ನಾಪತ್ತೆಯಾಗಿದ್ದ ಡೆಲ್ಲಿ ಕ್ಯಾಪಿಟಲ್ಸ್ ಕ್ರಿಕೆಟ್ ಟೀಂ ಕಿಟ್'ಗಳು ಬೆಂಗಳೂರಿನಲ್ಲಿ ಪತ್ತೆ: ಇಬ್ಬರ ಬಂಧನ

ಇತ್ತೀಚೆಗೆ ಐಪಿಎಲ್ ಪಂದ್ಯ ಮುಗಿದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ಕ್ರಿಕೆಟ್ ತಂಡ ಆಟಗಾರರ ಕ್ರಿಕೆಟ್ ಕಿಟ್ ಗಳನ್ನು ವಿಮಾನ ನಿಲ್ದಾಣಕ್ಕೆ ಸಾಗಿಸುವಾಗ ಕೆಲ ಕಿಟ್ ಗಳನ್ನು ಕಳವು ಮಾಡಿದ್ದ ಇಬ್ಬರನ್ನು ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಶನಿವಾರ ಬಂಧನಕ್ಕೊಳಪಡಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಇತ್ತೀಚೆಗೆ ಐಪಿಎಲ್ ಪಂದ್ಯ ಮುಗಿದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ಕ್ರಿಕೆಟ್ ತಂಡ ಆಟಗಾರರ ಕ್ರಿಕೆಟ್ ಕಿಟ್ ಗಳನ್ನು ವಿಮಾನ ನಿಲ್ದಾಣಕ್ಕೆ ಸಾಗಿಸುವಾಗ ಕೆಲ ಕಿಟ್ ಗಳನ್ನು ಕಳವು ಮಾಡಿದ್ದ ಇಬ್ಬರನ್ನು ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಶನಿವಾರ ಬಂಧನಕ್ಕೊಳಪಡಿಸಿದ್ದಾರೆ.
    
ಕೆಂಗೇರಿ ಸಮೀಪದ ಚಳ್ಳಘಟ್ಟದ ರಾಜರಾಜೇಶ್ವರಿ ನಗರದ ಚೆಲುವರಾಜು ಹಾಗೂ ಸಂಪಂಗಿ ರಾಮನಗರದ ಸುಧಾಂಶು ಕುಮಾರ್ ನಾಯ್ಕ್ ಬಂಧಿತ ಆರೋಪಿಗಳಾಗಿದ್ದಾರೆ.

ಆರೋಪಿಗಳಿಂದ 16 ಲಕ್ಷ ರೂಪಾಯಿ ಮೌಲ್ಯದ ಹನ್ನೆರಡು ಬ್ಯಾಟ್‌ಗಳು, 18 ಚೆಂಡುಗಳು, ನಾಲ್ಕು ಜೊತೆ ಹ್ಯಾಂಡ್ ಗ್ಲೌಸ್, ಮೂರು ಜೊತೆ ಲೆಗ್ ಪ್ಯಾಡ್‌ಗಳು, ಎರಡು ಥೈ ಪ್ಯಾಡ್, ಎರಡು ಹೆಲ್ಮೆಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಮೂರು ದಿನಗಳ ಹಿಂದೆ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್'ಸಿಬಿ ವಿರುದ್ಧ ಪಂದ್ಯ ಮುಗಿಸಿ ದೆಹಲಿಗೆ ತೆರಳುವಾಗ ಆಟಗಾರರ ಕ್ರಿಕೆಟ್ ಕಿಟ್ ಗಳು ಕಳ್ಳತನವಾಗಿದ್ದವು. ದೆಹಲಿಗೆ ತಲುಪಿದ ಬಳಿಕ ತಮ್ಮ ಕಿಟ್ ಗಳನ್ನು ಆಟಗಾರರು ಪರಿಶೀಲಿಸಿದಾಗ ಕಳ್ಳತನ ವಿಚಾರ ಬೆಳಕಿಗೆ ಬಂದಿದೆ.

ಈ ಬಗ್ಗೆ ಕಬ್ಬನ್ ಪಾರ್ಕ್ ಠಾಣೆಗೆ ಎಕ್ಸ್'ಪ್ರೆಸ್ ಫ್ಲೈಟ್ ಸಿಸ್ಟಮ್ ಇಂಡಿಯಾ ಪ್ರೈ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಆನಂದ ಅಗರವಾಲಾ ಅವರು ದೂರು ನೀಡಿದ್ದಾರೆ.

ಈ ಬಗ್ಗೆ ತನಿಖೆ ನಡೆಸಿದ್ದ ಪೊಲೀಸರು ತಾಂತ್ರಿಕ ಮಾಹಿತಿ ಆಧರಿಸಿ ವಿಮಾನ ನಿಲ್ದಾಣಕ್ಕೆ ಟಾಟಾ ಇಂಟ್ರಾದಲ್ಲಿ ಕಿಟ್ ಗಳನ್ನು ಸಾಗಿಸುತ್ತಿದ್ದಾಗ ಕಳವು ಮಾಡಿದ್ದ ಆ ವಾಹನದ ಚಾಲಕ ಚೆಲುವರಾಜು ಹಾಗೂ ಕೊರಿಯರ್ ಬಾಯ್ ಸುಧಾಂಶುನನ್ನು ಬಂಧಿಕ್ಕೊಳಪಡಿಸಿದ್ದಾರೆ.

ಕ್ರಿಕೆಟ್ ಆಟ ಆಡುವ ಹುಚ್ಚಿನಿಂದ ಕಳವು ಮಾಡಿದ್ದಾಗಿ ಆರೋಪಿಗಳು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ. ಕದ್ದ ಕಿಟ್ ಗಳನ್ನು ತಮ್ಮ ಮನೆಗಳಲ್ಲಿ ಆರೋಪಿಗಳು ಇಟ್ಟಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡ ನಾಯಕ ಡೇವಿಡ್ ವಾರ್ನರ್, ರೀಪಲ್ ಪಾಟೇಲ್ ಹಾಗೂ ಫಿಲಿಪ್ಸ್ ಸ್ಲಾಟ್ ಸೇರಿದಂತೆ 6 ಆಟಗಾರರ ಕಿಟ್ ಗಳನ್ನು ಆರೋಪಿಗಳು ಕಳ್ಳತನ ಮಾಡಿದ್ದರು ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com