಲ್ಲಿ ಅಸ್ಸಾಂನಿಂದ ಡ್ರಗ್ಸ್ ಸಾಗಿಸುತ್ತಿದ್ದು, ಡ್ರಗ್ಸ್‌ಗಳನ್ನು ಕೋಚ್‌ಗಳ ಲಾಕರ್‌ಗಳಲ್ಲಿ ಇಟ್ಟು ಬೈಯಪ್ಪನಹಳ್ಳಿ ರೈಲ್ವೆ ನಿಲ್ದಾಣದಲ್ಲಿ ವ್ಯಾಪಾರಿಗಳಿಗೆ ನೀಡುತ್ತಿದ್ದರೆನ್ನಲಾಗಿದೆ.

ಮೂವರಿಂದ ಸುಮಾರು 1.1 ಕೆಜಿ ಹಶೀಶ್ ಎಣ್ಣೆ ಮತ್ತು 6 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದ್ದು, ಆರೋಪಿಗಳನ್ನು ಬೈಯಪ್ಪನಹಳ್ಳಿ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

ಇದೊಂದು ದೊಡ್ಡ ದಂಧೆಯಾಗಿದ್ದು, ಇದೀಗ ಸಿಕ್ಕಿರುವ ಮೂವರು ಈ ದಂಧೆಯಲ್ಲಿರುವ ಸಣ್ಣ ಮೀನುಗಳಾಗಿದ್ದಾರೆಂಬ ಅನುಮಾನವಿದೆ. ಕಮಿಷನ್ ಆಧಾರದ ಮೇಲೆ ಡ್ರಗ್ಸ್ ಪೆಡ್ಲರ್ ಗಳ ಆದೇಶದಂದೆ ಅಸ್ಸಾಂನಿಂದ ಬೆಂಗಳೂರಿಗೆ ಡ್ರಗ್ಸ್ ಸಾಗಿಸುವ ಕೆಲಸ ಇವರು ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರಿಗಾಗಿ ಹುಡುಕಾಟ ಆರಂಬಭವಾಗಿದೆ. ಮೂವರ ಬಳಿಯಿದ್ದ ನಾಲ್ಕು ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆಯಲಾಗಿದ್ದು, ಪರಿಶೀಲನೆ ಬಳಿಕ ಮತ್ತಷ್ಟು ಮಾಹಿತಿಗಳು ತಿಳಿದುಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಬಂಧಿತ ಮೂವರು ಮಾರ್ಗ ಮಧ್ಯೆ ಇತರ ರೈಲು ನಿಲ್ದಾಣಗಳಲ್ಲಿ ದಂಧೆಕೋರರಿಗೆ ಮಾದಕ ದ್ರವ್ಯಗಳನ್ನು ತಲುಪಿಸುತ್ತಿದ್ದರು ಎಂದು ಶಂಕಿಸಲಾಗಿದೆ. ಇದೀಗ ಮೂವರ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com