ಕುಟುಂಬದ ದೀಪ ನಂದಿಸಿದ ಬೆಸ್ಕಾಂ ನಿರ್ಲಕ್ಷ್ಯ!

ಬೆಸ್ಕಾಂ ನಿರ್ಲಕ್ಷ್ಯಕ್ಕೆ ವಿದ್ಯುತ್ ತಂತಿ ತಗುಲಿ 23 ವರ್ಷದ ಯುವತಿ ಸಾವನ್ನಪ್ಪಿದ್ದು, ಯುವತಿಯ ಈ ಸಾವು ಇದೀಗ ಆಕೆಯ ಕುಟುಂಬದ ದೀಪವನ್ನೇ ಆರಿಸಿದೆ.
ಮೃತ ಯುವತಿ ಅಖಿಲಾ ಸೋಮಶೇಖರ್.
ಮೃತ ಯುವತಿ ಅಖಿಲಾ ಸೋಮಶೇಖರ್.

ಬೆಂಗಳೂರು: ಬೆಸ್ಕಾಂ ನಿರ್ಲಕ್ಷ್ಯಕ್ಕೆ ವಿದ್ಯುತ್ ತಂತಿ ತಗುಲಿ 23 ವರ್ಷದ ಯುವತಿ ಸಾವನ್ನಪ್ಪಿದ್ದು, ಯುವತಿಯ ಈ ಸಾವು ಇದೀಗ ಆಕೆಯ ಕುಟುಂಬದ ದೀಪವನ್ನೇ ಆರಿಸಿದೆ. 

ಕಳೆದ ತಿಂಗಳು ಬೆಂಗಳೂರಿನ ವೈಟ್‌ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯ ಸಿದ್ದಾಪುರ ಬಳಿ ದುರ್ಘಟನೆ ಸಂಭವಿಸಿತ್ತು. ಘಟನೆಯಲ್ಲಿ ಅಖಿಲಾ ಸೋಮಶೇಖರ್ ಎಂಬ ಯುವತಿ ಸಾವನ್ನಪ್ಪಿದ್ದಳು. 

ಯುವತಿಯ ತಂದೆ ನಿವೃತ್ತ ತೋಟಗಾರನಾಗಿದ್ದಾರೆ. 2 ವರ್ಷಗಳ ಕೋವಿಡ್ ಸಾಂಕ್ರಾಮಿಕ ರೋಗದ ಬಳಿಕ ಮೊದಲ ಬಾರಿಗೆ ಮನೆಯಲ್ಲಿ ಅದ್ದೂರಿಯಾಗಿ ದೀಪಾವಳಿ ಆಚರಿಸಲು ಸಿದ್ಧತೆ ನಡೆಸಿದ್ದೆವು. ಅಷ್ಟರಲ್ಲಾಗಲೇ ದುರಂತ ಸಂಭವಿಸಿತು ಎಂದು ಯುವತಿಯ ತಂದೆ ಸೋಮಶೇಖರ್ ಹೇಳಿದ್ದಾರೆ. 

ಬಿ.ಕಾಂ ಪೂರ್ಣಗೊಳಿಸಿದ್ದ ಅಖಿಲಾ ಸಂಗೀತ ಶಾಲೆಯಲ್ಲಿ ಕೆಲಸಕ್ಕೆ ಸೇರಿ ಕುಟುಂಬವನ್ನು ಸಲಹುತ್ತಿದ್ದಳು. ಕುಟುಂಬದಲ್ಲಿ ದುಡಿಯುವ ಏಕೈಕ ಕೈ ಎಂದರೆ ಅದು ಅಖಿಲಾ ಆಗಿದ್ದರು. ಆದರೆ, ಇದೀಗ ಅಖಿಲಾ ಅವರನ್ನು ಕಳೆದುಕೊಂಡ ಕುಟುಂಬ ಕಂಗಾಲಾಗಿದೆ. 

ಅಖಿಲಾ ಅವರ ಸಹೋದರ ಅಂಗವಿಕಲನಾಗಿದ್ದು, ಸಹೋದರನಿಗೆ ಶಿಕ್ಷಣ ಕೊಡಿಸುವ ಜವಾಬ್ದಾರಿಯನ್ನು ಅಖಿಲಾ ಹೊತ್ತುಕೊಂಡಿದ್ದರು. ಇದೀಗ ಆಕೆಯನ್ನು ಕಳೆದುಕೊಂಡಿರುವ ನಮಗೆ ದೀಪಾವಳಿ ಆಚರಿಸುವ ಮನಸ್ಸಿಲ್ಲ. ನೋವು ಮರೆಯಲು ಇನ್ನೂ ಬಹಳಷ್ಟು ಸಮಯ ಬೇಕು ಎಂದು ಸೋಮಶೇಖರ್ ತಿಳಿಸಿದ್ದಾರೆ. 

ಬಳಿಕ ದುರಂತವನ್ನು ಸ್ಮರಿಸಿದ ಅವರು, ಸೆಪ್ಟೆಂಬರ್ 5 ರಂದು ಪೊಲೀಸರಿಂದ ದೂರವಾಣಿ ಕರೆ ಬಂದಿತ್ತು. ನೀವು ನೀಡಿದ ದೂರಿನ ಆಧಾರದ ಮೇಲೆ ಜಾಹಿರಾತು ಸಂಸ್ಥೆಯ ಮೇಲೆ ಕ್ರಮ ಕೈಗೊಳ್ಳದ ಬೆಸ್ಕಾಂ ವಿರುದ್ಧ ಪ್ರಕರಣ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಹೇಳಿದರು. 

ಸ್ಕೂಟರ್ ನಲ್ಲಿ ಮನೆಗೆ ಹಿಂತಿರುಗುತ್ತಿದ್ದ ಮಗಳಿಗೆ ನೀರು ತುಂಬಿದ ರಸ್ತೆ ಎದುರಾಗಿದೆ. ಈ ವೇಳೆ ಮುಂದೆ ಸಾಗಲು ನೀರಿನಲ್ಲಿ ಕಾಲನ್ನು ಕೆಳಗೆ ಬಿಟ್ಟಿದ್ದಾಳೆ. ಈ ವೇಳೆ ವಿದ್ಯುತ್ ಶಾಕ್ ಹೊಡೆದಿದೆ. ಮಗಳ ಸಾವಿನ ಜವಾಬ್ದಾರಿಯನ್ನು ಕೇಬಲ್ ವೈರ್ ಬಿಟ್ಟಿದ್ದ ಜಾಹೀರಾತು ಸಂಸ್ಥೆ ಹೊತ್ತುಕೊಂಡಿದೆ. ಜಾಹೀರಾತು ಸಂಸ್ಥೆ ಪರಿಹಾರವಾಗಿ ರೂ.20 ಲಕ್ಷ ಚೆಕ್ ನೀಡಿದೆ. ಬಿಬಿಎಂಪಿಯಿಂದ ಇನ್ನೂ ಯಾವುದೇ ಪರಿಹಾರಗಳೂ ಬಂದಿಲ್ಲ. ನನಗೆ ಹಣ ಸಿಗಬಹುದು. ಆದರೆ ಹೋದ ನನ್ನ ಮಗಳು ಮರಳಿ ಬರುವುದಿಲ್ಲ ಎಂದು ಕಣ್ಣೀರು ಹಾಕಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com