ವಿಧಾನಸಭಾ ಚುನಾವಣೆ: ಸಿವಿಜಿಲ್ ಆ್ಯಪ್ ಬಳಸಿ ಅಕ್ರಮ ಬಯಲು ಮಾಡಿ!

ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಸಿವಿಜಿಲ್ ಆ್ಯಪ್'ನ್ನು ಅಭಿವೃದ್ಧಿಪಡಿಸಲಾಗಿದ್ದು, ಈ ಆ್ಯಪ್ ಬಳಸಿ ಅಕ್ರಮಗಳ ಬಯಲು ಮಾಡುವಂತೆ ಜನತೆಗೆ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಅವರು ಮನವಿ ಮಾಡಿಕೊಂಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಸಿವಿಜಿಲ್ ಆ್ಯಪ್'ನ್ನು ಅಭಿವೃದ್ಧಿಪಡಿಸಲಾಗಿದ್ದು, ಈ ಆ್ಯಪ್ ಬಳಸಿ ಅಕ್ರಮಗಳ ಬಯಲು ಮಾಡುವಂತೆ ಜನತೆಗೆ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಅವರು ಮನವಿ ಮಾಡಿಕೊಂಡಿದ್ದಾರೆ.

ಮತ ಹಾಕುವಂತೆ ಜನರನ್ನು ಓಲೈಸಲು ಯಾವುದೇ ವ್ಯಕ್ತಿ ಉಡುಗೊರೆ, ಹಣ ನೀಡುತ್ತಿರುವುದು ಕಂಡು ಬಂದಿದ್ದೇ ಆದರೆ, ಜನತೆ ಇದರ ವಿಡಿಯೋ ಹಾಗೂ ಫೋಟೋಗಳನ್ನು ತೆಗೆದುಕೊಂಡು ಆ್ಯಪ್ ನಲ್ಲಿ ಅಪ್ಲೋಡ್ ಮಾಡಬೇಕು. ಮಾಹಿತಿ ಪಡೆದ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಳ್ಳುತ್ತಾರೆಂದು ಹೇಳಿದ್ದಾರೆ.

ಯಲಹಂಕ ಬಿಬಿಎಂಪಿ ವಲಯದ ಆರ್‌ಡಬ್ಲ್ಯುಎಗಳ ಸಭೆ ಶನಿವಾರ ನಡೆಯಿತು. ಸಭೆಯಲ್ಲಿ ಮಾತನಾಡಿದ ತುಷಾರ್ ಗಿರಿನಾಥ್ ಅವರು, ಮತದಾನದ ಪ್ರಮಾಣ ಸುಧಾರಿಸಲು ಆರ್‌ಡಬ್ಲ್ಯುಎಗಳ ಪ್ರತಿ ಮತವು ಮಹತ್ವದ್ದಾಗಿದೆ, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಪದಾಧಿಕಾರಿಗಳು ತಮ್ಮ, ತಮ್ಮ ಅಪಾರ್ಟ್'ಮೆಂಟ್ ಗಳಲ್ಲಿ ಎಲ್ಲರಿಗೂ ಮತದಾನದ ಪ್ರಾಮುಖ್ಯತೆ ಬಗ್ಗೆ ತಿಳಿವಳಿಕೆ ನೀಡಿ ತಪ್ಪದೆ ಮತದಾನ ಮಾಡುವಂತೆ ಪ್ರೇರೇಪಿಸಬೇಕು ಎಂದು ಮನವಿ ಮಾಡಿಕೊಂಡರು.

ಮತಗಟ್ಟೆಗಳಲ್ಲಿ ಎಲ್ಲಾ ಸೌಲಭ್ಯ ಕಲ್ಪಿಸಲಾಗುವುದು. ಮತದಾರರ ಸಹಾಯವಾಣಿ ಆ್ಯಪ್ ಮತದಾರರಿಗೆ ಅವರ ಮತಗಟ್ಟೆಯ ವಿವರಗಳನ್ನು ನೀಡುತ್ತದೆ ಎಂದು ಹೇಳಿದರು.

ಸೂಕ್ತ ಕಾರಣವಿಲ್ಲದೇ ಹಲವರಿಗೆ ಇ ಪೇಮೆಂಟ್ ಮೂಲಕ ಹಣ ವರ್ಗಾವಣೆಯಾದರೆ ಈ ಕುರಿತು ಬ್ಯಾಂಕ್ ಮೂಲಕ ಮಾಹಿತಿ ಪಡೆದು ತನಿಖೆ ನಡೆಸಿ ಕ್ರಮಕೈಗೊಳ್ಳಲಾಗುತ್ತದೆ. ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ಚುನಾವಣಾ ಅಕ್ರಮಗಳ ಬಗ್ಗೆ ವಿಚಕ್ಷಣಾ ದಳ ಜಾಗೃತಿ ವಹಿಸಿದೆ. ಒಂದೇ ಅಕೌಂಟ್ ನಿಂದ ಸಮರ್ಪಕ ಕಾರಣವಿಲ್ಲದೇ ಹವು ಜನರಿಗೆ ಹಣ ವರ್ಗಾವಣೆ ಮಾಡುವುದು ಕೂಡ ಅಕ್ರಮವಾಗಿದೆ.

ಈ ಕುರಿತು ಬ್ಯಾಂಕ್ ಸೇರಿದಂತೆ ಸಂಬಂಧಪಟ್ಟ ಸಂಸ್ಥೆಗಳು ಮಾಹಿತಿ ನೀಡುವಂತೆ ಸೂಚಿಸಿದ್ದು, ಅಕ್ರಮವಾಗಿ ಹಣ ವರ್ಗಾವಣೆ ಮಾಡಿದವರ ವಿರುದ್ಧ ಮೊಕದ್ದಮೆ ದಾಖಲು ಮಾಡಿ ತನಿಖೆ ನಡೆಸಲಾಗುವುದು ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com