ಪ್ರವೀಣ್ ನೆಟ್ಟಾರು ಕುಟುಂಬದ ಸದಸ್ಯರಿಗೆ ಸಿಎಂ ಕಚೇರಿಯಲ್ಲಿ ಕೆಲಸ: ಬೊಮ್ಮಾಯಿ

ಕರಾವಳಿಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೊಳಗಾಗಿದ್ದ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಕುಟುಂಬದ ಸದಸ್ಯರೊಬ್ಬರಿಗೆ ತಮ್ಮ ಕಚೇರಿಯಲ್ಲಿ ಕೆಲಸ ನೀಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಶನಿವಾರ ಘೋಷಣೆ ಮಾಡಿದ್ದಾರೆ.
ಪ್ರವೀಣ್‌ ನೆಟ್ಟಾರು
ಪ್ರವೀಣ್‌ ನೆಟ್ಟಾರು

ಬೆಂಗಳೂರು: ಕರಾವಳಿಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೊಳಗಾಗಿದ್ದ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಕುಟುಂಬದ ಸದಸ್ಯರೊಬ್ಬರಿಗೆ ತಮ್ಮ ಕಚೇರಿಯಲ್ಲಿ ಕೆಲಸ ನೀಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಶನಿವಾರ ಘೋಷಣೆ ಮಾಡಿದ್ದಾರೆ.

ದೊಡ್ಡಬಳ್ಳಾಪುರದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದ ವೇಳೆ ಸಿಎಂ ಬೊಮ್ಮಾಯಿ ಅವರು ಈ ಮಹತ್ವ ಘೋಷಣೆ ಮಾಡಿದ್ದಾರೆ. ತಮ್ಮ ಭಾಷಣವನ್ನು ಮುಗಿಸಿ ವೇದಿಕೆಯ ಮೇಲೆ ಕುತಿದ್ದ ಸಿಎಂ ಬಳಿಕ ಪುನಃ ಬಂದು ಈ ಘೋಷಣೆಯನ್ನು ಮಾಡಿದ್ದಾರೆ. ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಸರ್ಕಾರದ ನೆರವು ನೀಡುತ್ತೇವೆ. ಪ್ರವೀಣ್ ನೆಟ್ಟಾರು ಅವರು ಬಿಜೆಪಿ ಕಾರ್ಯಕರ್ತ. ಇದರಿಂದಾಗಿ ಕೆಲಸ ಕೊಡುವುದು ನಮ್ಮ ಕರ್ತವ್ಯ. ಸಿಎಂ ಕಚೇರಿಯಲ್ಲೇ ಕೆಲಸ ನೀಡುತ್ತೇನೆ ಎಂದು ಭರವಸೆ ನೀಡಿದರು.

ಪಕ್ಷದ ಹಿರಿಯ ನಾಯಕರ ಸಲಹೆ ಮೇರೆಗೆ ರ್ಯಾಲಿಯನ್ನು ರದ್ದುಗೊಳಿಸುವ ನಿರ್ಧಾರ ಕೈಗೊಂಡಿದ್ದರಿಂದ ಬಿಜೆಪಿ ತನ್ನನ್ನು ತಾನು ಕಾರ್ಯಕರ್ತರ ಪಕ್ಷ ಎಂದು ಸಾಬೀತುಪಡಿಸಿದೆ ಎಂದು ರ್ಯಾಲಿಯನ್ನು ಆಯೋಜಿಸಿದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾದ ಆರೋಗ್ಯ ಸಚಿವ ಡಾ ಕೆ ಸುಧಾಕರ್ ಹೇಳಿದರು.

ಈ ಹಿಂದೆ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಬಿಜೆಪಿ 25 ಲಕ್ಷ ರೂ. ಹಾಗೂ ಸರ್ಕಾರದಿಂದ 25 ಲಕ್ಷ ರೂ. ಪರಿಹಾರವನ್ನು ನೀಡಿತ್ತು. ಅಷ್ಟೇ ಅಲ್ಲದೇ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು 5 ಲಕ್ಷ ರೂ. ಪರಿಹಾರವನ್ನು ನೀಡಿದ್ದರು.

ಕಾರ್ಯಕ್ರಮದ ವೇದಿಕೆಯಲ್ಲಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹಾಗೂ ಸಚಿವ ಉಮೇಶ್ ಕತ್ತಿ ಅವರ ಚಿತ್ರವನ್ನು ಹಾಕುವ ಮೂಲಕ ಬಿಜೆಪಿ ಗೌರವ ಸಲ್ಲಿಸಿತ್ತು.

ಯಾರು ಈ ಪ್ರವೀಣ್ ನೆಟ್ಟಾರು?
ಜುಲೈ 26 ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ಪ್ರವೀಣ್ ನೆಟ್ಟಾರು ಅವರನ್ನು ತಂಡವೊಂದು ಹತ್ಯೆ ಮಾಡಿತ್ತು. ದಕ್ಷಿಣ ಕನ್ನಡ(Dakshina Kannada) ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಪೆರುವಾಜೆ ಕ್ರಾಸ್ ಬಳಿ ಅಕ್ಷಯ್ ಹೆಸರಿನ ಕೋಳಿ ಮಾಂಸದ ಅಂಗಡಿ ಹೊಂದಿದ್ದ ಬಿಜೆಪಿ ಯುವ ಮೋರ್ಚಾ ಸದಸ್ಯ 31 ವರ್ಷದ ಪ್ರವೀಣ್ ಕುಮಾರ್ ನೆಟ್ಟಾರು ಜುಲೈ 26 ರಂದು ರಾತ್ರಿ 8 ಗಂಟೆ ಸುಮಾರಿಗೆ ಅಂಗಡಿ ಮುಚ್ಚಿ ಮನೆ ಕಡೆ ಹೊರಟಿದ್ದರು. ಈ ವೇಳೆ ಬೈಕಿನಲ್ಲಿ ಬಂದಿದ್ದ ಮೂವರು ತಲ್ವಾರ್‍ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದರು. ತಕ್ಷಣವೇ ಪುತ್ತೂರು ಆಸ್ಪತ್ರೆಗೆ ದಾಖಲಿಸಿದರೂ ಕುತ್ತಿಗೆಯ ಭಾಗಕ್ಕೆ ತೀವ್ರ ಏಟು ಬಿದ್ದಿದ್ದ ಕಾರಣ ಪ್ರವೀಣ್ ಮೃತಪಟ್ಟಿದ್ದರು.

ಪ್ರವೀಣ್ ನೆಟ್ಟಾರು ಹತ್ಯೆಯಿಂದ ದಕ್ಷಿಣ ಕನ್ನಡದಲ್ಲೂ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲೂ ಬಿಜೆಪಿ ಕಾರ್ಯಕರ್ತರ ಆಕ್ರೋಶ ಭುಗಿಲೆದ್ದಿತ್ತು, ತನಿಖೆಯಲ್ಲಿ ಸರ್ಕಾರ ವಿಫಲವಾಗಿದೆ. ಕಾರ್ಯಕರ್ತರ ಹಿತ ಕಾಯಲು ಪಕ್ಷ ವಿಫಲವಾಗಿದೆ ಎಂದು ಆರೋಪಿಸಿ ಹಲವಾರು ಬಿಜೆಪಿ ಪದಾಧಿಕಾರಿಗಳು ಸರಣಿ ರಾಜೀನಾಮೆ ನೀಡಿದ್ದರು. ಇದರಿಂದಾಗಿ ಪಕ್ಷ ಹಾಗೂ ಸರ್ಕಾರವು ಮುಜುಗರ ಅನುಭವಿಸಬೇಕಾದ ಪರಿಸ್ಥಿತಿಯೂ ಉಂಟಾಗಿತ್ತು. ಬಿಜೆಪಿ ಕಾರ್ಯಕರ್ತರ ಪ್ರತಿಭಟನೆಯ ನಂತರ ಬಿಜೆಪಿ ಸರ್ಕಾರ ಜುಲೈ 28 ರಂದು ನಿಗದಿಯಾಗಿದ್ದ ‘ಜನೋತ್ಸವ’ವನ್ನು ರದ್ದುಗೊಳಿಸಿತು.

ಇದೀಗ ಸರ್ಕಾರ ಪ್ರವೀಣ್ ಕುಟುಂಬಕ್ಕೆ ಸರ್ಕಾರಿ ಉದ್ಯೋಗ ನೀಡುವ ಮೂಲಕ ಕುಟುಂಬದ ಪರ ನಿಂತಿದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com