

ಮೈಸೂರು: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಮೈಸೂರಿನಲ್ಲಿ ರೋಡ್ ಶೋ ನಡೆಸುವಾಗ ಜನರ ಗುಂಪಿನಿಂದ ಮೊಬೈಲ್ ಒಂದು ತೂರಿಬಂದಿದೆ. ನಗರದ ಚಿಕ್ಕಗಡಿಯಾರದ ಬಳಿ ಮೋದಿ ಜನರತ್ತ ಕೈ ಬೀಸುತ್ತಿದ್ದಾಗ ಅವರತ್ತ ಹೂವಿನೊಂದಿಗೆ ಮೊಬೈಲ್ ಒಂದನ್ನು ಎಸೆಯಲಾಗಿದೆ. ಅದು ತೆರೆದ ವಾಹನದ ಮೇಲೆ ಬಂದು ಬಿದ್ದಿದೆ. ಇದನ್ನು ಪ್ರಧಾನಿ ನರೇಂದ್ರ ಮೋದಿ ಕೂಡಾ ಗಮನಿಸಿರುವುದು ವಿಡಿಯೋದಲ್ಲಿದೆ.
ಯಾರೋ ಆಕಸ್ಮಿಕವಾಗಿ ಮೊಬೈಲ್ ಎಸೆದಿರುವುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಯಾವುದೇ ದುರುದ್ದೇಶ ಇಲ್ಲದ ಮಹಿಳಾ ಕಾರ್ಯಕರ್ತರೊಬ್ಬರು ಪ್ರಧಾನಿ ಮೋದಿ ನೋಡಿದ ಸಂತೋಷದಲ್ಲಿ ಮೊಬೈಲ್ ಎಸೆದಿದ್ದಾರೆ. ಪ್ರಧಾನಿ ಎಸ್‌ಪಿಜಿ ರಕ್ಷಣೆಯಲ್ಲಿದ್ದರು. ಮೊಬೈಲ್ ಎಸೆದ ಮಹಿಳೆ ಬಿಜೆಪಿ ಕಾರ್ಯಕರ್ತೆ. ನಂತರ ಎಸ್‌ಪಿಜಿ ಸಿಬ್ಬಂದಿ ಮೊಬೈಲ್ ನ್ನು ಆಕೆಗೆ ಹಿಂದಿರುಗಿಸಿದರು ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಅಲೋಕ್ ಕುಮಾರ್ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಪ್ರಧಾನಿ ಮೋದಿ ಅವರ ರೋಡ್‌ಶೋ ನಗರದ ವಿವಿಧ ಭಾಗಗಳಲ್ಲಿ ಸಾಗಿತು. ರೋಡ್ ಶೋ ವೇಳೆ ಪ್ರಧಾನಿಯವರು ಮೈಸೂರಿನ ಸಾಂಪ್ರದಾಯಿಕ 'ಪೇಟಾ' ಮತ್ತು ಕೇಸರಿ ಶಾಲನ್ನು ಧರಿಸಿದ್ದರು. ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಅಪಾರ ಸಂಖ್ಯೆಯ ಜನರತ್ತ ಕೈಬೀಸಿದರು. ಬಿಜೆಪಿ ಧ್ವಜಗಳು, ಪುಷ್ಪಗುಚ್ಛಗಳು ಮತ್ತು ಪ್ರಧಾನಿ ಮೋದಿಯವರ ಪೋಸ್ಟರ್‌ಗಳು ಮತ್ತು ಕಟೌಟ್‌ಗಳು ರಸ್ತೆಗಳಲ್ಲಿ ರಾರಾಜಿಸುತ್ತಿದ್ದವು.