ಬಿಎಂಟಿಸಿ ಬಸ್ ಹರಿದು ಮೃತಪಟ್ಟ ಬೆಂಗಳೂರು ವಿವಿ ವಿದ್ಯಾರ್ಥಿನಿ ಕುಟುಂಬಕ್ಕೆ 1.5 ಕೋಟಿ ರೂ. ಪರಿಹಾರಕ್ಕೆ ಒತ್ತಾಯ

ಬಿಎಂಟಿಸಿ ಬಸ್ ಹರಿದು ಮೃತಪಟ್ಟ ವಿದ್ಯಾರ್ಥಿನಿ ಕುಟುಂಬಕ್ಕೆ ರೂ.1.5 ಕೋಟಿ ಪರಿಹಾರ ನೀಡಬೇಕು ಎಂದು ಬೆಂಗಳೂರು ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.
ಬೆಂಗಳೂರು ವಿಶ್ವ ವಿದ್ಯಾಲಯ
ಬೆಂಗಳೂರು ವಿಶ್ವ ವಿದ್ಯಾಲಯ

ಬೆಂಗಳೂರು: ಬಿಎಂಟಿಸಿ ಬಸ್ ಹರಿದು ಮೃತಪಟ್ಟ ವಿದ್ಯಾರ್ಥಿನಿ ಕುಟುಂಬಕ್ಕೆ ರೂ.1.5 ಕೋಟಿ ಪರಿಹಾರ ನೀಡಬೇಕು ಎಂದು ಬೆಂಗಳೂರು ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ. 

ಕೆಲ ದಿನಗಳ ಹಿಂದೆ ವಿವಿ ಕ್ಯಾಂಪಸ್‍ನಲ್ಲಿ ಬಸ್ ಹತ್ತುತ್ತಿದ್ದ ವಿದ್ಯಾರ್ಥಿನಿ ಶಿಲ್ಪಾ ಎಂಬವರ ಮೇಲೆ ಬಿಎಂಟಿಸಿ ಬಸ್ ಹರಿದು ತೀವ್ರವಾಗಿ ಗಾಯಗೊಂಡಿದ್ದರು. ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಿಲ್ಪಾ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.

ಶಿಲ್ಪಾ ಅವರ ಮೇಲೆ ಬಸ್ ಹರಿದಾಗಲೇ ರೊಚ್ಚಿಗೆದ್ದಿದ್ದ ವಿವಿ ವಿದ್ಯಾರ್ಥಿಗಳು ಕ್ಯಾಂಪಸ್ ಒಳಗೆ ಸಾರ್ವಜನಿಕ ವಾಹನ ಸಂಚಾರ ರದ್ದುಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು. 

ಇದೀಗ ಶಿಲ್ಪಾ ಮೃತಪಟ್ಟಿರುವುದರಿಂದ ಮತ್ತೆ ಕೆರಳಿರುವ ವಿದ್ಯಾರ್ಥಿಗಳು ಮೃತ ವಿದ್ಯಾರ್ಥಿನಿ ಕುಟುಂಬಕ್ಕೆ ಒಂದೂವರೆ ಕೋಟಿ ರೂ.ಗಳ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.

ಸರ್ಕಾರ, ವಿವಿ ಹಾಗೂ ವಿದ್ಯಾರ್ಥಿ ದಲಿತ ಕುಟುಂಬಕ್ಕೆ ಸೇರಿದ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ತಲಾ ರೂ.50 ಲಕ್ಷ ಪರಿಹಾರ ನೀಡುವಂತೆ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ. 

ವಿಶ್ವವಿದ್ಯಾಲಯ, ಸರ್ಕಾರ ಮತ್ತು ಇಲಾಖೆಯಿಂದ ತಲಾ 50 ಲಕ್ಷ ರೂ ಪರಿಹಾರ ನೀಡುವಂತೆ ಒತ್ತಾಯಿಸಿದ್ದೇವೆ. ಅಕ್ಟೋಬರ್ 31 ರಂದು ಸಿಂಡಿಕೇಟ್ ಸಭೆ ನಡೆಯಲಿದ್ದು, ಸಭೆಯಲ್ಲಿ ಈ ಕುರಿತು ಪರಿಶೀಲನೆ ನಡೆಸಲಾಗುವುದು ಎಂದು ವಿವಿ ಭರವೆ ನೀಡಿದೆ ಎಂದು ಬೆಂಗಳೂರು ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟದ ಉಪಾಧ್ಯಕ್ಷ ಲೋಕೇಶ್ ರಾಮ್ ಅವರು ಹೇಳಿದ್ದಾರೆ. 

ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ.ಎಚ್.ಸುಧಾಕರ್ ಅವರು ಮಾತನಾಡಿ, ಸೋಮವಾರ ನಡೆಯುವ ಸಿಂಡಿಕೇಟ್ ಸಭೆಗೆ ಈ ವಿಚಾರವನ್ನೂ ಪಟ್ಟಿ ಮಾಡಲಾಗಿದೆ ಎಂದು ಖಚಿತಪಡಿಸಿದ್ದಾರೆ. 

ಶುಕ್ರವಾರದ ಸಭೆಯ ನಂತರ, ಬಿಯು ರಿಜಿಸ್ಟ್ರಾರ್ ಎಂ ಕೊಟ್ರೇಶ್ ಅವರು, ಉನ್ನತ ಶಿಕ್ಷಣದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದು, ಸಂತ್ರಸ್ತ ಕುಟುಂಬಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪರಿಹಾರ ನೀಡುವಂತೆ ಮನವಿ ಮಾಡಿದರು. 

ಸಭೆಯಲ್ಲಿ ಯಾವುದೇ ಸರ್ಕಾರದಿಂದ ಯಾವುದೇ ಅಧಿಕಾರಿಗಳು ಭಾಗಯಾಗದೆ ಇರುವುದು ನಿರಾಶಾದಾಯಕ ವಿಚಾರವಾಗಿದೆ. ಆದರೆ, ಮೃತ ವಿದ್ಯಾರ್ಥಿಯ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವುದರ ಜೊತೆಗೆ ಅವರ ಕುಟುಂಬದ ಒಬ್ಬ ವ್ಯಕ್ತಿಗೆ ಸರ್ಕಾರಿ ನೌಕರಿ ದೊರೆಯಲಿದೆ ಎಂಬ ವಿಶ್ವಾಸ ನಮಗಿದೆ ಎಂದು ಲೋಕೇಶ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com