ಗರ್ಭಿಣಿ ಮಹಿಳೆಗೆ ಲೈಂಗಿಕ ಕಿರುಕುಳ, ಥಳಿತ: ಆರೋಪಿ ಬಂಧನ

ಗರ್ಭಿಣಿ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿ, ಥಳಿಸಿರುವ ಘಟನೆಯೊಂದು ಕೋನಪ್ಪನ ಅಗ್ರಹಾರದಲ್ಲಿ ಶನಿವಾರ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಗರ್ಭಿಣಿ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿ, ಥಳಿಸಿರುವ ಘಟನೆಯೊಂದು ಕೋನಪ್ಪನ ಅಗ್ರಹಾರದಲ್ಲಿ ಶನಿವಾರ ನಡೆದಿದೆ.

ಟೆಕ್ ಪಾರ್ಕ್‌ನ ಪ್ರಥಮ ಚಿಕಿತ್ಸಾ ಕೇಂದ್ರದಲ್ಲಿ ಸ್ಟಾಫ್ ನರ್ಸ್‌ ಆಗಿ ಕೆಲಸ ಮಾಡುತ್ತಿದ್ದ 32 ವರ್ಷದ ಗರ್ಭಿಣಿ ಮಹಿಳೆಯೊಬ್ಬರಿಗೆ ಕಾಮುಕನೊಬ್ಬ ಲೈಂಗಿಕ ಕಿರುಕುಳ ನೀಡಿ, ಥಳಿಸಿದ್ದಾನೆ. ಪ್ರಕರಣ ಸಂಬಂಧ ಆರೋಪಿಯನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದು, ಆರೋಪಿ ಇದೀಗ ನ್ಯಾಯಾಂಗ ಬಂಧನದಲ್ಲಿದ್ದಾನೆ.

ಸಂತ್ರಸ್ತ ಮಹಿಳೆ ಆಡುಗೋಡಿ ನಿವಾಸಿಯಾಗಿದ್ದು, 6 ತಿಂಗಳ ಗರ್ಭಿಣಿಯಾಗಿದ್ದಾರೆ. ಇಲೆಕ್ಟ್ರಾನಿಕ್ಸ್ ಸಿಟಿಯ ವೆಲಂಕಣಿ ಸರ್ಕಲ್‌ನಲ್ಲಿರುವ ತನ್ನ ಕಚೇರಿಯಿಂದ ಮನೆಗೆ ಹಿಂದಿರುಗುತ್ತಿದ್ದಾಗ ರಾತ್ರಿ 7.40 ರಿಂದ 8 ಗಂಟೆಯ ನಡುವೆ ಈ ಘಟನೆ ನಡೆದಿದೆ.

ಕಾಲ್ನಡಿಗೆ ಮೂಲಕ ಮನೆಗೆ ಹೋಗುತ್ತಿದ್ದ ಮಹಿಳೆಯ ಹಿಂದೆ ಬಂದಿರುವ ಕಾಮುಕ ಡ್ರಾಪ್ ನೀಡುವುದಾಗಿ ಹೇಳಿದ್ದಾನೆ. ಇದಕ್ಕೆ ಮಹಿಳೆ ನಿರಾಕರಿಸಿದ್ದಾರೆ, ಬಳಿಕ ಆರೋಪಿ ತನ್ನೊಂದಿಗೆ ಸ್ವಲ್ಪ ಸಮಯ ಕಳೆದರೆ 1 ಲಕ್ಷ ರೂ. ನೀಡುವುದಾಗಿ ಹೇಳಿದ್ದಾನೆ. ಈ ವೇಳೆ ಮಹಿಳೆ ಎಚ್ಚರಿಕೆ ನೀಡಿ. ಮುಂದೆ ಸಾಗಿದ್ದಾರೆ.

ನಂತರವೂ ಮಹಿಳೆಯನ್ನು ಹಿಂಬಾಲಿಸಿದ ಆರೋಪಿ, ಕಿರುಕುಳ ನೀಡಿದ್ದಾನೆ. ಇದರಿಂದ ಕುಪಿತಗೊಂಡ ಮಹಿಳೆ, ಆತನಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ಇದಕ್ಕೆ ಪ್ರತೀಕಾರವಾಗಿ ಆರೋಪಿ ಮಹಿಳೆಯ ಮುಖಕ್ಕೆ ಹಲವು ಬಾರಿ ಹೊಡೆದು ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಬಳಿಕ ಮಹಿಳೆ ಸಹೋದ್ಯೋಗಿಯೊಬ್ಬರ ಸಹಾಯ ಕೋರಿದ್ದು, ಸಹೋದ್ಯೋಗಿಗಳು ನೆರವಿಗೆ ಧಾವಿಸಿ, ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಇದು ಮೆಡಿಕೋ-ಲೀಗಲ್ ಪ್ರಕರಣವಾದ್ದರಿಂದ ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದೀಗ ಮಹಿಳೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಸಿಸಿಟಿವಿ ಕ್ಯಾಮೆರಾಗಳು ಆರೋಪಿ ಪತ್ತೆಗೆ ನಮಗೆ ಸಹಾಯ ಮಾಡಿತು. ಆತ ಚಾಲಕನಾಗಿದ್ದು, ಕುಡಿದು ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರೋಪಿಯ ವಿರುದ್ಧ ಲೈಂಗಿಕ ಕಿರುಕುಳ (IPC 354A), ಹಿಂಬಾಲಿಸುವುದು (IPC 354D), ಮಹಿಳೆಯ ಮೇಲಿನ ದೌರ್ಜನ್ಯ ಅಥವಾ ಕ್ರಿಮಿನಲ್ ಬಲವಂತ (IPC 354) ಮತ್ತು ನೋವುಂಟು ಮಾಡಿದ (IPC 323) ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com