ಬಂಧಿತ ಆರೋಪಿಗಳು
ಬಂಧಿತ ಆರೋಪಿಗಳು

ಶಿವಮೊಗ್ಗ ಗಲಭೆ ಪ್ರಕರಣ: ಮೂವರ ಬಂಧನ, ಪೊಲೀಸರಿಂದ ರೂಟ್ ಮಾರ್ಚ್

ಶಿವಮೊಗ್ಗದ ಸೀಗೆಹಟ್ಟಿ, ಭರ್ಮಪ್ಪ ನಗರದಲ್ಲಿ ಕಲ್ಲು ತೂರಾಟ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಪೊಲೀಸರು, ಗಲಾಟೆ ಮಾಡಿದ್ದ ಮೂವರನ್ನ ಬುಧವಾರ ಬಂಧನಕ್ಕೊಳಪಡಿಸಿದ್ದಾರೆ.

ಶಿವಮೊಗ್ಗ: ಶಿವಮೊಗ್ಗದ ಸೀಗೆಹಟ್ಟಿ, ಭರ್ಮಪ್ಪ ನಗರದಲ್ಲಿ ಕಲ್ಲು ತೂರಾಟ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಪೊಲೀಸರು, ಗಲಾಟೆ ಮಾಡಿದ್ದ ಮೂವರನ್ನ ಬುಧವಾರ ಬಂಧನಕ್ಕೊಳಪಡಿಸಿದ್ದಾರೆ. 

ಮಾರ್ಕೆಟ್ ಫೌಜಾನ್, ಅಜರ್ ಅಲಿಯಾಸ್ ಅಜ್ಜು, ಫರಾಜ್ ಬಂಧಿತ ಆರೋಪಿಗಳು. ಕಿಡಿಗೇಡಿಗಳು ಸೋಮವಾರ ರಾತ್ರಿ ಭರ್ಮಪ್ಪ ನಗರದಲ್ಲಿ ಪ್ರಕಾಶ್‌ ಎಂಬ ಯುವಕನ ತಲೆಗೆ ಕಲ್ಲು ಹೊಡೆದು, ಅವಾಚ್ಯ ಶಬ್ದಗಳನ್ನು ಕೂಗುತ್ತ ಬೈಕಿನಲ್ಲಿ ಪರಾರಿಯಾಗಿದ್ದರು.

ಕಿಡಿಗೇಡಿಗಳ ಅಸಭ್ಯ ವರ್ತನೆಯ ಕುರಿತು ಬೆನ್ನಿಗೆ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ದೂರಿನ ಆಧಾರದ ಮೇಲೆ ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ತನಿಖೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನು ಪ್ರಕರಣದಲ್ಲಿ ಭಾಗಿಯಾದ ಇಬ್ಬರು ತಲೆ ಮರೆಸಿಕೊಂಡಿದ್ದು ಅವರ ಪತ್ತೆ ಶೋಧ ಕಾರ್ಯ ಆರಂಭವಾಗಿದೆ.

ಇನ್ನು ಘಟನೆ ಬಳಿಕ ಎಚ್ಚೆತ್ತುಕೊಂಡಿರುವ ಪೊಲೀಸರು ಎಲ್ಲೆಡೆ ಬಿಗಿ ಭದ್ರತೆಯನ್ನು ನಿಯೋಜಿಸಿದ್ದಾರೆ. ಅಲ್ಲದೆ, ಗಾಂಧಿ ಬಜಾರ್, ಬಿಎಚ್ ರಸ್ತೆ, ಸೀಗೆ ಹಟ್ಟಿ ಹಾಗೂ ಹಳೆ ಶಿವಮೊಗ್ಗ ಪ್ರದೇಶಗಳಲ್ಲಿ ರೂಟ್ ಮಾರ್ಚ್ ಮಾಡಿದ್ದಾರೆ.

ರಾಮಣ ಶೆಟ್ಟಿ ಪಾರ್ಕ್, ಗಾಂಧಿ ಬಜಾರ್ ಹಾಗೂ ಓಟಿ ರಸ್ತೆಯಲ್ಲಿ ಡಿಎಆರ್ ತುಕಡಿಗಳು ಹಾಗೂ ಕೆಎಸ್ಆರ್​​ಪಿ ತುಕಡಿಯ 1000ಕ್ಕೂ ಹೆಚ್ಚು ಪೊಲೀಸರು ಈ ರೂಟ್ ಮಾರ್ಚ್'ನಲ್ಲಿ ಭಾಗಿಯಾಗಿದ್ದರು.

ಆರೋಪಿಗಳಿಂದ ದಾಳಿಗೊಳಗಾದ ಪ್ರಕಾಶ್ ಅವರು ಹೇಳಿಕೆ ನೀಡಿ, ಮೂವರು ಮುಸ್ಲಿಂ ಹುಡುಗರು ಬಂದು ಇದ್ದಕ್ಕಿದ್ದಂತೆ ನನ್ನ ಮೇಲೆ ಕಲ್ಲುಗಳು ಮತ್ತು ಇತರ ವಸ್ತುಗಳಿಂದ ಹಲ್ಲೆ ನಡೆಸಲು ಆರಂಭಿಸಿದರು. ಅದೃಷ್ಟವಶಾತ್ ಹೇಗೋ ನಾನು ಅಲ್ಲಿಂದ ತಪ್ಪಿಸಿಕೊಂಡು ಬಂದೆ. ಹಲ್ಲೆ ನಡೆಸಲು ಆರಂಭಿಸಿದ ಮೂವರು ನನ್ನನ್ನು ಆರ್'ಎಸ್ಎಸ್ ಗೂಂಡಾ ಹಾಗೂ ಇತರೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು. ನಾನು ಯಾವುದೇ ಸಂಘಟನೆಗೆ ಸೇರಿದವನಲ್ಲ ಅಥವಾ ಅವರೊಂದಿಗೆ ಯಾವುದೇ ನಂಟನ್ನೂ ಹೊಂದಿಲ್ಲ. ಮೂವರ ಜೊತೆಗೆ ನಾನು ಯಾವುದೇ ಶತ್ರುತ್ವವಾಗಲೀ, ನಂಟನ್ನಾಗಿಲೀ ಹೊಂದಿಲ್ಲ. ಇದ್ದಕ್ಕಿದ್ದಂತೆ ಬಂದು ದಾಳಿ ನಡೆಸಿದ್ದರು ಎಂದು ಹೇಳಿದ್ದಾರೆ. 

ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹೇಳಿಕೆ ನೀಡಿ, ಶಿವಮೊಗ್ಗದಲ್ಲಿ ಶಾಂತಿ ಕದಡುವ ಎರಡು ಘಟನೆಗಳು ನಡೆದಿವೆ. ಶಿವಮೊಗ್ಗ ಪೊಲೀಸರು ಈಗಾಗಲೇ ಮೂವರನ್ನು ವಶಕ್ಕೆ ಪಡೆದಿದ್ದು, ಅಗತ್ಯ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ. ಕೆಲವರು ಶಾಂತಿ ಕದಡಲು ಪ್ರಯತ್ನಿಸುತ್ತಿರುವ ಬಗ್ಗೆ ನಮಗೆ ಮಾಹಿತಿ ಇದೆ. ಈ ಸಂಬಂಧ ಪೊಲೀಸರು ಕ್ರಮ ಕೈಗೊಳ್ಳುತ್ತಾರೆಂದು ತಿಳಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com